
ಹಳೇಬೀಡು: ಮತಿಘಟ್ಟ ಗ್ರಾಮದಲ್ಲಿ ಸೋಮವಾರ ಕೋಡಿಮಲ್ಲೇಶ್ವರ ಹಾಗೂ ವೀರಭದ್ರೇಶ್ವರ ಸ್ವಾಮಿಯವರ ತೆಪ್ಪೋತ್ಸವ ಹಾಗೂ ಕೆಂಡೋತ್ಸವ ಅಪಾರ ಜನಸ್ತೋಮದೊಂದಿಗೆ ಅದ್ದೂರಿಯಾಗಿ ನಡೆಯಿತು.
ಕೋಡಿಮಲ್ಲೇಶ್ವರ ದೇವಾಲಯದಲ್ಲಿ ವಾದ್ಯ ವೈಭವದೊಂದಿಗೆ ಪೂಜೆ ನಡೆದ ನಂತರ ಉತ್ಸವ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಕೆರೆ ದಡದಲ್ಲಿ ದೇವತೆಗಳಿಗೆ ಪೂಜೆ ನೆರವೇರಿಸಿದ ನಂತರ ಭಕ್ತರ ಜಯಘೋಷದೊಂದಿಗೆ ತೆಪ್ಪದಲ್ಲಿ ಉತ್ಸವ ಮೂರ್ತಿಗಳನ್ನು ಆರೋಹಣ ಮಾಡಲಾಯಿತು.
ಚೆಲುವರಾಯ ಸ್ವಾಮಿ, ದೊಡ್ಡಘಟ್ಟ ವೀರಾಂಜನೇಯ ಸ್ವಾಮಿ, ಆಲದಮರದಮ್ಮ ಹಾಗೂ ಪರಿವಾರ ದೇವತೆಗಳನ್ನು ತೆಪ್ಪದಲ್ಲಿ ಕೂರಿಸಲಾಗಿತ್ತು. ಗಂಟೆ, ಶಂಖನಾದದೊಂದಿಗೆ ಸುಶ್ರಾವ್ಯವಾಗಿ ಕೇಳಿ ಬರುತ್ತಿದ್ದ ಪುರೋಹಿತರ ವೇದ ಮಂತ್ರಘೋಷದೊಂದಿಗೆ ತೆಪ್ಪೋತ್ಸವ ಕೆರೆಯನ್ನು ಸುತ್ತುಹಾಕಿತು.
ಕೆರೆ ಮಧ್ಯದಲ್ಲಿ ತೆಪ್ಪ ನಿಲ್ಲಿಸಿ ಮಳೆ– ಬೆಳೆ ಸಮರ್ಪಕವಾಗಿ ಬರಲಿ, ಜಲ ಸಮೃದ್ದಿಯಾಗಲಿ. ಗ್ರಾಮಗಳಿಗೆ ಕಂಠಕಗಳು ಎದುರಾಗದೆ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿ ಪ್ರಧಾನ ಅರ್ಚಕ ಚಂದ್ರಶೇಖರ ಶಾಸ್ತ್ರಿ ಪುರೋಹಿತರ ತಂಡದೊಂದಿಗೆ ಪೂಜಾ ವಿಧಾನ ನಡೆಸಿದರು.
ಕೋಡಿಮಲ್ಲೇಶ್ವರ ದೇವಾಲಯ ಬಳಿಯ ಕೆರೆ ಕೋಡಿಯಿಂದ ಆರಂಭವಾದ ತೆಪ್ಪೋತ್ಸವ. ಮತಿಘಟ್ಟ ತಿರುವಿನ ಕೋಡಿಕೊಪ್ಪಲು ಬಳಿಯ ಮತ್ತೊಂದು ಕೋಡಿಯವರೆಗೆ 2 ಕಿ.ಮೀ. ದೂರ ಸಾಗಿತು. ದೇವತೆಗಳ ಜಲ ವಿಹಾರವನ್ನು ವಿವಿಧ ಊರಿನಿಂದ ಬಂದಿದ್ದ ಸಾವಿರಾರು ಜನರು ಕಣ್ತುಂಬಿಕೊಂಡರು.
ತೆಪ್ಪೋತ್ಸವ ನಡೆಯುತ್ತಿದ್ದಾಗ ಈಜು ಬಲ್ಲವರು ಕೆರೆ ನೀರಿಗೆ ಧುಮುಕಿ ವಿವಿಧ ಭಂಗಿಯಲ್ಲಿ ಈಜಾಡಿದರು. ತೆಪ್ಪೋತ್ಸವ ಕಣ್ತುಂಬಿಕೊಂಡ ಭಕ್ತರಿಗೆ ಈಜು ಪ್ರೀಯರ ನೀರಿನ ಆಟ ಮನಸ್ಸಿಗೆ ಮುದ ನೀಡಿತು.
ನಂತರ ರಥದಲ್ಲಿ ದೇವತೆಗಳನ್ನು ಆರೋಹಣ ಮಾಡಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮುಂಜಾನೆ ಕೋಡಿಮಲ್ಲೇಶ್ವರ ದೇವಾಲಯ ಆವರಣದಲ್ಲಿ ನಡೆದ ಕೆಂಡೋತ್ಸವದಲ್ಲಿಯೂ ಭಕ್ತರು ಜಮಾಯಿಸಿದ್ದರು. ನಸುಕಿನಿಂದಲೇ ದೇವಾಲಯದಲ್ಲಿ ಪೂಜೆ ನಡೆಯಿತು. ಜನಪದ ಕಲಾ ತಂಡಗಳು ಮೆರವಣಿಗೆಯ ವೈಭವ ಹೆಚ್ಚಿಸಿದವು.
2 ಕಿ.ಮೀ. ದೂರದ ಕೆರೆ ಏರಿಯ ರಸ್ತೆಯಲ್ಲಿ ಅಪಾರ ಸಂಖ್ಯೆಯ ಜನಸ್ತೋಮ ಸೇರಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನಗಳನ್ನು ಕೆರೆ ಏರಿಕೆಯಿಂದ ಆಚೆಗೆ ದಾಟಿಸಲು ಚಾಲಕರು ಹರಸಹಾಸಪಟ್ಟರು.
ಭಾನುವಾರ ನಡೆದ ಧಾರ್ಮಿಕ ಧ್ವಜಾರೋಹಣವನ್ನು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ನೆರವೇರಿಸಿದರು. ಪಿಡಿಒ ಕೃಷ್ಣಪ್ಪ ಪೂಜಾರಿ, ಮುಖಂಡರಾದ ನಾಗೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಲ್.ಈ. ಜಯಕುಮಾರ್, ಕುಮಾರ್, ಪ್ರಕಾಶ್ ಪಾಲ್ಗೊಂಡಿದ್ದರು.
ಕೋಡಿಮಲ್ಲೇಶ್ವರ ಮತಿಘಟ್ಟಕ್ಕೆ ಮಾತ್ರ ಸಿಮೀತವಾಗಿಲ್ಲ. ನಾಡಿನ ವಿವಿಧೆಡೆ ಭಕ್ತರು ಇರುವುದರಿಂದ ಜಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಜಮಾಯಿಸುತ್ತಾರೆ.ನಾಗೇಗೌಡ ಬಗರ್ ಹುಕುಂ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.