ADVERTISEMENT

ತಂಬಾಕಿಗೆ ಉತ್ತಮ ಬೆಲೆ: ಚುರುಕಾದ ಹೊಗೆಸೊಪ್ಪು ಗ್ರೇಡಿಂಗ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 3:04 IST
Last Updated 12 ಅಕ್ಟೋಬರ್ 2025, 3:04 IST
ಕೊಣನೂರು ಹೋಬಳಿ ವ್ಯಾಪ್ತಿಯ ಹಂಡ್ರಂಗಿಯಲ್ಲಿ ರೈತ ಮಹಿಳೆಯರು ಹೊಗೆಸೊಪ್ಪು ಗ್ರೇಡಿಂಗ್ ಮಾಡುತ್ತಿರುವುದು‌
ಕೊಣನೂರು ಹೋಬಳಿ ವ್ಯಾಪ್ತಿಯ ಹಂಡ್ರಂಗಿಯಲ್ಲಿ ರೈತ ಮಹಿಳೆಯರು ಹೊಗೆಸೊಪ್ಪು ಗ್ರೇಡಿಂಗ್ ಮಾಡುತ್ತಿರುವುದು‌   

ಅರಕಲಗೂಡು: ತಾಲ್ಲೂಕಿನ ಪ್ರಮುಖ ಆರ್ಥಿಕ ಬೆಳೆ ಹೊಗೆಸೊಪ್ಪಿನ ಮಾರುಕಟ್ಟೆ ಬುಧುವಾರದಿಂದಲೇ ಪ್ರಾರಂಭವಾಗಿದ್ದು, ಉತ್ತಮವಾದ ತಂಬಾಕು  ಪ್ರತಿ ಕೆ.ಜಿ.ಗೆ ₹ 320 ಬೆಲೆ ದೊರೆತು ಬೆಳೆಗಾರರಲ್ಲಿ ಉತ್ತಮ ಆದಾಯದ ನೀರೀಕ್ಷೆ ಹುಟ್ಟುಹಾಕಿದೆ.

ಹದಗೊಳಿಸಿ ಮನೆಯಲ್ಲಿಟ್ಟಿದ್ದ ಹೊಗೆಸೊಪ್ಪು ದಾಸ್ತಾನನ್ನು ಮಳೆಯಿಲ್ಲದೆ, ಒಣಹವೆ ಮತ್ತು ಸುಡುಬಿಸಲು ಇದ್ದಿದ್ದ ಪರಿಣಾಮ ಗ್ರೇಡಿಂಗ್ ಮಾಡಲು ರೈತರು ಹಿಂದುಮುಂದು ನೋಡುತ್ತಿದ್ದರು. ತಂಬಾಕು ಮಾರುಕಟ್ಟೆಯು ಪ್ರಾರಂಭಗೊಂಡು, ಮಳೆ ಸುರಿದು ಮೋಡಕವಿದ ವಾತಾವರಣವಿರುವುದರಿಂದ ಹೊಗೆಸೊಪ್ಪು ಗ್ರೇಡಿಂಗ್ ಮಾಡಲು ಉತ್ತಮ ವಾತಾವರಣ ಕೂಡಿಬಂದಿದೆ. ಬೆಳೆಗಾರರು ಗ್ರೇಡಿಂಗ್ ಕಾರ್ಯ ಚುರುಕುಗೊಳಿಸಿದ್ದು, ಹೊಗೆಸೊಪ್ಪು ಬೇಲ್‌ಗಳನ್ನು ಕಟ್ಟಿ ಮಾರುಕಟ್ಟೆಗೆ ಬಿಡಲು ಅಣಿಗೊಳಿಸುವಲ್ಲಿ ನಿರತರಾಗಿದ್ದಾರೆ.

