
ಹಳೇಬೀಡು: ವಿಠ್ಠಲ ರುಕುಮಾಯಿ ದೇವಾಲಯದಲ್ಲಿ ಎರಡು ದಿನದಿಂದ ಶ್ರದ್ಧಾಭಕ್ತಿಯಿಂದ ನಡೆದ 13 ನೇ ವರ್ಷದ ದಿಂಡಿ ಮಹೋತ್ಸವ ಭಾನುವಾರ ವಿಠ್ಠಲ ರುಕುಮಾಯಿ ಉತ್ಸವದೊಂದಿಗೆ ಸಂಪನ್ನಗೊಂಡಿತು.
ಮುಂಜಾನೆ 5.30ಕ್ಕೆ ವಿಠ್ಠಲ ರುಕುಮಾಯಿ ದೇವತೆಗಳು ಹಾಗೂ ಜ್ಜಾನೇಶ್ವರಿ ಗ್ರಂಥಗಳಿಗೆ ಕಾಕಡಾರತಿ ನೆರವೇರಿಸಲಾಯಿತು. ನಂತರ ದೇವಾಲಯದಲ್ಲಿ ವಿಶೇಷ ಪೂಜಾವಿಧಿ ನಡೆಯಿತು. ನಂತರ ಜಯ ಘೋಷದೊಂದಿಗೆ ವಿಠ್ಠಲ ರುಕುಮಾಯಿ ಉತ್ಸವ ಮೂರ್ತಿಗಳನ್ನು ಪುಷ್ಪಾಲಂಕೃತ ಮಂಟಪದಲ್ಲಿ ಆರೋಹಣ ಮಾಡಲಾಯಿತು. ದೇವಾಲಯದಿಂದ ಹೊರಟ ಮೆರವಣಿಗೆ ಜಾವಗಲ್ ರಸ್ತೆ, ಬೇಲೂರು ರಸ್ತೆ, ಹಳೆ ಸಂತೆ ಬೀದಿ, ಹೊಯ್ಸಳ ಬಡಾವಣೆ ಹಾಗೂ ಹೊಯ್ಸಳೇಶ್ವರ ದೇವಾಲಯ ರಸ್ತೆಯಲ್ಲಿ ಸಾಗಿತು.
ಶ್ವೇತ ವರ್ಣದ ಉಡುಪಿನೊಂದಿಗೆ ಬಿಳಿ ಟೋಪಿ ಧರಿಸಿದ ಪುರುಷರು, ವಿವಿಧ ಬಣ್ಣದ ಸೀರೆಯೊಂದಿಗೆ ಕೇಸರಿ ಪೇಟ ಧರಿಸಿದ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಹೆಜ್ಜೆ ಹಾಕಿದರು. ಹರಿ ಭಜನಾ ಪರಿಣಿತರಾದ ವಾರಕರಿಗಳು ವೀಣೆ, ತಂಬೂರಿ, ತಬಲ ತಾಳದೊಂದಿಗೆ ಭಜನೆ ಮಾಡುತ್ತ ಸಾಗಿದರು. ವಾರಕರಿಗಳೊಂದಿಗೆ ಭಕ್ತರು ಸಹ ಭಜನೆ ಮಾಡುತ್ತಾ, ತಾಳದ ಲಯಕ್ಕೆ ಹೆಜ್ಜೆ ಹಾಕಿದರು.
ದಿಂಡಿ ಉತ್ಸವದ ಹವಾಲ್ದಾರ್ ಬಸವಾಪಟ್ಟಣದ ಮೋಹನ್ ರಾವ್, ಭದ್ರಾವತಿಯ ಅಣ್ಣಪ್ಪರಾವ್ ನೇತೃತ್ವದಲ್ಲಿ ಉತ್ಸವ ನಡೆಯಿತು. ಭದ್ರಾವತಿಯ ಬದರಿನಾಥ್ ಉತ್ತರಕರ್ ಕಾಲ ಕೀರ್ತನೆ ನಡೆಸಿದರು. ಅರುಣ್ ಅಂಬೆಕರ್ ಹಾಗೂ ಹಿತೇಶ್ ಮೃದಂಗ ಸೇವೆ ಸಲ್ಲಿಸಿದರು.
