
ಹಿರೀಸಾವೆ: ಹೋಬಳಿಯಲ್ಲಿ ಮಂಗಳವಾರ ಹನುಮ ಜಯಂತಿ ಪ್ರಯುಕ್ತ ಹಲವು ಗ್ರಾಮಗಳಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಹೋಮ, ಹವನ, ವಿಶೇಷ ಪೂಜೆ ಮತ್ತು ಹನುಮ ಮೂರ್ತಿಯ ಮೆರವಣಿಗೆಯನ್ನು ಭಕ್ತರು ಶ್ರದ್ಧೆಯಿಂದ ನಡೆಸಿದರು.
ಎಚ್.ಎಂ. ಗಡಿಯಲ್ಲಿರುವ ಸೇತುವೆ ಗಡಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ಅಭಿಷೇಕ, ನವಗ್ರಹ ಪೂಜೆ, ರಾಮತಾರಕ, ಕದಳಿ ಫಲಹೋಮಗಳನ್ನು ಚನ್ನರಾಯಪಟ್ಟಣದ ರಾಮು ಗುಡಿಭಟ್ಟರ ನೇತೃತ್ವದಲ್ಲಿ ನಡೆಸಲಾಯಿತು. ಮೂರ್ತಿಗೆ ಬೆಣ್ಣೆ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಕಿರೀಸಾವೆ ಗಡಿಯ ಹಣ್ಣಿನ ವ್ಯಾಪಾರಿಗಳ ಸಂಘದಿಂದ ಸಾವಿರಾರು ಕೆ.ಜಿ. ಹಣ್ಣುಗಳ ಪ್ರಸಾದ ವಿತರಣೆ ಮಾಡಿದರು. ಭಕ್ತರಿಗೆ ಹಲಸಿನಕಾಯಿ, ಅವರೆಕಾಳು ಸಾರು ಮತ್ತು ರಾಗಿ ಮುದ್ದೆ ಊಟವನ್ನು ಬಡಿಸಲಾಯಿತು.
ಬೆಣ್ಣೆ ಅಲಂಕಾರ: ಹಿರೀಸಾವೆಯ ಉಯ್ಯಾಲೆ ಕಂಬದ ಬಳಿ ಇರುವ ಹನುಮಂತರಾಯ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಮೂರ್ತಿಗೆ ಬೆಣ್ಣೆ ಅಲಂಕಾರ ಮಾಡಿ, ಮಹಾ ಮಂಗಳಾರತಿ ಬಳಿಕ ಭಕ್ತರಿಗೆ ಪ್ರಸಾದವನ್ನು ವಿತರಿಸಲಾಯಿತು.
ನುಗ್ಗೇಹಳ್ಳಿ ರಸ್ತೆಯಲ್ಲಿರುವ ಮುದ್ರೆಕಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬೆಿಗ್ಗೆ ನವೀನ್ ಭಾರದ್ವಾಜ್ ನೇತೃತ್ವದಲ್ಲಿ ರಾಮತಾರಕ ಮಂತ್ರ ಪಠಣ, ವಿವಿಧ ಹೋಮ ವಿಶೇಷ ಪೂಜೆಗಳನ್ನು ನಡೆಸಿದರು. ಮೂರ್ತಿಗೆ ಬೆಣ್ಣೆ ಅಲಂಕಾರ ಭಕ್ತರ ಗಮನ ಸೇಳೆಯಿತು.
ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಹನುಮ ಮೂರ್ತಿಯ ಮೆರವಣಿಗೆ ನಡೆಸಿದರು. ಅರಕೆರೆ, ಯಾಳನಹಳ್ಳಿ, ಹೊಸಹಳ್ಳಿ, ಹಲವು ಗ್ರಾಮಗಳಲ್ಲಿ ಹನುಮ ಜಯಂತಿ ಆಚರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.