
ಎಚ್.ಕೆ.ಸುರೇಶ್
ಹಳೇಬೀಡು: ಬೇಲೂರಿನ ಚೆನ್ನಕೇಶವ ದೇವಾಲಯ ಬಳಿಯ ಮುಜಾರಾಯಿ ಇಲಾಖೆ ಜಾಗದಲ್ಲಿ ಸಾಲುಮರದ ತಿಮ್ಮಕ್ಕ ವಸ್ತು ಸಂಗ್ರಹಾಲಯ ನಿರ್ಮಿಸಬೇಕು ಎಂದು ಶಾಸಕ ಎಚ್.ಕೆ. ಸುರೇಶ್ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಆಗ್ರಹಿಸಿದರು.
‘ತಿಮ್ಮಕ್ಕ ಅವರು ನಮ್ಮ ಕ್ಷೇತ್ರದ ಬೇಲೂರಿನ ಬಳ್ಳೂರಿನಲ್ಲಿ ಕೊನೆಯ ದಿನ ಕಳೆದಿದ್ದು, ನಮ್ಮೆಲ್ಲರ ಪುಣ್ಯ. 22 ವರ್ಷಗಳಿಂದ ಸಾಕು ಮಗ ಬಳ್ಳೂರು ಉಮೇಶ್ ಅವರ ಕುಟುಂಬದಲ್ಲಿ ನೆಮ್ಮದಿಯ ಜೀವನ ಸಾಗಿಸಿದರು. ಸಾಲುಮರದ ತಿಮ್ಮಕ್ಕ ಓಡಾಡಿದ ಬೇಲೂರು ಪುಣ್ಯ ಭೂಮಿಯಾಗಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಲುಮರದ ತಿಮ್ಮಕ್ಕ ಅವರನ್ನು ಪರಿಸರ ರಾಯಭಾರಿ ಎಂದು ಘೋಷಣೆ ಮಾಡಿ ಸಚಿವ ಸಂಪುಟದ ಸ್ಥಾನ ನೀಡಿದ್ದರು. ಬೇಲೂರಿನ ಯಗಚಿ ಜಲಾಶಯ ಬಳಿ 100ಎಕರೆ ಜಾಗದಲ್ಲಿ ಸಾಕುಮಗ ಉಮೇಶ್ ಸಹಕಾರದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಜೀವನದ ಕೊನೆಯ ದಿನ ಕಳೆದ ಬೇಲೂರಿನಲ್ಲಿ ಸಾಲು ಮರದ ತಿಮ್ಮಕ್ಕನ ನೆನಪಿನ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನಹರಿಸಬೇಕು’ ಎಂದು ಅವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.