ವಾರಕರಿಗಳಾದ ದಾವಣಗೆರೆಯ ಪುಂಡಲೀಕರಾವ್, ಶಿವಮೊಗ್ಗದ ಗೋಪಾಲರಾವ್, ರವಿ, ಅದ್ದೂರಿತನ ಮಂಜಪ್ಪಯ್ಯ ಹರಿಭಜನೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ನಡೆದ ಅಣಕು ಪ್ರದರ್ಶನ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಶ್ರದ್ಧಾ ಭಕ್ತಿಯ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಬೆಳ್ಳಿಗ್ಗೆ 9 ಗಂಟೆಗೆ ದೇವಾಲಯದಿಂದ ಹೊರಟ ಮೆರವಣಿಗೆ ಮಧ್ಯಾಹ್ನ 12.30ಕ್ಕೆ ಸ್ವಸ್ಥಾನಕ್ಕೆ ಬಂದು ತಲುಪಿತು.
ವಿಠ್ಠಲ ರುಕುಮಾಯಿ ದೇವಸ್ಥಾನ ಟ್ರಸ್ಟ್, ಭಾವಸಾರ ಕ್ಷತ್ರಿಯ ಸಮಾಜದ ಮಹಿಳಾ, ಯುವ ಮಂಡಳಿ ಹಾಗೂ ನಾಡಿನ ವಿವಿಧ ಊರಿನ ಸಮಾಜ ಬಾಂಧವರು ಭಾಗವಹಿಸಿದ್ದರು.
ದಿಂಡಿ ಎಂದರೆ ಸಮೂದಾಯದ ಒಗ್ಗಟ್ಟು ಹಾಗೂ ಭಕ್ತಿಯನ್ನು ಸಮರ್ಪಿಸುವ ಉತ್ಸವ. ದಿಂಡಿ ಉತ್ಸವದಲ್ಲಿ ಸಮಾಜ ಬಾಂಧವರು ಒಂದೆಡೆ ಸೇರಿ ಕುಲ ದೇವರನ್ನು ಆರಾಧಿಸುತ್ತೇವೆಬಿ.ಸಿ.ತುಕಾರಾಂರಾವ್ ವಿಠ್ಠಲ ರುಕುಮಾಯಿ ಟ್ರಸ್ಟ್ ಅಧ್ಯಕ್ಷ
ಭಕ್ತಿ ಭಾವದ ಅಖಂಡ ಜಾಗರಣೆ
ಭಾವಸಾರ ಸಮಾಜ ಬಾಂಧವರು ಭಕ್ತಿಯಿಂದ ರಾತ್ರಿಯಿಡಿ ಅಖಂಡ ಜಾಗರಣೆ ನಡೆಸಿದರು. ಪಾಳಿ ಭಜನೆ ನೆರೆದಿದ್ದ ಜನರನ್ನು .ಭಕ್ತಿ ಲೋಕಕ್ಕೆ ಕೊಂಡೊಯ್ದಿತ್ತು. ಭಾರೂಡ್ ಕಾರ್ಯಕ್ರಮ ವಿಶಿಷ್ಟವಾಗಿ ನಡೆಯಿತು. ವಾರಕರಿ ಭದ್ರಾವತಿಯ ಯೋಗೀಶ್ ಕುಮಾರ್ ಪ್ರವಚನ ನಡೆಸಿದರು. ಮಹೇಂದ್ರನಾಥ ಸಾಗರ ಪಂಡರಿ ಸಂದ್ರಾದಾಯಿಕ ಕೀರ್ತನೆ ಹಾಡಿದರು. ದೂರದರ್ಶನ ಕಲಾವಿದರಾದ ವಿದ್ವಾನ್ ಗಣಪತಿ ಹೆಗಡೆ ಅವರಿಂದ ಸಂತವಾಣಿ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.