ADVERTISEMENT

ಅತ್ತೆ ಮಗಳ ಅಪಹರಿಸಿ ತಾಳಿ ಕಟ್ಟಲು ಯತ್ನಿಸಿದವನ ಬಂಧನ

ರಾಮನಗರದಲ್ಲಿ ಮೂವರ ಬಂಧನ, ಇಬ್ಬರು ಪರಾರಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 13:35 IST
Last Updated 5 ಫೆಬ್ರುವರಿ 2020, 13:35 IST
 ಎಸ್ಪಿ ಶ್ರೀನಿವಾಸ್‌ ಗೌಡ
ಎಸ್ಪಿ ಶ್ರೀನಿವಾಸ್‌ ಗೌಡ   

ಹಾಸನ: ಅತ್ತೆ ಮಗಳನ್ನು ಅಪಹರಿಸಿ ತಾಳಿ ಕಟ್ಟಲು ಯತ್ನಿಸಿದ ಯುವಕ ಸೇರಿದಂತೆ ಮೂವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅರಸೀಕೆರೆ ತಾಲ್ಲೂಕಿನ ಕುಡುಕುಂದಿ ಗ್ರಾಮದ ಕೆ.ಎನ್‌.ಮನುಕುಮಾರ್‌, ಪ್ರವೀಣ್‌ ಕುಮಾರ್‌, ಚನ್ನರಾಯಟ್ಟಣ ತಾಲ್ಲೂಕಿನ ತರಬೇನಳ್ಳಿ ಗ್ರಾಮದ ಟಿ.ಎನ್‌. ವಿನಯ್‌ ನನ್ನು ಬಂಧಿಸಲಾಗಿದೆ. ಘಟನೆಯ ವಿಡಿಯೊ ಮಾಡಿದ ಅರಸೀಕೆರೆ ತಾಲ್ಲೂಕಿನ ಕುಡುಕುಂದಿ ಗ್ರಾಮದ ಕೆ.ಎ.ಸಂದೀಪ್‌ ಮತ್ತು ಕಾರು ಚಾಲಕ ಗಾಂಧಿ ತಲೆಮರೆಸಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಪೊಲಿಸ್‌ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ ಗೌಡ ತಿಳಿಸಿದರು.

ದುದ್ದ ಹೋಬಳಿಯ ಗೌಡಗೆರೆ ಗ್ರಾಮದಮನುಕುಮಾರ್‌ ಎಂಬುವನೇ ಪ್ರಮುಖ ಆರೋಪಿ. ಈತ ಮದುವೆಯಾಗುವಂತೆ ತನ್ನ ಅತ್ತೆ ಮಗಳನ್ನು ಒತ್ತಾಯ ಮಾಡುತ್ತಿದ್ದ. ಆದರೆ ಯುವತಿಗೆ ಮದುವೆ ಇಷ್ಟವಿರಲಿಲ್ಲ. ಫೆ. 3ರಂದು ಟೈಲರಿಂಗ್ ಕಲಿಯಲು ಹಾಸನಕ್ಕೆ ಬಂದ ಯುವತಿಯನ್ನು ಡೇರಿ ಸರ್ಕಲ್‌ ಬಳಿ ಸ್ನೇಹಿತರ ಸಹಾಯದೊಂದಿಗೆ ಕಾರಿನಲ್ಲಿ ಅಪಹರಿಸಿದ್ದ. ಚಲಿಸುತ್ತಿದ್ದ ಕಾರಿನಲ್ಲಿಯೇ ಬಲವಂತವಾಗಿ ತಾಳಿ ಕಟ್ಟಲು ಯತ್ನಿಸಿದ. ಆದರೆ ಯುವತಿ ಅವಕಾಶ ನೀಡಲಿಲ್ಲ ಎಂದು ಎಸ್ಪಿ ವಿವರಿಸಿದರು.

ಬಲವಂತವಾಗಿ ತಾಳಿ ಕಟ್ಟುವ ವಿಡಿಯೊ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ನಡುವೆ ಯುವತಿ ಕಾಣೆಯಾಗಿರುವ ಬಗ್ಗೆ ಪೋಷಕರು ದುದ್ದ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಎರಡು ದೂರು ಆಧರಿಸಿ ತನಿಖೆ ನಡೆಸಿದಾಗ ವಿಡಿಯೊದಲ್ಲಿರುವ ಯುವತಿ ಹಾಗೂ ಕಾಣೆಯಾಗಿರುವ ಯುವತಿ ಒಬ್ಬಳೇ ಎಂಬುದು ಗೊತ್ತಾಯಿತು ಎಂದರು.

ADVERTISEMENT

ತನಿಖೆ ವೇಳೆ ಆರೋಪಿಗಳು ರಾಮನಗರದಲ್ಲಿ ಇರುವ ಬಗ್ಗೆ ಸುಳಿವು ದೊರೆಯಿತು. ಪೊಲೀಸರು ಯುವತಿಯನ್ನು ರಕ್ಷಿಸಿ, ಮೂವರನ್ನು ಬಂಧಿಸಿದ್ದಾರೆ. ಈ ಇಬ್ಬರುಮದುವೆಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಆಕೆ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ಬಳಿಕ ಪೋಷಕರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಯುವತಿಯನ್ನು ಮದುವೆ ಮಾಡಿಕೊಡಲು ಪೋಷಕರು ನಿರಾಕರಿಸಿದ ಹಿನ್ನಲೆಯಲ್ಲಿ ಅಪಹರಣ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಆರೋಪಿ ಪತ್ತೆ ಕಾರ್ಯದಲ್ಲಿ ಸಿಪಿಐ ಸತ್ಯನಾರಾಯಣ, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಎನ್.ಸಿ.ಮಧು, ಎಎಸ್‌ಐ ದಾಸೇಗೌಡ, ಪೊಲೀಸ್‌ ಕಾನ್‌ಸ್ಟೇಬಲ್‌ಗಳಾದ ದೇವರಾಜು, ಸಂತೋಷ್‌, ಕುಮಾರಿ, ಮುರಳಿ, ರಘುನಾಥ್‌ ಶ್ರಮಿಸಿದ್ದಾರೆ.

ಸಂಜೆ ವೇಳೆಗೆ ಈ ಇಬ್ಬರು ದೇವಸ್ಥಾನದಲ್ಲಿ ಮದುವೆಯಾಗಿ, ಹಾರ ಬದಲಿಸಿಕೊಂಡಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.