ADVERTISEMENT

ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ: ಆರು ದಶಕ ಕಳೆದರೂ ಪೂರ್ಣವಾಗದ ಕಾಮಗಾರಿ

ಚಿದಂಬರಪ್ರಸಾದ್
Published 19 ಜನವರಿ 2026, 6:30 IST
Last Updated 19 ಜನವರಿ 2026, 6:30 IST
ಹಾಸನ ವಿಮಾನ ನಿಲ್ದಾಣದ ರನ್‌ವೇ
ಹಾಸನ ವಿಮಾನ ನಿಲ್ದಾಣದ ರನ್‌ವೇ   

ಹಾಸನ: ಇಲ್ಲಿನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಇರುವ ಬೇಡಿಕೆ ಆರು ದಶಕಗಳಿಗೂ ಮೀರಿದೆ. ಬೆಂಗಳೂರಿನಿಂದ ಸುಮಾರು 190 ಕಿ.ಮೀ. ದೂರದಲ್ಲಿರುವ ಹಾಸನಕ್ಕೆ ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶದಿಂದ 1966ರಲ್ಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭವಾದರೂ, ಯೋಜನೆಯ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. 2021ರಲ್ಲಿ ನೆಲಮಟ್ಟದಲ್ಲಿ ಕಾಮಗಾರಿ ಆರಂಭವಾದರೂ, ಎರಡು ವರ್ಷಗಳಿಂದ ಬಹುತೇಕ ಯಾವುದೇ ಪ್ರಗತಿ ಕಂಡುಬಂದಿಲ್ಲ.

2023ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದ ವೇಳೆ, ಶಾಸಕ ಸ್ವರೂಪ್ ಪ್ರಕಾಶ್ ಅವರ ಪ್ರಶ್ನೆಗೆ ಉತ್ತರಿಸಿದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರು, ಹಾಸನ ವಿಮಾನ ನಿಲ್ದಾಣ ಯೋಜನೆ 2024–25ರೊಳಗೆ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಯೋಜನೆಗೆ ₹193.65 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ₹164.47 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದರು.

ಎರಡು ವರ್ಷಗಳ ಬಳಿಕವೂ ಪರಿಸ್ಥಿತಿ ಬಹುತೇಕ ಅದೇ ಸ್ಥಿತಿಯಲ್ಲಿ ಉಳಿದಿದೆ. 2025ರ ಡಿಸೆಂಬರ್ 12ರಂದು ಶಾಸಕ ಎಚ್.ಡಿ. ರೇವಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂ.ಬಿ.ಪಾಟೀಲ, ಎರಡು ವರ್ಷಗಳ ಹಿಂದಿನ ಉತ್ತರದಂತೆಯೇ ಮಾಹಿತಿ ನೀಡಿದರು. ಇದುವರೆಗೆ ₹193.6 ಕೋಟಿ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ₹169.73 ಕೋಟಿ ಖರ್ಚಾಗಿದೆ ಎಂದಿದ್ದರು.

ADVERTISEMENT

ಜೆಡಿಎಸ್–ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಯೋಜನೆಗೆ ಮತ್ತೆ ಚಾಲನೆ ದೊರಕಿತು. 2007ರಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು, ಹಾಸನ ಗ್ರೀನ್‌ಫೀಲ್ಡ್ ಕಾರ್ಗೋ ವಿಮಾನ ನಿಲ್ದಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಜುಪಿಟರ್ ಏವಿಯೇಷನ್ ಸರ್ವೀಸಸ್ ಸಂಸ್ಥೆಯೊಂದಿಗೆ ಒಪ್ಪಂದವೂ ಆಗಿತ್ತು.

ಅಗತ್ಯವಿದ್ದ 960 ಎಕರೆ ಸಂಪೂರ್ಣ ಭೂಮಿ ಹಸ್ತಾಂತರವಾಗದೇ ಇರುವುದನ್ನು ಕಾರಣವನ್ನಾಗಿ ಮಾಡಿಕೊಂಡು, ಗಾಲ್ಫ್ ಕೋರ್ಸ್ ಮತ್ತು ಹೋಟೆಲ್ ಸೇರಿದಂತೆ ಇತರೆ ಚಟುವಟಿಕೆಗಳನ್ನೂ ಒಳಗೊಂಡ ಯೋಜನೆಗೆ ಗುತ್ತಿಗೆದಾರರು ಕೆಲಸ ಆರಂಭಿಸಲು ನಿರಾಕರಿಸಿದರು. 2018ರಲ್ಲಿ ಕಾಂಗ್ರೆಸ್–ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಖಾಸಗಿ ಕಂಪನಿಯೊಂದಿಗೆ ಇದ್ದ ಒಪ್ಪಂದವನ್ನು ರದ್ದುಪಡಿಸಲಾಯಿತು.

