ADVERTISEMENT

ಕಲಾಮಂದಿರ ಮುಂಭಾಗ ಪ್ರತಿಮೆ ಸ್ಥಾಪಿಸಿ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್

ಗುಂಡೂರಾಯರ ನೆನಪಿನಂಗಳ ಕಾರ್ಯಕ್ರಮದಲ್ಲಿ ಮನವಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 13:22 IST
Last Updated 28 ಸೆಪ್ಟೆಂಬರ್ 2020, 13:22 IST
ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಜನ್ಮದಿನೋತ್ಸವದ ಅಂಗವಾಗಿ ಮೈಸೂರಿನ ಕರ್ನಾಟಕ ಕಲಾಮಂದಿರದ ಆವರಣದಲ್ಲಿ ಗುಂಡೂರಾಯರ ನೆನಪಿನಂಗಳ ಕಾರ್ಯಕ್ರಮವನ್ನು ಆಚರಿಸಲಾಯಿತು
ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಜನ್ಮದಿನೋತ್ಸವದ ಅಂಗವಾಗಿ ಮೈಸೂರಿನ ಕರ್ನಾಟಕ ಕಲಾಮಂದಿರದ ಆವರಣದಲ್ಲಿ ಗುಂಡೂರಾಯರ ನೆನಪಿನಂಗಳ ಕಾರ್ಯಕ್ರಮವನ್ನು ಆಚರಿಸಲಾಯಿತು   

ಮೈಸೂರು: ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಜನ್ಮದಿನೋತ್ಸವದ ಅಂಗವಾಗಿ ಕರ್ನಾಟಕ ಕಲಾಮಂದಿರದ ಆವರಣದಲ್ಲಿ ಗುಂಡೂರಾಯರ ನೆನಪಿನಂಗಳ ಕಾರ್ಯಕ್ರಮವನ್ನು ಗುಂಡೂರಾವ್ ಅಭಿಮಾನಿಗಳ ಬಳಗದ ವತಿಯಿಂದ ಆಚರಿಸಲಾಯಿತು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರು ಮಾತನಾಡಿ, ಗುಂಡೂರಾಯರ ಕೊಡುಗೆ ಕರ್ನಾಟಕ ರಾಜ್ಯಕ್ಕೆ ಅಪಾರವಾಗಿದೆ. ಬಡವರ್ಗದವರ ಆರ್ಥಿಕ ಪರಿಸ್ಥಿತಿ ವೃದ್ಧಿಗೆ, ಲಕ್ಷಾಂತರ ಮಂದಿ ಸ್ವಾಭಿಮಾನಿಯಾಗಿ ದುಡಿಯಲು ಅವರು ಪ್ರೇರೇಪಿಸಿದ್ದಾರೆ ಎಂದರು.

ಕುಗ್ರಾಮದಲ್ಲಿರುವ ಬಡವರಿಗೆ ಉಚಿತ ವಿದ್ಯುತ್ ಯೋಜನೆ, ಬೆಂಗಳೂರಿಗೆ ಕಾವೇರಿ ನೀರು ಸಮರ್ಪಕ ಪೂರೈಕೆ, ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಮುಖ್ಯಮಂತ್ರಿಯಾಗಿ ಅನುಷ್ಠಾನಗೊಳಿಸಿದ್ದಾರೆ ಎಂದು ನೆನಪಿಸಿಕೊಂಡರು.

ADVERTISEMENT

ಸಮಾಜಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ಯಶಸ್ವಿಯಾಗಿ ನೆರವೇರಲು ಗುಂಡೂರಾಯರ ಚಿಂತನೆ ಮತ್ತು ತಾಂತ್ರಿಕ ಪರಿಕಲ್ಪನೆಯೇ ಮುಖ್ಯವಾಗಿದೆ. ಇದಕ್ಕೆ ಇಲ್ಲಿನ ಕರ್ನಾಟಕ ಕಲಾಮಂದಿರ ಉದಾಹರಣೆ ಎಂದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ದೇವಸ್ಥಾನದಲ್ಲಿ ಕೆಲಸ ಮಾಡುವ ಅರ್ಚಕರಿಗೆ, ಪುರೋಹಿತರಿಗೆ ತಸ್ತೀಕ್‌ ಯೋಜನೆ ಜಾರಿಗೆ ತಂದದ್ದೆ ಗುಂಡೂರಾಯರು. ಶಿಕ್ಷಣ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳ ಸಂಘ ಸಂಸ್ಥೆಗಳಿಗೆ ಅತಿ ಹೆಚ್ಚು ನಿವೇಶನ ಮಂಜೂರು ಮಾಡಿದ್ದಾರೆ. ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೂ ಕಾರಣರಾಗಿದ್ದಾರೆ ಎಂದರು.

ಲಕ್ಷಾಂತರ ಮಂದಿ ಕಲಾವಿದರ ಕಲೆಯ ಪ್ರದರ್ಶನಕ್ಕೆ ಅವಕಾಶ ನೀಡಿ ದುಡಿಮೆಯ ದಾರಿ ತೋರಿದ ಕಲಾಮಂದಿರದಲ್ಲಿ ಗುಂಡೂರಾಯರ ಪ್ರತಿಮೆಯನ್ನು ಸ್ಥಾಪಿಸಲು ರಾಜ್ಯಸರ್ಕಾರ ಮುಂದಾಗಬೇಕು ಎಂದರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡ ಹರೀಶ್ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಚನ್ನಪ್ಪ, ನ೦.ಶ್ರೀಕಾಂತ್ ಕುಮಾರ್, ಗುಂಡೂರಾವ್ ಅಭಿಮಾನಿ ಬಳಗದ ಅಧ್ಯಕ್ಷ ವಿನಯ್ ಕಣಗಾಲ್, ಅಜಯ್ ಶಾಸ್ತ್ರಿ, ಪಾಲಿಕೆ ಮಾಜಿ ಸದಸ್ಯ ಎಂ.ಕೆ.ಅಶೋಕ್, ಯುವ ಮುಖಂಡರಾದ ಸಿ.ಎಸ್.ರಘು, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಬಸಪ್ಪ, ವೀಣಾ, ವೆಂಕಟೇಶ್, ರಾಕೇಶ್ ಕುಂಚಿಟಿಗ, ಮೈಕ್ ಚಂದ್ರು, ಬಾಲಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.