ಹಳೇಬೀಡು: ಮತಿಘಟ್ಟ ಕೆರೆ ಏರಿಯ ರಸ್ತೆ ಪೂರ್ತಿ ಗುಂಡಿಗಳಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಓಡಿಸುವಂತಾಗಿದೆ.
2 ಕಿ.ಮೀ ಉದ್ದದ ಕೆರೆ ಏರಿ ರಸ್ತೆ ಜಾವಗಲ್ ಮಾರ್ಗವಾಗಿ ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು ಮೊದಲಾದ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಮತಿಘಟ್ಟ ಕೆರೆ ಏರಿ ಕನಕೇನಹಳ್ಳಿ, ಉಂಡಿಗನಾಳು ಮಾರ್ಗದ ರಸ್ತೆ ಹಳೇಬೀಡಿನಿಂದ ಅರಸೀಕೆರೆಗೆ ಹತ್ತಿರದ ರಸ್ತೆಯಾಗಿದೆ.
ಪ್ರಮುಖವಾದ ರಸ್ತೆಯ ಸ್ಥಿತಿ ಕೇಳುವವರೇ ಇಲ್ಲವಾಗಿದೆ. ಎರಡು ವರ್ಷದಿಂದ ಅವಶೇಷ ಇಲ್ಲದಂತೆ ರಸ್ತೆಯ ಡಾಂಬರ್ ಕಿತ್ತು ಹೋಗಿದೆ. ಗುಂಡಿಗಳ ಸ್ವರೂಪ ಭೀಕರವಾಗುತ್ತಿದ್ದು, ಅಪಘಾತಕ್ಕೆ ಅಹ್ವಾನ ನೀಡುತ್ತಿವೆ.
ಮಳೆಗಾಲದಲ್ಲಿ ರಸ್ತೆ ಗುಂಡಿಯಲ್ಲಿ ನೀರು ತುಂಬಿಕೊಂಡು ಕೆರೆಗಳಂತಾಗುತ್ತವೆ. ಗುಂಡಿಗೆ ಇಳಿಯದೇ ವಾಹನ ಚಾಲನೆ ಮಾಡಲು ಸಾಧ್ಯವಿಲ್ಲ. ದೊಡ್ಡ ವಾಹನಗಳು ಗುಂಡಿಯಲ್ಲಿ ಹೂತುಕೊಳ್ಳುವ ಸಾಧ್ಯತೆ ಇದೆ. ಬೈಕ್ ಚಾಲನೆ ಮಾಡುವವರು ಮಳೆಗಾಲ ಮಾತ್ರವಲ್ಲದೇ ಬೇರೆ ಸಮಯದಲ್ಲಿಯೂ ಬಿದ್ದು ಮೇಲೇಳುತ್ತಿರುತ್ತಾರೆ. ಸಾಕಷ್ಟು ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ರೈತ ಸಂಘ ಮುಖಂಡ ಎಲ್.ಈ. ಶಿವಪ್ಪ ಹೇಳಿದರು.
ಸಾವಿರಾರು ಎಕರೆ ಕೃಷಿ ಭೂಮಿಗೆ ಮತಿಘಟ್ಟ ಕೆರೆ ಏರಿ ಸಂಪರ್ಕ ಕಲ್ಪಿಸುತ್ತದೆ. ಕೃಷಿ ಉತ್ಪನ್ನ ಸಾಗಿಸುವುದಕ್ಕೆ ಬರಲು ವಾಹನ ಚಾಲಕರು ಹಿಂದೇಟು ಹಾಕುತ್ತಾರೆ. ಕೃಷಿ ಉತ್ಪನ್ನಗಳನ್ನು ಮನೆ ಇಲ್ಲವೇ ಮಾರುಕಟ್ಟೆಗೆ ಸಾಗಿಸುವುದು ಸುಲಭ ಸಾಧ್ಯವಾಗಿಲ್ಲ. ಲೋಕೋಪಯೋಗಿ ಇಲಾಖೆಯವರು ರಸ್ತೆ ಡಾಂಬರೀಕರಣ ಮಾಡದಿದ್ದರೆ, ಇಲ್ಲಿಯ ರೈತರಿಗೆ ಕೃಷಿ ಕಾಯಕ ಕಷ್ಟವಾಗುತ್ತದೆ ಎಂದು ರೈತ ಅಶೋಕ ಹೇಳಿದರು.
‘ಕೆರೆ ಏರಿ ಗುಂಡಿಮಯವಾಗಿದ್ದು, ಕಿರಿದಾಗಿದೆ. ವಾಹನ ಚಾಲನೆ ಕಷ್ಟವಾಗಿದೆ. ವಾಹನ ಚಲಿಸುವಾಗ ಆಡು, ಕುರಿ ಹಾಗೂ ಜಾನುವಾರುಗಳನ್ನು ಕರೆದೊಯ್ಯಲು ಕಷ್ಟ ಅನುಭವಿಸುವಂತಾಗಿದೆ’ ಎಂದು ರೈತ ಉಮೇಶ್ ಅಳಲು ತೋಡಿಕೊಂಡರು.
ಕೆರೆ ಏರಿಗೆ ಬ್ಯಾರಿಕೇಡ್ ನಿರ್ಮಿಸದೇ ಇರುವುದರಿಂದ ವಾಹನ ಕೆರೆಗೆ ಬೀಳುವ ಸಾಧ್ಯತೆ ಇದೆ. ಕೆರೆಯಲ್ಲಿ ನೀರಿದ್ದು ವಾಹನ ಉರುಳಿದರೆ ನೀರಿನಲ್ಲಿ ಮುಳುಗುತ್ತದೆ.ಬಸವರಾಜು ಹಳೇಬೀಡು ನಿವಾಸಿ
ಮತಿಘಟ್ಟ ಕೆರೆ ಏರಿ ಡಾಂಬರೀಕರಣಕ್ಕೆ ಹಣ ಮಂಜೂರಾಗಿಲ್ಲ. ಸರ್ಕಾರದಿಂದ ಮಂಜೂರಾತಿ ದೊರಕಿದ ತಕ್ಷಣ ಡಾಂಬರೀಕರಣ ಕೈಗೊಳ್ಳುತ್ತೇವೆ.ದಯಾನಂದ ಲೋಕೋಪಯೋಗಿ ಇಲಾಖೆ ಎಇಇ
ಸರ್ಕಾರ ಅಪಾಯದ ರಸ್ತೆಗಳ ದುರಸ್ತಿ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದೆ. ಸಾವು ನೋವು ಸಂಭವಿಸುವ ಮೊದಲು ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ.ಎಲ್.ಈ.ಶಿವಪ್ಪ ರೈತ ಸಂಘದ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.