ADVERTISEMENT

ಕಸದ ಬುಟ್ಟಿಯಲ್ಲಿದ್ದವರು: ರೇವಣ್ಣ

ಮಾಜಿ ಸಂಸದ ಶಿವರಾಮೇಗೌಡಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 18:38 IST
Last Updated 23 ಸೆಪ್ಟೆಂಬರ್ 2019, 18:38 IST
 ಎಚ್.ಡಿ.ರೇವಣ್ಣ ‍
 ಎಚ್.ಡಿ.ರೇವಣ್ಣ ‍   

ಹಾಸನ: ‘ಕಸದ ಬುಟ್ಟಿಯಲ್ಲಿದ್ದವರನ್ನೆಲ್ಲ ಕರೆದುಕೊಂಡು ಬಂದು ರಾಜಕೀಯ ಶಕ್ತಿ ನೀಡಿ, ಅವರಿಂದಲೇ ಟೀಕೆಗೊಳಗಾಗುವುದು ಎಚ್‌.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ದೌರ್ಭಾಗ್ಯ’ ಎಂದು ಶಾಸಕ ಎಚ್‌.ಡಿ.ರೇವಣ್ಣ ಸೋಮವಾರ ಇಲ್ಲಿ ಹೇಳಿದರು.

‘ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರ ದೇಹ ಬಂಗಾರ; ಕಿವಿ ಹಿತ್ತಾಳೆ’ ಎಂಬ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಟೀಕೆಗೆ ಅವರು ಪ್ರತಿಕ್ರಿಯಿಸಿದರು.

‘ಕುಮಾರಣ್ಣ ಧರ್ಮರಾಯ ಇದ್ದಂತೆ. ಯಾರನ್ನೂ ಪರೀಕ್ಷೆ ಮಾಡುವುದಿಲ್ಲ. ತೂಕ ನೋಡಲ್ಲ. ಚಾರಿತ್ರ್ಯ ನೋಡಲ್ಲ. ಎಲ್ಲರಿಗೂ ಸಹಾಯ ಮಾಡುತ್ತಾನೆ. ಕೊನೆಗೆ ಸಹಾಯ ಪಡೆದವರೇ ತಿರುಗಿ ಬಿದ್ದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನಾನೇನು ಮಾಡಲಿ?’ ಎಂದು ಸುದ್ದಿಗೋಷ್ಠಿಯಲ್ಲಿ ಅಸಹಾಯಕತೆ ವ್ಯಕ್ತ
ಪಡಿಸಿದರು.

ADVERTISEMENT

ಹಾಸನ ನನ್ನ ಸಾಮ್ರಾಜ್ಯ ಎಂದಿದ್ದೇನಾ?: ‘ನಾನು ಮಹಾರಾಜ. ಹಾಸನ ನನ್ನ ಸಾಮ್ರಾಜ್ಯ ಎಂದು ಎಲ್ಲಿಯಾದರೂ ಹೇಳಿದ್ದೇನಾ? ಅನಗತ್ಯ ಟೀಕೆಗಳಿಗೆಲ್ಲಾ ಉತ್ತರ ಕೊಟ್ಟು ನಾನು ಪೊಳ್ಳಾಗಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ತಿರುಗೇಟು ನೀಡಿದರು.

‘ಹಾಸನವನ್ನು ಯಾರಿಗೂ ಬರೆದುಕೊಟ್ಟಿಲ್ಲ’ ಎಂಬ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ‘ಅಧಿಕಾರ, ಅವಕಾಶ ಸಿಕ್ಕಾಗ ಕೆಲಸ ಮಾಡಿದ್ದೇನೆ. ಅದನ್ನು ಸಹಿಸದೆ ದ್ವೇಷದ ರಾಜಕಾರಣ ಮಾಡುವುದಿದ್ದರೆ ಮಾಡಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.