
ಅರಕಲಗೂಡು: ತಾಲ್ಲೂಕಿನ ಕಸಬಾ ಹೋಬಳಿ ನೈಗೆರೆ ಕೊಪ್ಪಲು ಗ್ರಾಮದ ರೈತ ರಾಜೇಗೌಡ ತಾವು ಸಾಕಿದ್ದ ಐದು ಹಳ್ಳಿಕಾರ್ ತಳಿ ಹೋರಿಗಳನ್ನು ಶುಕ್ರವಾರ ಅದ್ದೂರಿ ಮೆರವಣಿಗೆ ನಡೆಸಿ ಚುಂಚನಕಟ್ಟೆ ಜಾತ್ರೆಗೆ ಕರೆದೊಯ್ದರು.
ಹೋರಿಗಳನ್ನು ಅಲಂಕರಿಸಿ ನಾದಸ್ವರ, ಡಿಜೆಯೊಂದಿಗೆ ಗ್ರಾಮದಿಂದ ಗ್ರಾಮಸ್ಥರು ಹಾಗೂ ಕುಟುಂಬದವರೊಂದಿಗೆ ಮೆರವಣಿಗೆಯಲ್ಲಿ ಹೋರಿಗಳನ್ನ ಪಟ್ಟಣಕ್ಕೆ ಕರೆತರಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಅನಕೃ ವೃತ್ತಕ್ಕೆ ತೆರಳಿ ಅಲ್ಲಿಂದ ವಾಹನಗಳಲ್ಲಿ ಹೋರಿಗಳನ್ನು ಜಾತ್ರೆಗೆ ಕರೆದೊಯ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿಕ ರಾಜೇಗೌಡ, ‘ಹಳ್ಳಿಕಾರ್ ತಳಿಗಳ ಹೋರಿಗಳನ್ನು ಸಾಕುವುದು ನಮ್ಮ ಹವ್ಯಾಸವಾಗಿದೆ. ಲಾಭ, ನಷ್ಟಗಳನ್ನು ಯೋಚಿಸದೆ ಕಳೆದ 30 ವರ್ಷಗಳಿಂದ ಈ ಕಾರ್ಯ ನಡೆಸುತ್ತಿದ್ದೇನೆ. ಚೆನ್ನಾಗಿ ಸಾಕಿದ ಹೋರಿಗಳ ಮೆರವಣಿಗೆ ನಡೆಸಿ ಚುಂಚನಕಟ್ಟೆ ಜಾತ್ರೆಯಲ್ಲಿ ಪ್ರದರ್ಶನ ಮತ್ತು ಮಾರಾಟ ನಡೆಸುತ್ತೇನೆ. ಇದಕ್ಕೆ ಕುಟುಂಬದವರ ಪ್ರೋತ್ಸಾಹ ಇದೆ’ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್. ಪಿ. ಶ್ರೀಧರ್ ಗೌಡ, ‘ಹೋರಿಗಳ ಸಾಕಣೆ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ರಾಜೇಗೌಡರು ಉತ್ತಮವಾಗಿ ಹೋರಿಗಳನ್ನು ಸಾಕಿ ಜಾತ್ರೆಗೆ ಮೆರವಣಿಗೆಯಲ್ಲಿ ಕರೆದೊಯ್ಯತ್ತಿರುವುದು ಶ್ಲಾಘನೀಯ’ ಎಂದರು. ವಾರದ ಸಂತೆ ದಿನವಾದ್ದರಿಂದ ರೈತರು, ಸಾರ್ವಜನಿಕರು ಹೋರಿಗಳ ಮೆರವಣಿಗೆಯನ್ನು ಕಣ್ತುಂಬಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.