
ಹಳೇಬೀಡು: ಯಲಹಂಕ ಬ್ಯಾಡರಹಳ್ಳಿಯಿಂದ ದೇವಿಹಳ್ಳಿ ಬೋವಿ ಕಾಲೊನಿ, ಪಂಡಿತನಹಳ್ಳಿ ಮೂಲಕ ಹಗರೆ-ಹಳೇಬೀಡು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕಲ್ಲು, ಮಣ್ಣು ಹಾಗೂ ಗುಂಡಿಮಯವಾಗಿದ್ದು, ಈ ಭಾಗದ ಜನರು ಕಷ್ಟ ಅನುಭವಿಸುವಂತಾಗಿದೆ.
ಈ ರಸ್ತೆಯಲ್ಲಿ ನಡೆದಾಡುವುದಕ್ಕೂ ಸಾಧ್ಯವಿಲ್ಲದಂತೆ ಗುಂಡಿ ಬಿದ್ದಿದೆ. ರಸ್ತೆಗೆ ಹಾಕಿದ್ದ ದಪ್ಪ ಜೆಲ್ಲಿ ಕೆಲವು ಕಡೆ ಮೇಲೆದ್ದು, ರಸ್ತೆ ತುಂಬೆಲ್ಲ ಹರಡಿದೆ. ಮಳೆ ಬಂದಾಗ ರಭಸವಾಗಿ ನೀರು ಹರಿದ ಪರಿಣಾಮ ರಸ್ತೆಯ ಹಲವು ಕಡೆ ಕೊರಕಲು ಬಿದ್ದಿದೆ. ಇಲ್ಲಿ ವಾಹನ ಸಂಚಾರ ಸುಲಭ ಸಾಧ್ಯವಾಗಿಲ್ಲ. ದೇವಿಹಳ್ಳಿ ಬೋವಿ ಕಾಲೊನಿ ಬಳಿ ಮಾತ್ರ 2 ಕಿ.ಮೀ. ಡಾಂಬರೀಕರಣ ಮಾಡಲಾಗಿದೆ. ಅದೂ ಹಲವು ಕಡೆ ಕಿತ್ತು ಬಂದಿದೆ. ಹೀಗಾಗಿ ಈ ರಸ್ತೆಯ ಪ್ರಯಾಣ ನರಕಯಾತನೆಯಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚಂದ್ರಯ್ಯ.
ಆಸ್ಪತ್ರೆ, ಕಚೇರಿ ಕೆಲಸ ಹಾಗೂ ಅಗತ್ಯ ವಸ್ತು ಖರೀದಿಗೆ ಇಲ್ಲಿಯ ಜನರು ನಗರ, ಪಟ್ಟಣಗಳಿಗೆ ಹೋಗಿ ಬರುವುದು ಸುಲಭ ಸಾಧ್ಯವಾಗಿಲ್ಲ. ಶಾಲಾ– ಕಾಲೇಜು ವಿದ್ಯಾರ್ಥಿಗಳ ಪಾಡು ಹೇಳಲು ಅಸಾಧ್ಯವಾಗಿದೆ. ವಾಹನಗಳು ಗುಂಡಿಗೆ ಇಳಿದು, ಮೇಲೆದ್ದು, ವಾಲಾಡಿಕೊಂಡು ಓಡಾಡುವಂತಾಗಿದೆ. ಆಟೊರಿಕ್ಷಾದಲ್ಲಿ ಪ್ರಯಾಣಿಸುವಾಗ ಭಯವಾಗುತ್ತದೆ. ಹೊಲದ ರಸ್ತೆಯಲ್ಲಿ ಓಡಾಡುವ ಟ್ರ್ಯಾಕ್ಟರ್, ಟಿಲ್ಲರ್ ಸಂಚರಿಸುವುದಕ್ಕೂ ರಸ್ತೆ ಯೋಗ್ಯವಾಗಿಲ್ಲ ಎನ್ನುತ್ತಾರೆ ರೈತ ಮಂಜುನಾಥ.
ಈ ರಸ್ತೆಯನ್ನು ಸಂಪೂರ್ಣ ಡಾಂಬರೀಕರಣ ಮಾಡಿದರೆ, ಹತ್ತಕ್ಕೂ ಹೆಚ್ಚು ಗ್ರಾಮದ ಜನರಿಗೆ ಅನುಕೂಲವಾಗುತ್ತದೆ. ಈ ರಸ್ತೆ ಉದ್ದಕ್ಕೂ ಸುಮಾರು 500 ಎಕರೆ ಕೃಷಿ ಪ್ರದೇಶವಿದೆ. ಕೃಷಿ ಉತ್ಪನ್ನ ಸಾಗಾಟಕ್ಕೆ ಕಷ್ಟವಾಗಿದೆ ಎಂದು ಯಲಹಂಕ ಬ್ಯಾಡರಹಳ್ಳಿ ಗ್ರಾಮಸ್ಥರು ಹೇಳಿದರು.
ಪುಷ್ಪಗಿರಿಗೆ ಹತ್ತಿರದ ರಸ್ತೆ: ಯಲಹಂಕ ಬ್ಯಾಡರಹಳ್ಳಿಯಿಂದ ಪಂಡಿತನಹಳ್ಳಿ ಮಾರ್ಗದ ರಸ್ತೆ ಪುಷ್ಪಗಿರಿ ಕ್ಷೇತ್ರಕ್ಕೆ ಹತ್ತಿರವಾಗುತ್ತದೆ. ರಸ್ತೆಯ ಅವ್ಯವಸ್ಥೆಯಿಂದ ಸುತ್ತಿ ಬಳಸಿ ಪುಷ್ಪಗಿರಿಗೆ ಹೋಗುವಂತಾಗಿದೆ. ಪುಷ್ಪಗಿರಿ ಮಠ ಹಾಗೂ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ಈ ಭಾಗದಲ್ಲಿ ಲೆಕ್ಕವಿಲ್ಲದಷ್ಟು ಭಕ್ತರಿದ್ದಾರೆ. ಆದಿ ಮಲ್ಲಮ್ಮ ದೇವಾಲಯಕ್ಕೂ ಇದೇ ರಸ್ತೆಯಲ್ಲಿ ಸಂಚರಿಸಬೇಕು ಎನ್ನುತ್ತಾರೆ ರೈತ ಕಲ್ಲೆಶಪ್ಪ.
ಪ್ರಸ್ತಾವನೆ ಸಲ್ಲಿಕೆ ‘
ಬೇಲೂರು ತಾಲ್ಲೂಕಿಗೆ ಅಗತ್ಯವಿರುವ ರಸ್ತೆ ಕಾಮಗಾರಿಯ ಪರಿಶೀಲನೆ ನಡೆಸಲಾಗಿದೆ. ಯಲಹಂಕ ಬ್ಯಾಡರಹಳ್ಳಿ ಬೋವಿ ಕಾಲೊನಿ ರಸ್ತೆ ಅಭಿವೃದ್ಧಿ ಕಾಮಗಾರಿ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಬಜೆಟ್‌ನಲ್ಲಿ ಹಣ ಬಿಡುಗಡೆ ಆಗಬಹುದು ಎಂದು ಕಾಯುತ್ತಿದ್ದೇವೆ. ಸದ್ಯಕ್ಕೆ ಸಿದ್ದನಹಳ್ಳಿಯಿಂದ ಮಲ್ಲಾಪುರದವರೆಗೆ ರಸ್ತೆ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೃಷ್ಣೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.