ADVERTISEMENT

ಹಾಸನ | ಹಿರೀಸಾವೆ ದೊಡ್ಡ ಕೆರೆ ಏರಿ ದುರಸ್ತಿ: ಶಾಸಕ ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 2:13 IST
Last Updated 26 ಅಕ್ಟೋಬರ್ 2025, 2:13 IST
ಹಿರೀಸಾವೆ ದೊಡ್ಡ ಕೆರೆಯ ಏರಿಯ ಮಣ್ಣು ಮತ್ತು ರಸ್ತೆ ತಡೆಗೋಡೆ ಕುಸಿದ ಸ್ಥಳವನ್ನು ಶನಿವಾರ ಶಾಸಕ ಬಾಲಕೃಷ್ಣ ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು 
ಹಿರೀಸಾವೆ ದೊಡ್ಡ ಕೆರೆಯ ಏರಿಯ ಮಣ್ಣು ಮತ್ತು ರಸ್ತೆ ತಡೆಗೋಡೆ ಕುಸಿದ ಸ್ಥಳವನ್ನು ಶನಿವಾರ ಶಾಸಕ ಬಾಲಕೃಷ್ಣ ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು    

ಹಿರೀಸಾವೆ: ಇಲ್ಲಿನ ದೊಡ್ಡ ಕೆರೆ ಏರಿ ಮಣ್ಣು ಕುಸಿದಿರುವ ಸ್ಥಳದ ದುರಸ್ತಿ ಕಾರ್ಯವನ್ನು ಮುಂದಿನ ಜನವರಿ ತಿಂಗಳಲ್ಲಿ ಮಾಡಿಸುವುದಾಗಿ ಶಾಸಕ ಸಿ.ಎನ್. ಬಾಲಕೃಷ್ಣ ಶನಿವಾರ ಹೇಳಿದರು.

ಕೆರೆ ಏರಿಯ ಮಣ್ಣು ಕುಸಿದು, ರಸ್ತೆಯ ಕಬ್ಬಿಣದ ತಡೆಗೋಡೆ ಬಿದ್ದು ಹೋದ ಸ್ಥಳಕ್ಕೆ ಶಾಸಕರು, ಸಣ್ಣ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ಏರಿ ಸರಿಪಡಿಸುವ ಬಗ್ಗೆ ಶಾಸಕನಾಗಿ ತಾತ್ಸಾರ ಮಾಡಿಲ್ಲ. ಹಣ ಬಿಡುಗಡೆ ಮಾಡಿಸಿ, ಟೆಂಡರ್ ಮೂಲಕ ಗುತ್ತಿಗೆ ಸಹ ನೀಡಲಾಗಿದೆ. ಕೆರೆ ಸಂಪೂರ್ಣ ಭರ್ತಿಯಾಗಿ, ಹೆಚ್ಚು ನೀರು ಇರುವುದರಿಂದ ಈಗ ಕಾಮಗಾರಿ ಮಾಡಲು ಸಾಧ್ಯವಿಲ್ಲ. ಜನವರಿ ಮೊದಲ ವಾರದಲ್ಲಿ ಕೆರೆ ಕೋಡಿಯ ಒಂದು ಭಾಗವನ್ನು ಕಿತ್ತು, ಸ್ವಲ್ಪ ನೀರನ್ನು ಹೊರಹಾಕಿ ನಂತರ ಕೆಲಸ ಪ್ರಾರಂಭಿಸಲಾಗುವುದು. ರಸ್ತೆ ಮತ್ತು ಏರಿ ಬಗ್ಗೆ ಎರಡು ಇಲಾಖೆಗಳ ನಡುವೆ ಇರುವ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಬಗೆಹರಿಸಲಾಗುವುದು’ ಎಂದರು.

ADVERTISEMENT

ಏರಿಯ ಮಣ್ಣು ರಸ್ತೆವರೆಗೆ ಕುಸಿದಿರುವುದರಿಂದ ಹೆಚ್ಚು ಭಾರವನ್ನು ಸಾಗಿಸುವ ಲಾರಿ ಸೇರಿದಂತೆ ಇತರೆ ದೊಡ್ಡ ವಾಹನಗಳ ಓಡಾದಂತೆ ಸೂಚನ ಫಲಕಗಳನ್ನು ಎರಡು ಕಡೆ ಹಾಕುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಸಣ್ಣ ನೀರಾವರಿ ಇಲಾಖೆಯ ಎಇಇ ಸುಂದರ ರಾಜ್, ಲೋಕೋಪಯೋಗಿ ಇಲಾಖೆಯ ಎಇಇ ಕೆ. ರುಕ್ಮಿಣಿ ಎಂಜಿನಿಯರ್ ಮಂಜಣ್ಣಗೌಡ, ಗ್ರಾಮದ ಮುಖಂಡರಾದ ರವಿಕುಮಾರ್, ದಿನೇಶ್, ಮಜನಾಥ್, ವೆಂಕಟೇಶ್, ಲೋಕೇಶ್, ಕಿರೀಸಾವೆ ದೇವರಾಜು, ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್, ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿಖಿಲ್ ಗೌಡ, ಪಿಎಸಿಸಿಬಿ ನಿರ್ದೇಶಕರಾದ ಬೋರೇಗೌಡ, ನಾಗೇಶ್  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.