ಹಾಸನ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿರುವ ಆರೋಪಿಯನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ದಲಿತ ಸಂಘಟನೆ ಸಮನ್ವಯ ಸಮಿತಿ ಸದಸ್ಯರು ನಗರದ ಡಾ. ಅಂಬೇಡ್ಕರ್ ಪ್ರತಿಮೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಕಾರರು, ಆರೋಪಿ ವಕೀಲ ಕಿಶೋರ ರಾಕೇಶ್ ವಿರುದ್ಧ ಧಿಕ್ಕಾರ ಕೂಗಿದರು.
ಈ ವೇಳೆ ಮಾತನಾಡಿದ ಆರ್‌ಪಿಐ ಸತೀಶ್, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿಯವರು ಧಮ್ಮ ಮಾರ್ಗದಲ್ಲಿ ನಡೆಯುತ್ತಿರುವ ಡಾ.ಅಂಬೇಡ್ಕರ್ ಅನುಯಾಯಿಯಾಗಿದ್ದಾರೆ. ಇದನ್ನು ಮನುವಾದಿ ಮನಸ್ಥಿತಿಯ ಜಾತಿವಾದಿಗಳಿಗೆ ಅರಗಿಸಿಕೊಳ್ಳಲು ಆಗದೇ ಅವರ ಮೇಲೆ ಶೂ ಎಸೆದಿದ್ದಾರೆ ಎಂದು ಆರೋಪಿಸಿದರು.
ವಕೀಲ ಕಿಶೋರ್ ರಾಕೇಶ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯುವ ಮೂಲಕ ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ. ನ್ಯಾಯಮೂರ್ತಿ ಮೇಲೆ ಶೂ ಎಸೆಯಲು ದೇವರೇ ನನಗೆ ಪ್ರೇರಣೆ ನೀಡಿದ್ದು ಎಂಬ ಆರೋಪಿ ಹೇಳಿಕೆಯನ್ನು ವಿರೋಧಿಸುತ್ತೇವೆ ಎಂದರು.
ಶೀಘ್ರ ಆರೋಪಿ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು. ಇಲ್ಲದಿದ್ದರೆ ದಲಿತಪರ ಸಂಘಟನೆಗಳ ವತಿಯಿಂದ ದೇಶದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ದಲಿತ ಮುಖಂಡರಾದ ಕೃಷ್ಣದಾಸ್, ಅಂಬುಗ ಮಲ್ಲೇಶ್, ಸೋಮಶೇಖರ್, ಶಿವಮ್ಮ, ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.