ADVERTISEMENT

ಹಾಸನಾಂಬೆ ಪವಾಡ; ಸತ್ಯಶೋಧನೆಗೆ ಒತ್ತಾಯ

ಸತ್ಯ ಶೋಧನಾ ಸಮಿತಿ ಕಾರ್ಯಕರ್ತರಿಂದ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 12:27 IST
Last Updated 16 ಅಕ್ಟೋಬರ್ 2018, 12:27 IST
 ಹಾಸನ  ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಅವರಿಗೆ ಸತ್ಯ ಶೋಧನಾ ಸಮಿತಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
 ಹಾಸನ  ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಅವರಿಗೆ ಸತ್ಯ ಶೋಧನಾ ಸಮಿತಿ ಕಾರ್ಯಕರ್ತರು ಮನವಿ ಸಲ್ಲಿಸಿದರು.   

ಹಾಸನ: ‘ಜಿಲ್ಲೆಯ ಅಧಿ ದೇವತೆ ಹಾಸನಾಂಬೆಯ ಪವಾಡ ಕುರಿತು ಸತ್ಯಶೋಧನೆ ನಡೆಸಬೇಕು ಹಾಗೂ ಈ ಬಾರಿ ಸಾರ್ವಜನಿಕರಿಗೆ ಉಚಿತ ದರ್ಶನ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸತ್ಯ ಶೋಧನಾ ಸಮಿತಿ ಕಾರ್ಯಕರ್ತರು ಆಗ್ರಹಿಸಿದರು.

ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ‘800 ವರ್ಷಗಳ ಇತಿಹಾಸ ಹೊಂದಿರುವ ದೇವಾಲಯದ ಪವಾಡಗಳ ಬಗ್ಗೆ ಅನೇಕ ಕಥೆ ಕಟ್ಟಲಾಗಿದೆ. ದೇವರಲ್ಲಿ ನಂಬಿಕೆ ಇರಬೇಕೆ ಹೊರತು ಮೂಢ ನಂಬಿಕೆಯಲ್ಲ. ಆದರೆ, ಮುಗ್ಧ ಜನರನ್ನು ಮರಳು ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಕೆಲ ಸುಳ್ಳು ಹೇಳುತ್ತಿದೆ. ದೇವಾಲಯದಲ್ಲಿ ದೀಪ ಆರುವುದಿಲ್ಲ, ಹೂವು ಬಾಡುವುದಿಲ್ಲ ಹಾಗೂ ಅನ್ನ ಹಳಸುವುದಿಲ್ಲ ಎನ್ನುವ ಮೂಲಕ ವಿಜ್ಞಾನಕ್ಕೆ ಅಚ್ಚರಿ ಮೂಡಿಸಿದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ಸಾರ್ವಜನಿಕರ ಧಾರ್ಮಿಕ ಭಾವನೆ ಹಾಗೂ ದೇವರ ಅಸ್ತಿತ್ವವನ್ನು ಸತ್ಯಶೋಧನಾ ಸಮಿತಿ ಪ್ರಶ್ನಿಸುತ್ತಿಲ್ಲ. ಆದರೆ, ದೇಗುಲದ ಪವಾಡಗಳ ಸತ್ಯಾಸತ್ಯತೆ ಎಲ್ಲರಿಗೂ ತಿಳಿಯಲಿ ಎಂಬುದಷ್ಟೇ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪವಾಡಗಳ ಸತ್ಯತೆಯನ್ನು ಬಹಿರಂಗವಾಗಿ ಸ್ಪಷ್ಟಪಡಿಸಿ ದೇವಸ್ಥಾನ ಮತ್ತು ದೇವರ ಘನತೆಯನ್ನು ಕಾಪಾಡಲು ಮುಂದಾಗಬೇಕು. ಈ ಕುರಿತು ಲಿಖಿತ ಹಿಂಬರಹ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ದೇಗುಲದ ಅರ್ಚಕರು ಅಲ್ಲಿ ಯಾವುದೇ ಪವಾಡ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಈ ಕುರಿತು ಸ್ಪಷ್ಟನೆ ನೀಡಬೇಕು’ ಎಂದರು.

‘ಹಾಸನಾಂಬೆಯ ದರ್ಶನಕ್ಕೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಬರುತ್ತಾರೆ. ಆದರೆ, ಅಗತ್ಯ ಮೂಲ ಸೌಕರ್ಯಗಳಿಲ್ಲದೆ ತೊಂದರೆಯಾಗುತ್ತದೆ. ಶೌಚಗೃಹ ಸಮಸ್ಯೆ, ಕುಡಿಯುವ ನೀರು ಸಿಗುವುದಿಲ್ಲ. ಸರದಿ ಸಾಲಿನಲ್ಲಿ ಹೋಗುವವರಿಗೆ ನೆರಳಿನ ವ್ಯವಸ್ಥೆ ಮಾಡಬೇಕು. ಭಕ್ತರಿಂದ ಯಾವುದೇ ಶುಲ್ಕ ಪಡೆಯಬಾರದು’ ಎಂದು ಆಗ್ರಹಿಸಿದರು.

ನಿಯೋಗದಲ್ಲಿ ಲೇಖಕ ಜ.ಹೊ.ನಾರಾಯಣಸ್ವಾಮಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ಟಿ.ಗುರುರಾಜ್, ಕೆಪಿಆರ್ ಎಸ್ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್ ಕುಮಾರ್, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್, ಮಮತ ಅರಸೀಕೆರೆ, ಸ್ತ್ರೀ ರೋಗ ತಜ್ಞೆ ಡಾ.ಸಾವಿತ್ರಿ, ಸುವರ್ಣ, ಶಿಕ್ಷಕ ಕೊಟ್ರೇಶ್ ಎಸ್.ಉಪ್ಪಾರ್, ಆರ್ ಪಿಐ ಸತೀಶ್, ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.