ADVERTISEMENT

ಹಾಸನ: ಆನೆ ಕಾರ್ಯಪಡೆಯ 15 ಹುದ್ದೆಗಳ ಪೈಕಿ 11 ಖಾಲಿ

ಜಾನೆಕೆರೆ ಆರ್‌.ಪರಮೇಶ್‌
Published 16 ಜನವರಿ 2026, 0:43 IST
Last Updated 16 ಜನವರಿ 2026, 0:43 IST
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು   

ಸಕಲೇಶಪುರ (ಹಾಸನ ಜಿಲ್ಲೆ): ಜಿಲ್ಲೆಯಲ್ಲಿ ಕಾಡಾನೆಗಳ ನಿಯಂತ್ರಣಕ್ಕಾಗಿ ರಚಿಸಿರುವ ಆನೆ ಕಾರ್ಯಪಡೆಗೇ ಬಲವಿಲ್ಲದಂತಾಗಿದೆ.

ಮಂಜೂರಾಗಿರುವ 15 ಹುದ್ದೆಗಳಲ್ಲಿ 11 ಖಾಲಿ ಇವೆ. ಪ್ರಮುಖವಾಗಿರುವ ಡಿಸಿಎಫ್‌ ಹುದ್ದೆಯ ಜೊತೆಗೆ ವಲಯ ಅರಣ್ಯಾಧಿಕಾರಿ ಹುದ್ದೆಯೂ ಖಾಲಿ ಇದೆ. ಎಸಿಎಫ್ 2025ರ ಸೆಪ್ಟೆಂಬರ್‌ನಿಂದ ನಿರಂತರ ರಜೆಯಲ್ಲಿದ್ದಾರೆ. ಉಪ ವಲಯ ಅರಣ್ಯಾಧಿಕಾರಿಗಳ ನಾಲ್ಕು ಹುದ್ದೆ ಪೈಕಿ ಒಂದು ಖಾಲಿ ಇದೆ. 8 ಅರಣ್ಯ ರಕ್ಷಕರಿರಬೇಕಾದ ಕಾರ್ಯಪಡೆಯಲ್ಲಿ ಒಬ್ಬರಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ, ವಾಹನ ಚಾಲಕರು ಹಾಗೂ ಆನೆ ಓಡಿಸಲು ಬೇಕಾದ ಅಗತ್ಯ ಸೌಕರ್ಯಗಳೇ ಇಲ್ಲ.

ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡುವಂತೆ ಎರಡು ವರ್ಷಗಳಲ್ಲಿ ನಾಲ್ಕು ಬಾರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಪಡೆ ಮುಖ್ಯಸ್ಥರಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪತ್ರಗಳನ್ನು ಬರೆದಿದ್ದಾರೆ. 

ADVERTISEMENT

‘ಎರಡೂವರೆ ದಶಕಗಳಿಂದ ಜೀವಂತವಾಗಿರುವ ಕಾಡಾನೆ ಸಮಸ್ಯೆಯನ್ನು ಯಾವುದೇ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ’ ಎಂಬ ಜನರ ಆರೋಪವೂ ನಿರಂತರವಾಗಿದೆ. 

‘ಗ್ರಾಮಗಳಲ್ಲಿ ಕಾಡಾನೆಗಳಿವೆ ಎಂಬ ಎಚ್ಚರಿಕೆಯನ್ನಷ್ಟೇ ನಾವು ನೀಡಬಹುದು. ಆನೆಗಳು ಎದುರಾದರೆ, ಜನರಷ್ಟೇ ಅಲ್ಲ, ನಮಗೂ ದಿಕ್ಕು ತೋಚದಂತಾಗುತ್ತದೆ’ ಎಂಬುದು ಅರಣ್ಯ ಇಲಾಖೆಯ ಸಿಬ್ಬಂದಿಯ ಅಳಲು.

ಜನರ ಆಕ್ರೋಶ: ಕಾಡಾನೆಗಳಿಂದ ಜೀವಕ್ಕೆ ಹಾನಿಯಾದಾಗ, ಕುಟುಂಬದವರು, ಹೋರಾಟಗಾರರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ.

