ADVERTISEMENT

ಹಾಸನ: ಸಂತೆ ಸುಂಕ ರದ್ದುಗೊಳಿಸಲು ಎಚ್.ಡಿ. ರೇವಣ್ಣ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 13:44 IST
Last Updated 10 ಫೆಬ್ರುವರಿ 2025, 13:44 IST
ಹೊಳೆನರಸೀಪುರ ಪುರಸಭೆ ಬಜೆಟ್‍ಮಂಡನೆ ಸಭೆ ಸೋಮವಾರ ನಡೆಯಿತು. ಶಾಸಕ ಎಚ್.ಡಿ. ರೇವಣ್ಣ, ಪುರಸಭಾಧ್ಯಕ್ಷೆ ಕೆ. ಶ್ರೀಧರ್, ಉಪಾಧ್ಯಕ್ಷೆ  ಸಾವಿತ್ರಮ್ಮ. ಮುಖ್ಯಾಧಿಕಾರಿ ಶಿವಕುಮಾರ್ ಉಪಸ್ಥಿತರಿದ್ದರು.
ಹೊಳೆನರಸೀಪುರ ಪುರಸಭೆ ಬಜೆಟ್‍ಮಂಡನೆ ಸಭೆ ಸೋಮವಾರ ನಡೆಯಿತು. ಶಾಸಕ ಎಚ್.ಡಿ. ರೇವಣ್ಣ, ಪುರಸಭಾಧ್ಯಕ್ಷೆ ಕೆ. ಶ್ರೀಧರ್, ಉಪಾಧ್ಯಕ್ಷೆ  ಸಾವಿತ್ರಮ್ಮ. ಮುಖ್ಯಾಧಿಕಾರಿ ಶಿವಕುಮಾರ್ ಉಪಸ್ಥಿತರಿದ್ದರು.   

ಹೊಳೆನರಸೀಪುರ: ಪಟ್ಟಣದಲ್ಲಿ ಸಂತೆ ಸುಂಕ ಹಾಗೂ ದಿನವಹಿ ಮಾರುಕಟ್ಟೆ ಸುಂಕ ವಸೂಲಿ ಮಾಡುವುದನ್ನು ರದ್ದು ಪಡಿಸಿ ಎಂದು ಪುರಸಭಾ ಸದಸ್ಯರು ಸಲಹೆ ನೀಡಿದರು.

ಪುರಸಭಾ ಸದಸ್ಯರ ಸಲಹೆಗೆ ಸ್ಪಂದಿಸಿದ ಶಾಸಕ ಎಚ್.ಡಿ. ರೇವಣ್ಣ ಸಂತೆ ಸುಂಕ ಹರಾಜನ್ನು ರದ್ದುಪಡಿಸಿ ರೈತರಿಗೆ ಒಳ್ಳೆಯದನ್ನು ಮಾಡಿ, ನಮ್ಮ ಪುರಸಭಾ ಸದಸ್ಯರ ಸಲಹೆಯನ್ನು ಗೌರವಿಸಿ ಎಂದರು. ಸೋಮವಾರ ಪುರಸಭೆ ಸಭಾಂಗಣದಲ್ಲಿ ಕರೆಯಲಾಗಿದ್ದ ಬಜೆಟ್ ಮಂಡನೆ ಸಭೆಯಲ್ಲಿ ಸಂತೆ ಸುಂಕ, ದಿನವಹಿ ಮಾರುಕಟ್ಟೆ ಸುಂಕ ವಸೂಲಿಗೆ ಟೆಂಡರ್ ಕರೆಯುವ ಬಗ್ಗೆ ಚರ್ಚಿಸುವ ವಿಷಯ ಬಂದಾಗ ಸದಸ್ಯರು ಅದನ್ನು ವಿರೋಧಿಸಿ ಸುಂಕ ವಸೂಲಾತಿಯನ್ನು ರದ್ದು ಪಡಿಸಿ ಎಂದು ಸಲಹೆ ನೀಡಿದರು.

ಮುಖ್ಯಾಧಿಕಾರಿ ಶಿವಕುಮಾರ್ ಸುಂಕ ವಸೂಲಿ ಮಾಡಬೇಕು ಎಂಬ ನಿಯಮ ಇದೆ ಎಂದಾಗ, ಆಕ್ಷೇಪಿಸಿದ ಸದಸ್ಯ ಶಿವಣ್ಣ, ತರಕಾರಿ ಮಂಜು ಎಲ್ಲವನ್ನೂ ಸರ್ಕಾರವೇ ಸೂಚಿಸುವುದಾದರೆ ಸಭೆಗೆ ನಾವೇಕೆ ಬರಬೇಕು. ನಮ್ಮ ಸಭೆಯ ನಿರ್ಣಯಕ್ಕೆ ಗೌರವವೇ ಇಲ್ಲವೇ ಎಂದಾಗ ಶಾಸಕ ರೇವಣ್ಣ ಬೇಡ ರದ್ದು ಪಡಿಸಿ ಎಂದು ಸೂಚಿಸಿದರು.

