ADVERTISEMENT

ಹಾಸನ: ಸರ್ಕಾರಿ ಶಾಲೆ ವಿಲೀನ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 4:47 IST
Last Updated 15 ಫೆಬ್ರುವರಿ 2026, 4:47 IST
ಹಾಸನ ತಾಲ್ಲೂಕಿನ ಗೊರೂರಿನ ಅಂಬೇಡ್ಕರ್‌ ನಗರದ ಸರ್ಕಾರಿ ಶಾಲೆ ವಿಲೀನ ವಿರೋಧಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ಹಾಸನ ತಾಲ್ಲೂಕಿನ ಗೊರೂರಿನ ಅಂಬೇಡ್ಕರ್‌ ನಗರದ ಸರ್ಕಾರಿ ಶಾಲೆ ವಿಲೀನ ವಿರೋಧಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ಹಾಸನ: ಗೊರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್ ನಗರದ ಎ.ಕೆ. ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಗೊರೂರಿನ ಕೆಪಿಎಸ್ ಮ್ಯಾಗ್ನೆಟ್ ಶಾಲೆಯಲ್ಲಿ ವಿಲೀನಗೊಳಿಸಿ ಮುಚ್ಚುವ ಸರ್ಕಾರದ ಕ್ರಮವನ್ನು ಖಂಡಿಸಿ, ಎಐಡಿಎಸ್ಒ ಜಿಲ್ಲಾ ಕೌನ್ಸಿಲ್ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಈ ವೇಳೆ ಎಐಡಿಎಸ್ಒ ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 12ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಇದರ ವಿರುದ್ಧ ಹೋರಾಟ ನಡೆದಿದೆ. ಗೊರೂರಿನ ಅಂಬೇಡ್ಕರ್ ನಗರದ ಎ.ಕೆ. ಕಾಲೊನಿಯ ಸರ್ಕಾರಿ ಶಾಲೆ ಮುಚ್ಚುವ ಯತ್ನವನ್ನು ನಾವು ಒಗ್ಗಟ್ಟಾಗಿ ಎದುರಿಸುತ್ತೇವೆ ಎಂದು ಹೇಳಿದರು.

ಶಾಲೆ ಉಳಿಸಿ ಸಮಿತಿಯ ಅಧ್ಯಕ್ಷ, ನಿವೃತ್ತ ಮುಖ್ಯ ಶಿಕ್ಷಕ ನರಸಿಂಹನ್ ಮಾತನಾಡಿ, ನಮ್ಮ ಊರಲ್ಲಿ ಸರ್ಕಾರಿ ಶಾಲೆ ಇರುವುದು ನಮ್ಮ ಹೆಮ್ಮೆ. ಮಕ್ಕಳು ಸಮವಸ್ತ್ರ ಧರಿಸಿ, ಪುಸ್ತಕ ಹಿಡಿದು ಊರಲ್ಲಿ ಓಡಾಡುವುದೇ ನಮಗೆ ಸಂತೋಷ. ಈ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ. ಶಾಲೆ ಉಳಿಸಲು ಎಂತಹ ಹೋರಾಟಕ್ಕೂ ಸಿದ್ಧ ಎಂದು ಹೇಳಿದರು.

ADVERTISEMENT

ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು ಎನ್ನುವ ಅಭಿಪ್ರಾಯವೂ ವ್ಯಕ್ತವಾಯಿತು. ಒಂದರಿಂದ ಐದನೇ ತರಗತಿವರೆಗೆ ಸರ್ಕಾರಿ ಶಾಲೆಗಳು ಅದೇ ಊರಿನಲ್ಲಿ ಕಾರ್ಯನಿರ್ವಹಿಸುವುದು ಸೂಕ್ತ. ಸಣ್ಣ ಮಕ್ಕಳು ದೂರದೂರಿಗೆ ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ಪೋಷಕರಿಗೂ ಪ್ರತಿದಿನ ಮಕ್ಕಳನ್ನು ಕರೆದುಕೊಂಡು ಹೋಗಿ ಬಿಟ್ಟು ಬರುವುದು ಕಷ್ಟ. ಆದ್ದರಿಂದ ಶಾಲೆ ಮುಚ್ಚಲು ನಾವು ಬಿಡುವುದಿಲ್ಲ ಎಂದರು.

ಎಐಡಿಎಸ್‌ಒ ಜಿಲ್ಲಾ ಘಟಕದ ಕಾರ್ಯದರ್ಶಿ ಸುಷ್ಮಾ, ಉಪಾಧ್ಯಕ್ಷ ಅಭಿಷೇಕ್, ಗ್ರಾಮಸ್ಥರಾದ ಮಹೇಂದ್ರ, ಮಂಜುನಾಥ್, ದಿವಾಕರ್, ಭಾಗ್ಯ, ಕುಮಾರಿ, ಶ್ವೇತಾ, ಮಮತಾ, ಸರಸಮಣಿ, ಶಾಂತಮ್ಮ ಸೇರಿದಂತೆ 30ಕ್ಕೂ ಹೆಚ್ಚು ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.