
ಹಾಸನ: ತಾಲ್ಲೂಕಿನ ಕಮ್ಮರಿಗೆ ಗ್ರಾಮದ ಜಯರಾಮ್ ಅವರಿಗೆ ಸೇರಿದ ತೆಂಗಿನ ತೋಟಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಸುಮಾರು 50ಕ್ಕೂ ಹೆಚ್ಚು ತೆಂಗಿನ ಮರಗಳು ಸಂಪೂರ್ಣವಾಗಿ ಸುಟ್ಟಿವೆ.
8 ವರ್ಷಗಳಿಂದ ಬೆಳೆಸಿದ್ದ ತೆಂಗಿನ ಮರಗಳು ಇನ್ನು ಕೆಲವೇ ದಿನಗಳಲ್ಲಿ ಫಸಲು ನೀಡುವ ಹಂತದಲ್ಲಿದ್ದವು. ತೋಟದಲ್ಲಿ ಇಡಲಾಗಿದ್ದ ಒಣಗಿದ ಜೋಳಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬೆಂಕಿಯ ಜ್ವಾಲೆ ಇಡೀ ತೋಟಕ್ಕೆ ವ್ಯಾಪಿಸಿ, ತೆಂಗಿನ ಮರಗಳು ನಾಶವಾಗಿವೆ.
ಬೇಸಿಗೆ ವೇಳೆ ಟ್ಯಾಂಕರ್ ಮೂಲಕ ನೀರನ್ನು ತರಿಸಿ, ಹೆಚ್ಚಿನ ವೆಚ್ಚ ಭರಿಸಿ ಗಿಡಗಳನ್ನು ಪೋಷಿಸಿಕೊಂಡು ಬಂದಿದ್ದ ರೈತ ಜಯರಾಮ್, ಕಣ್ಣೆದುರೇ ಮರಗಳು ಸುಟ್ಟು ಹೋಗಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.
‘ಫಸಲು ನೀಡಬೇಕಾದ ಹಂತದಲ್ಲಿದ್ದ ಮರಗಳನ್ನು ಕಳೆದುಕೊಂಡು ನಮ್ಮ ಜೀವನವೇ ಸಂಕಷ್ಟಕ್ಕೆ ಸಿಲುಕಿದೆ. ನಾವು ಬೀದಿಗೆ ಬೀಳುವ ಸ್ಥಿತಿ ಬಂದಿದೆ’ ಎಂದು ಅವರು ಹೇಳಿದರು.
ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.