ಸಾಂದರ್ಭಿಕ ಚಿತ್ರ
– ಐ ಸ್ಟಾಕ್ ಚಿತ್ರ
ಹಾಸನ: ಜಿಲ್ಲೆಯ ವಿವಿಧೆಡೆ ನಡೆದಿರುವ ಮೂರು ಪ್ರತ್ಯೇಕ ಕಳವು ಪ್ರಕರಣಗಳಲ್ಲಿ ₹ 23 ಲಕ್ಷ ಮೌಲ್ಯದ ಚಿನ್ನಾಭರಣ, ₹ 2.65 ಲಕ್ಷ ನಗದು ಕಳವು ಮಾಡಲಾಗಿದೆ.
ಅರಸೀಕೆರೆ ತಾಲ್ಲೂಕಿನ ಗಂಡಸಿ ಹ್ಯಾಂಡ್ ಪೋಸ್ಟ್‌ನ ಮನೆಯ ಒಳಗೆ ನುಗ್ಗಿ ₹17 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹2.60 ಲಕ್ಷ ನಗದು ಕಳವು ಮಾಡಲಾಗಿದೆ.
ಆರೋಗ್ಯ ಸರಿಯಿಲ್ಲದ್ದರಿಂದ ಗ್ರಾಮದ ಸುಮಿತ್ರಾ ಅವರು ಅ.22 ರಂದು ಮಾತ್ರೆಗಳನ್ನು ನುಂಗಿ ಮನೆಯಲ್ಲೇ ಮಲಗಿದ್ದರು. ಸಂಜೆ ಮಗಳು ದಿವ್ಯಾ ತಾಯಿಯ ಕೋಣೆಗೆ ಬಂದಿದ್ದಾಳೆ. ಈ ವೇಳೆ ಬೀರುವಿನಲ್ಲಿದ್ದ ಚಿನ್ನದ ಒಡವೆ ಬಾಕ್ಸ್‌ಗಳು ಮಂಚದ ಮೇಲೆ ಬಿದ್ದಿದ್ದವು. ಕಳ್ಳರು ಮನೆಯ ಒಳಗೆ ಬಂದು ಬೀರುವಿನಲ್ಲಿದ್ದ 166 ಗ್ರಾಂ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಿ ಆಭರಣ ಕಳವು:
ಅರಸೀಕೆರೆ ತಾಲ್ಲೂಕಿನ ಕಸಬಾ ಹೋಬಳಿ ಜಿ.ಶಂಕರನಹಳ್ಳಿ ಗ್ರಾಮದ ಕರಾಳಮ್ಮು ದೇವಸ್ಥಾನದ ಬಾಗಿಲು ಮುರಿದು ಆಭರಣ ಕಳವು ಮಾಡಲಾಗಿದೆ.
ದೇವಾಲಯದ ಅರ್ಚಕ ಚಂದ್ರಪ್ಪ ಅವರು, ಅ.22 ರಂದು ಸಂಜೆ 7 ಗಂಟೆ ಸಮಯದಲ್ಲಿ ಪೂಜೆ ಮಾಡಿ ಬೀಗ ಹಾಕಿಕೊಂಡು ಹೋಗಿದ್ದರು. ಮರುದಿನ ಬೆಳಿಗ್ಗೆ ಬಂದು ನೋಡಿದಾಗ ದೇಗುಲ ಮುಂಭಾಗದ ಗೇಟ್‌ನ ಲಾಕ್ ಮುರಿಯಲಾಗಿತ್ತು. ಒಳಗೆ ಹೋಗಿ ನೋಡಿದಾಗ ಗುಡಿಯಲ್ಲಿದ್ದ 4 ಕೆ.ಜಿ. ತೂಕದ ಬೆಳ್ಳಿಯ ವಿಗ್ರಹ, 250 ಗ್ರಾಂ ತೂಕವುಳ್ಳ ಬೆಳ್ಳಿಯ ಶಂಕ- ಚಕ್ರ, 6 ಗ್ರಾಂ ಚಿನ್ನದ ತಾಳಿ, 6 ಗ್ರಾಂ ಚಿನ್ನದ ತಾಳಿ, 6 ಕೆ.ಜಿ ಪಂಚ ಲೋಹದ ಸಿಂಹ, 1 ವಜ್ರದ ಮೂಗುತಿ ಸೇರಿದಂತೆ ₹ 4.55 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಬೀಗ ಮುರಿದು ಚಿನ್ನಾಭರಣ, ನಗದು ಕಳವು:
ತಾಲ್ಲೂಕಿನ ಕೆಲವತ್ತಿ ಗ್ರಾಮದ ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ, ನಗದು ಕಳವು ಮಾಡಲಾಗಿದೆ.
ಜಾವಗಲ್ ಹೋಬಳಿ ವೃಂದಾವನ ಗ್ರಾಮದ ಶಂಕರಪ್ಪ ಅವರ ಅಕ್ಕ ಸಿದ್ದಗಂಗಮ್ಮ ಅವರು ಕೆಲವತ್ತಿ ಗ್ರಾಮದ ತಮ್ಮ ಮನೆಗೆ ಬೀಗ ಹಾಕಿಕೊಂಡು ಅ.22ರ ಸಂಜೆ ತಮ್ಮನ ಮನೆಗೆ ಬಂದಿದ್ದರು. ಮರುದಿನ ಬೆಳಿಗ್ಗೆ ಕೆಲವತ್ತಿ ಗ್ರಾಮಕ್ಕೆ ಬಂದು ನೋಡಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಒಳಗೆ ಹೋಗಿ ನೋಡಿದಾಗ, ಮನೆಯ ಡೋರ್ ಲಾಕ್ ಮುರಿದು ಒಳನುಗ್ಗಿರುವ ಕಳ್ಳರು, ಕೋಣೆಯಲ್ಲಿನ ವಾರ್ಡ್ ರೋಬ್‌ನಲ್ಲಿದ್ದ ₹1,41,750 ಮೌಲ್ಯದ ಚಿನ್ನಾಭರಣ, ₹ 5 ಸಾವಿರ ನಗದು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.