ADVERTISEMENT

ಶೋಷಣೆ ಮುಕ್ತ ಸಮಾಜ ನಿರ್ಮಾಣ: ಗಂಗಣ್ಣ

ಡಿಪ್ಲೊಮಾ ಇನ್ ಕೋ–ಆಪರೇಟಿವ್ ತರಬೇತಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 14:15 IST
Last Updated 16 ಜುಲೈ 2019, 14:15 IST
ಹಾಸನದಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿದರು.
ಹಾಸನದಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿದರು.   

ಹಾಸನ: ‘ಸಮಾಜದಲ್ಲಿ ಬಡ್ಡಿ ಶೋಷಣೆ ತಪ್ಪಿಸುವುದೇ ಸಹಕಾರಿ ಸಂಘದ ಮುಖ್ಯ ಉದ್ದೇಶವಾಗಿದೆ’ ಎಂದು ಹೇಳಿದರು.

ರಾಜ್ಯ ಸಹಕಾರ ಮಹಾ ಮಂಡಳ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದ ಆಶ್ರಯದಲ್ಲಿ ಮೈಸೂರು ವಿಭಾಗದ ಪರಿಶಿಷ್ಟ ಜಾತಿ, ಪಂಗಡದ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ (ಹೈಟೆಕ್ ಮಾದರಿ) ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ನಿರುದ್ಯೋಗಿಗಳು ಹಾಗೂ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸಹಕಾರ ಸಂಘಗಳು ಮಾಡುತ್ತಿದ್ದು, 2.50 ಕೋಟಿ ಜನರು ಇದರ ಸದುಪಯೋಗ ಪಡೆದ ಫಲಾನುಭವಿಗಳಾಗಿದ್ದಾರೆ. ಷೇರುದಾರರಾಗಿ ಕಾರ್ಯ ನಿರ್ವಹಿಸುವುದರ ಬಗ್ಗೆ ಪರಿಶಿಷ್ಟ ಜಾತಿ, ಪಂಗಡದವರಿಗೆ ಹೆಚ್ಚಿನ ಮಾರ್ಗದರ್ಶನ ನೀಡಬೇಕು. ಸಹಕಾರ ಬ್ಯಾಂಕ್‍ಗಳಲ್ಲಿ ಕಾರ್ಯನಿರ್ವಹಿಸುವವರು ಡಿಪ್ಲೊಮಾ ಇನ್ ಕೋ–ಆಪರೇಟಿವ್ ತರಬೇತಿಯನ್ನು ಕಡ್ಡಾಯವಾಗಿ ಪಡೆದಿರಬೇಕು ಎಂದು ತಿಳಿಸಿದರು.

ADVERTISEMENT

ರಾಜ್ಯ ಸಹಕಾರ ಮಹಾ ಮಂಡಳ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಅರುಣ್‍ಕುಮಾರ್ ಮಾತನಾಡಿ, ಸಹಕಾರ ಸಂಘಗಳಲ್ಲಿ ಸೇವಾ ಮನೋಭಾವ ಮೈಗೂಡಿಸಿಕೊಳ್ಳುವುದು ಮುಖ್ಯ. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವಂತಹ ಜವಾಬ್ದಾರಿಯನ್ನು ಅಧಿಕಾರಿಗಳು ನಿರ್ವಹಿಸಬೇಕು. ಇದರಲ್ಲಿ ಯಾವುದೇ ರೀತಿಯ ಲೋಪ ಉಂಟಾದರೆ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಆರ್.ಟಿ.ದ್ಯಾವೇಗೌಡ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡದವರಿಗೆ ಹಲವಾರು ಯೋಜನೆಗಳಿದ್ದು, ಫಲಾನುಭವಿಗಳ ಸಂಖ್ಯೆ ಕಡಿಮೆಯಾಗಿದೆ. ಅದಕ್ಕಾಗಿ ಈ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು. ಕಾರ್ಮಿಕರು, ನಿರುದ್ಯೋಗಿಗಳು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಿಗುವಂತಹ ಸೌಲಭ್ಯಗಳು ಕಾಲ ಕಾಲಕ್ಕೆ ದೊರಕಬೇಕು. ಆ ನಿಟ್ಟಿನಲ್ಲಿ ಅಧಿಕಾರಿ ಸಿಬ್ಬಂದಿ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಶೇಷಾದ್ರಿ, ಗ್ರಾಮೀಣ ಭಾಗದಲ್ಲಿ ಪ್ರಾದೇಶಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಸಿಗುವ ಸಾಲ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಬಹುದು ಎಂದರು.

ಸಹಕಾರ ಸಂಘಗಳ ವ್ಯವಸ್ಥಾಪಕ ನಿರ್ದೇಶಕ ಎ.ಸಿ.ದಿವಾಕರ ಅವರು ಸಣ್ಣ ಮತ್ತು ಅತಿಸಣ್ಣ ರೈತರು, ಮಹಿಳೆಯರು, ನಿರುದ್ಯೋಗಿಗಳಿಗೆ ಸಹಕಾರ ಸಂಘಗಳಿಂದ ಸೌಲಭ್ಯ ಪಡೆದುಕೊಳ್ಳುವ ಕುರಿತು ಹಾಗೂ ಬ್ಯಾಂಕ್‌ಗಳಿಂದ ಸಾಲ ಪಡೆಯಬೇಕಾದರೆ ವಹಿಸಬೇಕಾದ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು.

ರಾಜ್ಯ ಸಹಕಾರ ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಮುದ್ದಯ್ಯ, ಉಪನಿಬಂಧಕ ಜಿ.ಆರ್.ವಿಜಯ್‍ಕುಮಾರ್, ಕಾರ್ಯಕ್ರಮದ ಸಂಚಾಲಕರಾದ ಯೋಗೇಂದ್ರ ನಾಯಕ್, ಸಲಹೆಗಾರರಾದ ಪಿ.ರುದ್ರಪ್ಪ ಸೇರಿದಂತೆ ಹಾಸನ ಚಿಕ್ಕಮಗಳೂರು, ಮೈಸೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳ ಸಹಕಾರ ಸಂಘಗಳ ನಿರ್ದೇಶಕರು, ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.