ರಾಮನಾಥಪುರದಲ್ಲಿನ ತಂಬಾಕು ಮಾರುಕಟ್ಟೆಯಲ್ಲಿ 2024ರ ಹರಾಜು ಪ್ರಕ್ರಿಯೆಯು ಪ್ರಾರಂಭವಾದ ಆರಂಭದ ದಿನಗಳಲ್ಲಿ ಪ್ರತಿ ಕೆ.ಜಿ. ಉತ್ತಮ ದರ್ಜೆಯ ತಂಬಾಕಿಗೆ ₹290ರವರೆಗೆ ಮಾರಾಟವಾಗಿತ್ತು. ಈ ವರ್ಷ ಪ್ರಾರಂಭದಲ್ಲೇ ₹ 320 ಬೆಲೆ ದೊರೆತಿರುವುದು ತಂಬಾಕಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಮೂಡಿಸಿದೆ.

ADVERTISEMENT

ಶುಕ್ರವಾರದ ತಂಬಾಕು ಮಾರುಕಟ್ಟೆಗೆ 700 ಬೇಲ್‌ಗಳು ಬಂದಿದ್ದು, ಉತ್ತಮ ದರ್ಜೆಯ ತಂಬಾಕಿಗೆ ಗರಿಷ್ಠ ಬೆಲೆ ₹320 ಮತ್ತು ಕಡಿಮೆ ದರ್ಜೆಯ ತಂಬಾಕು ಪ್ರತಿ ಕೆ.ಜಿ ₹250ಕ್ಕೆ ಮಾರಾಟವಾಯಿತು. ಸರಾಸರಿ ಬೆಲೆಯು ಪ್ರತಿ ಕೆ.ಜಿ.ಗೆ ₹289ರಂತೆ ವಹಿವಾಟು ನಡೆಯಿತು.

ರಾಮನಾಥಪುರ ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನಗಳು ಸುರಿದ ಮಳೆಯಿಂದ ಮುಸುಕಿನ ಜೋಳ ಬೆಳೆಯು ಹಸಿರಿನಿಂದ ಕಂಗೊಳಿಸುತ್ತಿದೆ

ಬೆಳೆಗಳಿಗೆ ವರವಾದ ಮಳೆ

ಕಳೆದ ಅನೇಕ ದಿನಗಳಿಂದ ಮಳೆ ಕೊರತೆಯಿಂದಾಗಿ ಕಳಾಹೀನವಾಗಿದ್ದ ಬೆಳೆಗಳಿಗೆ ಮಳೆಯು ಜೀವ ಕಳೆಯನ್ನು ತುಂಬಿದೆ. ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ವ್ಯಾಪ್ತಿಯಲ್ಲಿ ಅನೇಕ ದಿನಗಳಿಂದ ಕಣ್ಮರೆಯಾಗಿದ್ದ ಮಳೆ ಹಾಗೂ ಉರಿ ಬಿಸಿಲಿನಿಂದಾಗಿ ಹಿಂಗಾರು ಹಂಗಾಮಿನಲ್ಲಿ ಬಿತ್ತಿದ್ದ ಪ್ರಮುಖ ಬೆಳೆಗಳಾದ ಮುಸುಕಿನ ಜೋಳ ರಾಗಿ ಅಲಸಂದೆ ಹುರುಳಿ ಹುಚ್ಚೆಳ್ಳು ಮುಂತಾದ ದ್ವಿದಳ ದಾನ್ಯ ಬೆಳೆಗಳು ಒಣಗಿ ಬೆಳೆವಣಿಗೆಯು ಕುಂಠಿತಗೊಂಡಿತ್ತು. ಎರಡೂ ಹೋಬಳಿಗಳ ಬಹುತೇಕ ಕಡೆಗಳಲ್ಲಿ ಗುರುವಾರ ಮತ್ತು ಶುಕ್ರವಾರ ಮುಂಜಾನೆ ಸುರಿದ ಮಳೆಯು ಒಣಗುತ್ತಿದ್ದ ಬೆಳೆಗಳಿಗೆ ವರವಾಗಿ ಪರಿಣಮಿಸಿದೆ. ಇದೀಗ ಸುರಿದ ಮಳೆಯು ಹಿಂಗಾರು ಬೆಳೆಗಳನ್ನು ರಕ್ಷಿಸಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.