
ಹಳೇಬೀಡು: ಸಾಲ ಮರುಪಾವತಿ ಮಾಡಿದ ರೈತರಿಗೆ ಜಮೀನು ಆಧಾರ ಖುಲಾಸೆ ಮಾಡಿಕೊಡಲು ಇಲ್ಲಿನ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಪ್ರೋನೋಜಿಕ್ ಸರ್ಕಾರ್ ಸ್ಪಂದಿಸುತ್ತಿಲ್ಲ. ಇದರಿಂದ ಸಾಲ ನವೀಕರಣ ಮಾಡಲು ತೊಂದರೆಯಾಗಿದೆ ಎಂದು ಆರೋಪಿಸಿದ ರೈತರು ಹಾಗೂ ಶಾಖಾ ವ್ಯವಸ್ಥಾಪಕರ ಮಧ್ಯೆ ಗುರುವಾರ ಮಾತಿನ ಚಕಮಕಿ ನಡೆಯಿತು.
‘ಜಮೀನಿನ ಆಧಾರ ಖುಲಾಸೆ ಮಾಡಿಸಲು ಉಪ ನೋಂದಣಾಧಿಕಾರಿ ಕಚೇರಿಗೆ ಶಾಖಾ ವ್ಯವಸ್ಥಾಪಕರ ಆಧಾರ್ ಕಾರ್ಡ್ ಕೊಡಬೇಕು. ನಂತರ ವ್ಯವಸ್ಥಾಪಕರ ಫೋನ್‌ಗೆ ಬರುವ ಒಟಿಪಿ ದೃಢೀಕರಿಸಬೇಕು. ವ್ಯವಸ್ಥಾಪಕರ ಆಧಾರ್ ಕಾರ್ಡ್ ಪಡೆದು ತಂದು ಕೊಡಿ ಎಂದು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕೇಳುತ್ತಿದ್ದಾರೆ. ಆದರೆ ವ್ಯವಸ್ಥಾಪಕರು ಆಧಾರ್ ಕಾರ್ಡ್ ಕೊಡುತ್ತಿಲ್ಲ. ಬೇರೆ ವ್ಯವಸ್ಥೆಯಲ್ಲಿಯೂ ಜಮೀನಿನ ಆಧಾರ ಖುಲಾಸೆ ಮಾಡಿಕೊಡುತ್ತಿಲ್ಲ. ಉಡಾಫೆ ಉತ್ತರ ಕೊಡುತ್ತಿದ್ದಾರೆ’ ಎಂದು ರೈತ ಸಂಘದವರು ದೂರಿದರು.
ಹೊರ ರಾಜ್ಯದಿಂದ ಬಂದಿರುವ ವ್ಯವಸ್ಥಾಪಕರಿಗೆ ಕನ್ನಡ ಭಾಷಾ ಜ್ಞಾನ ಇಲ್ಲ. ರೈತರಿಗೆ ಇಂಗ್ಲಿಷ್, ಹಿಂದಿ ಭಾಷೆ ಗೊತ್ತಿಲ್ಲ. ಹೀಗಾಗಿ ರೈತರು ಹಾಗೂ ವ್ಯವಸ್ಥಾಪಕರು ಒಬ್ಬರಿಗೊಬ್ಬರು ಸಮಸ್ಯೆ ಅರ್ಥ ಮಾಡಿಕೊಳ್ಳುವುದು ಕಷ್ಟವಾಯಿತು. ಕನ್ನಡ, ಇಂಗ್ಲಿಷ್ ಭಾಷೆ ಗೊತ್ತಿರುವ ಸಿಬ್ಬಂದಿ, ಸಮಸ್ಯೆ ಅರ್ಥ ಮಾಡಿಸುವ ಪ್ರಯತ್ನ ನಡೆಸಿದರು. ಆದರೆ ವ್ಯವಸ್ಥಾಪಕರು ಹಾಗೂ ರೈತರಿಗೆ ಪರಸ್ಪರ ಸಮಸ್ಯೆ ಅರ್ಥ ಮಾಡಿಕೊಳ್ಳಲಿಲ್ಲ.
