
ನುಗ್ಗೇಹಳ್ಳಿ: ಇಲ್ಲಿನ ಪ್ರಸಿದ್ಧ ಲಕ್ಷ್ಮೀನರಸಿಂಹಸ್ವಾಮಿ, ಸದಾಶಿವಸ್ವಾಮಿ ದೇವಾಲಯಗಳ ರಥದ ಬೀದಿ ರಸ್ತೆ ಅಭಿವೃದ್ಧಿಗೆ ₹ 25 ಲಕ್ಷ ಅನುದಾನ ನೀಡಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಎದುರು ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಲಕ್ಷ್ಮೀನರಸಿಂಹಸ್ವಾಮಿ ಹಾಗೂ ಸದಾಶಿವ ಸ್ವಾಮಿ ದೇವಾಲಯಗಳು ಕೇಂದ್ರ ಪ್ರಾಚ್ಯ ವಸ್ತು ಇಲಾಖೆಗೆ ಸೇರಿವೆ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಪ್ರತಿದಿನ ಬರುತ್ತಾರೆ. ಅವರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಉತ್ತಮ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿದ್ದು, ಮುಂಬರುವ ದಿನಗಳಲ್ಲಿ ಪ್ರವಾಸಿ ಮಂದಿರ ಹಾಗೂ ಶೌಚಾಲಯ ವ್ಯವಸ್ಥೆಗೆ ಅನುದಾನ ನೀಡಲಾಗುವುದು’ ಎಂದರು.
‘ನವಿಲೆ ಗ್ರಾಮದ ನಾಗರತ್ನಮ್ಮ ಅವರು ದೇವಾಲಯದ ಅಭಿವೃದ್ಧಿಗೆ ₹ 1.50 ಕೋಟಿಯನ್ನು ಪ್ರಾಚ್ಯ ವಸ್ತು ಇಲಾಖೆಗೆ ದಾನವಾಗಿ ನೀಡಿದ್ದಾರೆ. ಸದ್ಯದಲ್ಲೇ ಇಲಾಖೆಯಿಂದ ಕಾಮಗಾರಿ ಆರಂಭಗೊಳ್ಳಲಿದೆ. ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ದೇವಾಲಯ ಸೇವಾ ಸಮಿತಿ ತಮಗೆ ಮನವಿ ಮಾಡಿದ್ದು, ಕೆಎಸ್ಆರ್‌ಟಿಸಿ ಡಿಸಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿರುವೆ’ ಎಂದರು.
ಚನ್ನರಾಯಪಟ್ಟಣ ಟಿಎಪಿಎಂಎಸ್ ಅಧ್ಯಕ್ಷ ಮೆಡಿಕಲ್ ವೆಂಕಟೇಶ್, ನಿರ್ದೇಶಕ ತೋಟಿ ನಾಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ್ ಯಾದವ್, ಕೃಷಿ ಪತ್ತಿನ ಅಧ್ಯಕ್ಷ ಪಟೇಲ್ ಕುಮಾರಸ್ವಾಮಿ, ಸದಾಶಿವ ಸ್ವಾಮಿ ಸೇವಾ ಸಮಿತಿ ಕಾರ್ಯದರ್ಶಿ ಗೋಪಾಲ್, ಉಪಾಧ್ಯಕ್ಷ ಜಗನ್ನಾಥ್, ಖಜಾಂಚಿ ನಾರಾಯಣ್, ನಿರ್ದೇಶಕರಾದ ರಾಮು, ಪ್ರಸನ್ನ ಕೇಶವಾಚಾರ್, ಮುಖಂಡರಾದ ದೊರೆಸ್ವಾಮಿ, ಪುಟ್ಟಸ್ವಾಮಿ, ಅಣತಿ ಯೋಗೇಶ್, ವಿಎನ್ ಮಂಜುನಾಥ್, ಎಚ್ ಬಿ ರಂಗಸ್ವಾಮಿ, ಜಾವೀದ್, ಎಂಜಿನಿಯರ್ ಪ್ರೀತಮ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.