‘ಸರ್ಕಾರದ ವಿರುದ್ಧ ಘೋಷಣೆ ಕೂಗಿ, ತಮ್ಮವರನ್ನು ಕಳೆದುಕೊಂಡ ದುಃಖ, ನೋವನ್ನು ಹೊರ ಹಾಕುತ್ತಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ಪರಿಹಾರದ ಚೆಕ್‌ ವಿತರಿಸಿ, ಭರವಸೆ ನೀಡಿ ಹೋಗುವುದು ವಾಡಿಕೆಯಂತಾಗಿದೆ’ ಎನ್ನುತ್ತಾರೆ ಇಲ್ಲಿನ ಜನ.

ಅಗತ್ಯ ಸಿಬ್ಬಂದಿ ಸೌಕರ್ಯ ಕಲ್ಪಿಸುವಂತೆ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದೇನೆ. ಸಕಲೇಶಪುರಕ್ಕೆ ಬರಲಿರುವ ಅರಣ್ಯ ಸಚಿವರಿಗೆ ಮತ್ತೊಮ್ಮೆ ಮನವರಿಕೆ ಮಾಡುತ್ತೇನೆ.
ಸಿಮೆಂಟ್ ಮಂಜು ಶಾಸಕ
ಹಾಸನ ಜಿಲ್ಲೆಯಲ್ಲಿನ ಮಾನವ– ಆನೆ ಸಂಘರ್ಷವನ್ನು ತಗ್ಗಿಸಲು ‌ಅತ್ಯುತ್ತಮ ಸಾಧನ ಮತ್ತು ತಂತ್ರಜ್ಞಾನ ಬಳಸಲು ಬದ್ಧವಾಗಿದೆ.
ಸೌರಭ್‌ಕುಮಾರ್ ಡಿಸಿಎಫ್‌

‘ಹುದ್ದೆಗಳ ಭರ್ತಿಗೆ ಒತ್ತಡ ಹೇರಿ’

‘ಹುದ್ದೆಗಳನ್ನು ಭರ್ತಿ ಮಾಡುವಂತೆ ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ತರಬೇಕು. ಅದನ್ನು ಬಿಟ್ಟು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಆಕ್ರೋಶ ಹೊರಹಾಕುವುದು ಎಷ್ಟು ಸರಿ’ ಎಂದು ಅರಣ್ಯ ಇಲಾಖೆ ನೌಕರರೊಬ್ಬರು ಪ್ರಶ್ನಿಸಿದರು. ‘ಸಿಬ್ಬಂದಿ ಕೊರತೆ ನಡುವೆಯೂ ಮರಗಳ್ಳತನ ಬೇಟೆ ತಡೆಯುತ್ತೇವೆ. ಕಾಡ್ಗಿಚ್ಚು ನಂದಿಸುತ್ತೇವೆ. ಅತಿವೃಷ್ಟಿ ಅನಾವೃಷ್ಟಿಯಲ್ಲಿ ಆಡಳಿತದೊಂದಿಗೆ ಕೈಜೋಡಿಸುತ್ತೇವೆ. ಹೆದ್ದಾರಿಯಲ್ಲಿ ಮಣ್ಣು ಕುಸಿದರೆ ಮರ ಬಿದ್ದರೆ ಧಾವಿಸುತ್ತೇವೆ. ಜೊತೆಗೆ ಕಾಡಾನೆಗಳ ಕಾರ್ಯಾಚರಣೆಯಲ್ಲೂ ಕೆಲಸ ಮಾಡಬೇಕು. ಕೆಲವು ದಿನ 24X7 ಕೆಲಸ ಮಾಡಿದ್ದೇವೆ. ಆದರೆ ಅವಘಡ ಸಂಭವಿಸಿದಾಗ ನಮ್ಮನ್ನೇ ಗುರಿ ಮಾಡಲಾಗುತ್ತಿದೆ’ ಎಂದು ವನಪಾಲಕರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.