ADVERTISEMENT

ವಿಷಯಗಳ ಮಂಡಿಸುವಾಗ ಸದಸ್ಯ ಎಚ್.ಕೆ. ಪ್ರಸನ್ನ ಮಧ್ಯದಲ್ಲಿ ತಡೆದು, ನಮ್ಮ ಪುರಸಭೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರಿಗೆ ತೀವ್ರ ತೊಂದರೆ ಕೊಡುತ್ತಿದ್ದಾರೆ. ಜನರು ಖಾತೆ ಮಾಡಿಸಿಕೊಳ್ಳಲು, ಈಸ್ವತ್ತು ಮಾಡಿಸಿಕೊಳ್ಳಲು ಅಲೆದಲೆದು ಸುಸ್ತಾಗುತ್ತಿದ್ದಾರೆ ಎಂದಾಗ, ರೇವಣ್ಣ ಅವರು ಸ್ವಲ್ಪ ಕುಳಿತುಕೋ ಎಂದರೂ ಕೇಳದೆ ಏರು ದ್ವನಿಯಲ್ಲಿ ‘ಸ್ವಲ್ಪ ನಾವೇಳುವುದನ್ನೂ ಕೇಳಿ’ ಎಂದರು.

ಪುರಸಭೆಯ ಕಾರ್ಯವೈಖರಿಗೆ ಜನ ಬೇಸತ್ತು ಹೋಗಿದ್ದಾರೆ. ಇವರು ಜನರ ಕೆಲಸಗಳ ಬಗ್ಗೆ ವಿಳಂಬ ಮಾಡುತ್ತಿರುವುದರಿಂದ ಶಾಸಕರಾದ ನಿಮಗೂ ಕೆಟ್ಟ ಹೆಸರು ಬರುತ್ತಿದೆ. ಸದಸ್ಯರ ಬಗ್ಗೆಯೂ ಜನರು ಅಸಮಾಧಾನದ ಮಾತುಗಳನ್ನು ಆಡುತ್ತಿದ್ದಾರೆ ಎಂದರು. ಇದರಿಂದ ಬೇಸರಗೊಂಡತೆ ಕಂಡ ಶಾಸಕ ರೇವಣ್ಣ ‘ಯಾಕ್ರೀ ಜನರನ್ನು ಅಲೆಸುತ್ತೀರಿ. ಇನ್ನೊಮ್ಮೆ ಈರೀತಿ ದೂರು ಬಂದರೆ ಸರಿ ಇರಲ್ಲ ನೋಡಿ’ ಎಂದು ಎಚ್ಚರಿಸಿದರು.

ಪುರಸಭೆಯ ರಮೇಶ್ ವಿಷಯಗಳ ಮಂಡನೆ ಮಾಡುತ್ತಿದ್ದಂತೆ ರೇವಣ್ಣ ಅವರ ಸೂಚನೆ ಮೇರೆಗೆ ಕೆಲವು ಅಂಗೀಕಾರವಾದವು. ಪುರಸಭೆ ವ್ಯಾಪ್ತಿಯ ಜಮೀನುಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸಲು ಬಂದಿರುವ ಯಾವುದೇ ಅರ್ಜಿಗಳನ್ನು ಪರಿಗಣಿಸಬೇಡಿ ಎಂದರು.

ಟೆಂಡರ್ ನೀಡುವ ವಿಚಾರ, ವಾಹನಗಳ ರಿಪೇರಿ ಮಾಡಿಸುವ ವಿಚಾರ, ಬೀದಿ ದೀಪ ಅಳವಡಿಸುವ ವಿಚಾರಗಳು ಯಾವುದೇ ಚರ್ಚೆ ಇಲ್ಲದೆ ಅಂಗೀಕಾರವಾದವು. ಕೆಲವು ವಿಷಯಗಳ ಬಗ್ಗೆ ಸದಸ್ಯ ಜಿ.ಕೆ. ಸುಧಾನಳಿನಿ ಚರ್ಚಿಸಿದರು. ನಮ್ಮೂರಿನ ಮಹಾತ್ಮಾಗಾಂಧಿ ಉದ್ಯಾನವನ ಅಭಿವೃದ್ಧಿ ಪಡಿಸಿ ಎಂದಾಗ ಉದ್ಯಾನವನ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯಸರ್ಕಾರದಿಂದ ₹6 ಕೋಟಿ ಹಣ ಬಿಡುಗಡೆ ಆಗುವ ಮಾಹಿತಿ ಇದೆ ಎಂದು ರೆವಿನ್ಯೂ ಇನ್‍ಸ್ಪೆಕ್ಟರ್ ನಾಗೇಂದ್ರಕುಮಾರ್ ಮಾಹಿತಿ ನೀಡಿದರು.

ಪುರಸಭಾಧ್ಯಕ್ಷ ಕೆ. ಶ್ರೀಧರ್ ಬಜೆಟ್ ಮಂಡಿಸುವ ಮುನ್ನ ಎಚ್.ಡಿ. ದೇವೇಗೌಡರು, ಶಾಸಕ ಎಚ್.ಡಿ. ರೇವಣ್ಣ ಅವರು ಪುರಸಭೆಗೆ ನೀಡಿರುವ ಕೊಡುಗೆಯನ್ನು ಸ್ಮರಿಸಿ, ಎಲ್ಲಾ ಮೂಲಗಳಿಂದ ₹188.13 ಕೋಟಿ 13 ಲಕ್ಷದ 18,484 ಸಾವಿರ ರೂ ಆದಾಯ, 187ಕೋಟಿ, 85 ಲಕ್ಷದ 93 ಸಾವಿರ ಖರ್ಚು, 27 ಲಕ್ಷದ 89 ಸಾವಿರ ಉಳಿತಾಯದ ಬಜೆಟ್ ಮಂಡಿಸಿದರು. ಉಪಾಧ್ಯಕ್ಷೆ ಸಾವಿತ್ರಮ್ಮ, ಮುಖ್ಯಾಧಿಕಾರಿ ಶಿವಕುಮಾರ್
ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.