ಸಾಲದ ಅಗತ್ಯವಿದೆ. ಯಾವುದಾದರೂ ಬ್ಯಾಂಕ್ ಶಾಖೆಯಲ್ಲಿ ಸಾಲ ನವೀಕರಣ ಮಾಡಿಕೊಳ್ಳುತ್ತೇವೆ ಎಂದು ರೈತರು ಬೇಡಿಕೊಂಡರೂ, ಆಧಾರ ಖುಲಾಸೆ ಮಾಡಿಕೊಡುವುದಕ್ಕೆ ಶಾಖಾ ವ್ಯವಸ್ಥಾಪಕ ಪ್ರೋನೋಜಿಕ್ ಸರ್ಕಾರ್ ಮನಸ್ಸು ಮಾಡಲಿಲ್ಲ. ಉತ್ತರ ಕೊಡದೇ ತಮ್ಮ ಕ್ಯಾಬಿನ್‌ನಿಂದ ಹೊರ ಹೋದರು. ಇದರಿಂದ ರೈತರು ಮತ್ತಷ್ಟು ಆಕ್ರೋಶಗೊಂಡರು. ಶೀಘ್ರದಲ್ಲಿಯೇ ಆಧಾರ ಖುಲಾಸೆ ಮಾಡಿಕೊಡದಿದ್ದರೆ, ಉಗ್ ರಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರೂ ವ್ಯವಸ್ಥಾಪಕರು ತಲೆ ಕೆಡಿಸಿಕೊಳ್ಳಲಿಲ್ಲ.
ಹಾಸನದ ವಿಭಾಗೀಯ ವ್ಯವಸ್ಥಾಪಕಿ ನಿರಜಾ ಅವರಿಗೆ ಕರೆ ಮಾಡಿದ ರೈತ ಸಂಘದವರು ಸಮಸ್ಯೆ ಹೇಳಿಕೊಂಡರು. ಗ್ರಾಮೀಣ ಶಾಖೆಗೆ ಕನ್ನಡ ಬಲ್ಲವರನ್ನು ಹಾಕಿಕೊಡಿ. ರೈತರಿಗೆ ಉಡಾಫೆ ಉತ್ತರ ಕೊಡುವ ಶಾಖಾ ವ್ಯವಸ್ಥಾಪಕರನ್ನು ಬದಲಾಯಿಸಿ ಎಂದು ಒತ್ತಾಯಿಸಿದರು.
ನನಗೆ ಅಂಗವೈಕಲ್ಯ ಇದೆ. ಕುಂಟುತ್ತ ಬ್ಯಾಂಕಿಗೆ ಅಲೆದಾಡುವುದು ಕಷ್ಟವಾಗುತ್ತಿದೆ ಎಂದರೂ ಶಾಖಾ ವ್ಯವಸ್ಥಾಪಕರು ಸ್ಪಂದಿಸುತ್ತಿಲ್ಲ ಎಂದು ರೈತ ಈಶ್ವರಪ್ಪ ದೂರಿದರು.
ರೈತ ಸಂಘ ಪದಾಧಿಕಾರಿಗಳಾದ ಎಲ್.ಈ.ಶಿವಪ್ಪ, ಗಂಗಾಧರಪ್ಪ, ಜಿ.ಎಸ್.ಶಿವಕುಮಾರ್, ಶೇಖರಪ್ಪ, ಮುನ್ನಾಭಾಯಿ. ಅಡುಗೆ ರಾಜು ಪಾಲ್ಗೊಂಡಿದ್ದರು. ಸೊಪ್ಪಿನಹಳ್ಳಿ ಹುಲೀಗೌಡ, ತಟ್ಟೆಹಳ್ಳಿ ಈಶ್ವರಪ್ಪ, ಕುಮಾರ ಮೊದಲಾದ ರೈತರು ಜಮೀನಿನ ಆಧಾರ ಖುಲಾಸೆಗಾಗಿ ಬ್ಯಾಂಕ್‌ಗೆ ಬಂದಿದ್ದರು.
ಆಧಾರ ಖುಲಾಸೆ ನಮ್ಮ ಕರ್ತವ್ಯ
ಸಾಲ ಮರುಪಾವತಿ ಮಾಡಿದ ರೈತರ ಜಮೀನಿನ ಆಧಾರ ಖುಲಾಸೆ ಮಾಡಿಕೊಡುವುದು ನಮ್ಮ ಕರ್ತವ್ಯ. ಕಾನೂನು ಪರಿಮಿತಿಯಲ್ಲಿ ಕೆಲಸ ಮಾಡುವುದರಿಂದ ತೊಂದರೆ ಆಗಿರಬಹುದು ಎಂದು ವಿಭಾಗೀಯ ವ್ಯವಸ್ಥಾಪಕಿ ನಿರಜಾ ಹೇಳಿದರು. ಶಾಖಾ ವ್ಯವಸ್ಥಾಪಕರೊಂದಿಗೆ ಮಾತನಾಡಿ ಆಧಾರ ಖುಲಾಸೆ ಮಾಡಿಕೊಡುತ್ತೇವೆ. ಕನ್ನಡ ಭಾಷೆ ಗೊತ್ತಿರುವ ಶಾಖಾ ವ್ಯವಸ್ಥಾಪಕರನ್ನು ವರ್ಗಾಯಿಸುವ ಕುರಿತು ಪರಿಶೀಲನೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.