ADVERTISEMENT

ಹಾಸನ: ಜೋಪಡಿಯಲ್ಲೇ ವಾಸ, ದುರಸ್ತಿ ಕಾಣದ ಸೇತುವೆಗಳು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 15:29 IST
Last Updated 12 ಆಗಸ್ಟ್ 2020, 15:29 IST
ಜಾವಗಲ್‌ನ ಗಾಂಧಿ ನಗರ ಈರಯ್ಯ ಅವರು ಗುಡಿಸಲಿನಲ್ಲಿ ವಾಸವಿರುವುದು.
ಜಾವಗಲ್‌ನ ಗಾಂಧಿ ನಗರ ಈರಯ್ಯ ಅವರು ಗುಡಿಸಲಿನಲ್ಲಿ ವಾಸವಿರುವುದು.   

ಹಾಸನ: ಜಿಲ್ಲೆಯ ಜಾವಗಲ್ ಹೋಬಳಿಯ ಗಾಂಧಿ ನಗರದ ಈರಯ್ಯ ಅವರ ಮನೆ ಕುಸಿದು ವರ್ಷ ಕಳೆದರೂ ಪೂರ್ಣ ಪರಿಹಾರ ಸಿಕ್ಕಿಲ್ಲ. ತಾತ್ಕಾಲಿಕವಾಗಿ ₹ 90 ಸಾವಿರ ಪರಿಹಾರ ಹಣ ನೀಡಲಾಗಿತ್ತು. ಬಳಿಕ ತಾಲ್ಲೂಕು ಕಚೇರಿಗೆ ಅವರು ಹಲವಾರು ಬಾರಿ ಅಲೆದರೂ ಬಾಕಿ ಹಣ ಬಿಡುಗಡೆ ಆಗಲಿಲ್ಲ.

‘ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಮೊಮ್ಮಕ್ಕಳ ಜತೆ ಗುಡಿಸಲಿನಲ್ಲಿ ವಾಸವಿದ್ದೇನೆ. ಕೂಲಿ ಮಾಡಿ ಜೀವನಸಾಗಿಸುತ್ತಿದ್ದೇನೆ. 90 ಸಾವಿರ ರೂಪಾಯಿ ಹೊಸ ಮನೆ ಪಾಯ ತೆಗೆಯಲು ಖರ್ಚಾಗಿದೆ. ಚೆಕ್‌ ಬಂದಾಗ ಕೊಡ್ತೀವಿ ಅಂತ ಅಧಿಕಾರಿಗಳು ಹೇಳಿ ಕಳುಹಿಸುತ್ತಾರೆ. ಹಣವಿಲ್ಲದ ಕಾರಣ ಪಾಯದ ಮೇಲೆ ಸೋಗೆ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದೇನೆ.’ಎಂದು ಈರಯ್ಯ ಅಳಲು ತೋಡಿಕೊಂಡರು.

‘ಮನೆ ದಾಖಲೆಗಳನ್ನು ತಹಶೀಲ್ದಾರ್ ಕಚೇರಿಗೆ ಕಳುಹಿಸಲಾಗಿದೆ. ತಾತ್ಕಾಲಿಕವಾಗಿ ಪರಿಹಾರ ನೀಡಲಾಗಿದೆ. ಬಾಕಿ ಮೊತ್ತದ ಚೆಕ್‌ ಬಂದ ಕೂಡಲೇ ನೀಡಲಾಗುವುದು’ಎಂದು ಜಾವಗಲ್‌ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್‌ ತಿಳಿಸಿದರು.