2021ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಬಜೆಟ್‌ನಲ್ಲಿ ಹಾಸನ ವಿಮಾನ ನಿಲ್ದಾಣಕ್ಕೆ ₹175 ಕೋಟಿ ಘೋಷಿಸಿದರು. ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ ಯೋಜನೆಯ ಅನುಷ್ಠಾನ ಸಂಸ್ಥೆಯಾಗಿ ನೇಮಕಗೊಂಡಿತು. ತೀರ್ಥಹಳ್ಳಿಯ ಇಬ್ರಾಹಿಂ ಶರೀಫ್ ಅವರಿಗೆ ಕಾಮಗಾರಿ ಗುತ್ತಿಗೆ ನೀಡಲಾಯಿತು.

ರನ್‌ವೇ, ಟ್ಯಾಕ್ಸಿವೇ, ಎಪ್ರಾನ್, ಪ್ರಯಾಣಿಕರ ಟರ್ಮಿನಲ್ ಕಟ್ಟಡ ಹಾಗೂ ಏರ್ ಟ್ರಾಫಿಕ್ ಕಂಟ್ರೋಲ್ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿಧಾನಸಭೆಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ಆದರೆ ಯೋಜನೆ ಯಾವಾಗ ಪೂರ್ಣಗೊಳ್ಳಲಿದೆ ಎಂಬುದರ ಕುರಿತು ಯಾವುದೇ ಸ್ಪಷ್ಟ ಕಾಲಮಿತಿ ಉಲ್ಲೇಖಿಸಿಲ್ಲ.

ಆರು ದಶಕಗಳ ನಿರೀಕ್ಷೆಯ ನಂತರವೂ ಹಾಸನ ವಿಮಾನ ನಿಲ್ದಾಣ ಯೋಜನೆ ಇನ್ನೂ ಗಾಳಿಯಲ್ಲಿ ತೇಲುತ್ತಿರುವ ಕನಸಾಗಿಯೇ ಉಳಿದಿದೆ ಎಂಬುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು, ವಿಮಾನ ನಿಲ್ದಾಣದ ವಿಷಯ ಪ್ರಸ್ತಾಪಿಸಿದ್ದರು. ‘ವಿಮಾನ ನಿಲ್ದಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅದಕ್ಕೆ ಮುಕ್ತಿ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. 

ಹಾಸನ ವಿಮಾನ ನಿಲ್ದಾಣದ ಕಾಮಗಾರಿ ನಡೆಯುತ್ತಿರುವುದು.
ವಿಮಾನ ನಿಲ್ದಾಣ ಕಾಮಗಾರಿ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ್ದು ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೋರಲಾಗುವುದು
ಶ್ರೇಯಸ್ ಪಟೇಲ್ ಸಂಸದ
ರೈತರ ಕೃಷಿ ಉತ್ಪನ್ನ ರಫ್ತು ಮಾಡಲು ಅನುಕೂಲ ಆಗುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ದೇವೇಗೌಡರು ಮುಂದಾಗಿದ್ದರು. ₹ 143 ಕೋಟಿ ಅನುದಾನ ಬಿಡುಗಡೆಯಾದರೆ ಸಂಪೂರ್ಣ ಕಾಮಗಾರಿ ಮಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ
ಎಚ್‌.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ

1960ರ ದಶಕದಲ್ಲೇ ಆರಂಭವಾದ ಕನಸು

ಹಾಸನ ವಿಮಾನ ನಿಲ್ದಾಣದ ಮೊದಲ ಪ್ರಸ್ತಾವವನ್ನು ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಡಬ್ಲ್ಯುಪಿಡಿ) 1960ರಲ್ಲಿ ತಯಾರಿಸಿತ್ತು. 1966ರ ನವೆಂಬರ್‌ನಲ್ಲಿ ಹಾಸನ ಉಪವಿಭಾಗಾಧಿಕಾರಿ 31 ಎಕರೆ 31 ಗುಂಟೆ ಖಾಸಗಿ ಭೂಮಿ ಮತ್ತು 58 ಎಕರೆ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದರು. 1971ರಲ್ಲಿ ಎರಡನೇ ಹಂತದಲ್ಲಿ ಮತ್ತೆ 12 ಎಕರೆ ಖಾಸಗಿ ಭೂಮಿ ಮತ್ತು 42 ಎಕರೆ ಸರ್ಕಾರಿ ಭೂಮಿಯನ್ನು ಪಡೆದುಕೊಳ್ಳಲಾಯಿತು. ಆದರೂ ಯೋಜನೆ ಹಲವು ದಶಕಗಳ ಕಾಲ ಕಾಗದದಲ್ಲೇ ಉಳಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.