ADVERTISEMENT

ಬೇಲೂರು ತಾಲ್ಲೂಕಿನ ಅಗಸರಹಳ್ಳಿ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿ ವರ್ಷ ಕಳೆದರೂ ದುರಸ್ತಿ ಮಾಡಿಲ್ಲ. ಇದರಿಂದ 8 ಕಿ.ಮೀ. ದೂರದ ದಾರಿಯನ್ನು 15 ಕಿ.ಮೀ. ಸುತ್ತಿ ಬಳಸಿಕೊಂಡು ಓಡಾಡಬೇಕಾಗಿದೆ. ಕೆಲ ದಿನಗಳ ಹಿಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ತಾತ್ಕಾಲಿಕವಾಗಿ ಮಣ್ಣು ಹಾಕಿ ದುರಸ್ತಿಗೊಳಿಸಲಾಗಿತ್ತು. ಆದರೆ, ಈಗ ಮತ್ತೆ ಸೇತುವೆ ಕೊಚ್ಚಿ ಹೋಗಿದೆ.

ಅರೇಹಳ್ಳಿ ಹೋಬಳಿಯ ಗುಜ್ಜೇನಹಳ್ಳಿಯ ಹೊಸ ಮನೆ ರಸ್ತೆ ಕೊಚ್ಚಿ ಸಹ ಕೊಚ್ಚಿ ಹೋಗಿದ್ದು, ವಾಹನ ಸಂಚಾರಕ್ಕೆ ಕಚ್ಛಾ ರಸ್ತೆ ಮಾಡಲಾಗಿತ್ತು. ಮಳೆಗೆ ಅದು ಸಹ ಕೊಚ್ಚಿ ಹೋಗಿದೆ.

ಆಲೂರು ತಾಲ್ಲೂಕಿನ ಅಗಸರಹಟ್ಟಿ ಗ್ರಾಮದ ದೊಡ್ಡ ಕೆರೆ ಏರಿ ಮಧ್ಯ ಭಾಗಕ್ಕೆ ತುಂಡಾಗಿ ವರ್ಷವಾದರೂ ಇನ್ನೂ ದುರಸ್ತಿಯಾಗಿಲ್ಲ. ಇದರಿಂದ ಅಗಸರಹಟ್ಟಿ-ಮಾವನೂರು ಸಂಪರ್ಕ ರಸ್ತೆ ಬಂದ್‌ ಆಗಿದೆ. ಅಗಸರಹಟ್ಟಿಯಿಂದ ಮಾವನೂರು ಗ್ರಾಮಕ್ಕೆ ಬರಬೇಕಾದರೆ ಸುಮಾರು 8 ಕಿ. ಮೀ. ಆಲೂರು ಮೂಲಕ ಬಳಸಿ ತಿರುಗಾಡಬೇಕಾಗಿದೆ.ಅಗಸರಹಟ್ಟಿ ಕೆರೆ ಏರಿ ತುಂಡಾಗಿರುವುದರಿಂದ ನೀರು ಯಗಚಿ ನದಿ ಪಾಲಾಗುತ್ತಿದೆ. ನೂರಾರು ಎಕರೆ ಪ್ರದೇಶದಲ್ಲಿ ಗದ್ದೆ ಬೆಳೆ ಮಾಡದೆ ತೊಡಕಾಗಿದೆ.

ಸಕಲೇಶಪುರ ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ಬಡಿ-ಸೂಳ್ಳಕ್ಕಿ ಸರ್ಕಾರಿ ಹಿರಿಯ ಪ್ರಾಥಮಿ ಪಾಠಶಾಲೆ ಮುಖ್ಯ ಕಟ್ಟಡದ ಅರ್ಧ ಭಾಗ ಬಿದ್ದು ಹೋಗಿದ್ದು, ಇನ್ನೂ ದುರಸ್ತಿ ಆಗಿಲ್ಲ. ಮಕ್ಕಳ ಸಂಖ್ಯೆ ಕಡಿಮೆಇರುವುದರಿಂದ ಉಳಿದ ಕೊಠಡಿಗಳಲ್ಲಿ ತರಗತಿ ನಡೆಯುತ್ತಿದೆ.

ಹಾಸನ ಜಿಲ್ಲೆಯಲ್ಲಿ ಕಳೆದ ವರ್ಷ ಅತಿವೃಷ್ಟಿಯಿಂದ ₹200 ಕೋಟಿ ನಷ್ಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.