
ಹಾಸನ: ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ, ಗುಣಮಟ್ಟದ ಔಷಧಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಮತ್ತು ಆರೋಗ್ಯ ಹಕ್ಕಿನ ಕಾಯ್ದೆ ಜಾರಿಗೆ ಆಗ್ರಹಿಸಿ ಡ್ರಗ್ಸ್ ಆ್ಯಕ್ಷನ್ ಫೋರಂ ನೇತೃತ್ವದಲ್ಲಿ ಜನಪರ ಸಂಘಟನೆ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಎನ್.ಆರ್. ವೃತ್ತದ ಮೂಲಕ ಸಾಗಿದ ಪ್ರತಿಭಟನಕಾರರು, ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತ ಔಷಧಿ ದೊರೆಯಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆ ವೈದ್ಯರು ಹೊರಗೆ ಔಷಧ ಚೀಟಿ ಬರೆಯಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ವಿತರಿಸಲಾಗುವ ಔಷಧಿಗಳ ಗುಣಮಟ್ಟದ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು ಎಂದು ಆಗ್ರಹಿಸಿದರು.
ತಮಿಳುನಾಡು, ಕೇರಳ ಹಾಗೂ ರಾಜಸ್ಥಾನದಲ್ಲಿ ಉಚಿತ ಔಷಧ ವಿತರಣೆ ವ್ಯವಸ್ಥೆ ಜಾರಿಯಲ್ಲಿದ್ದು, ಅದೇ ಮಾದರಿ, ಕರ್ನಾಟಕದಲ್ಲೂ ಅನುಸರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆ ಜಾರಿಯಾದರೆ ಸಾರ್ವಜನಿಕರಿಗೆ ಸಮಗ್ರ ಹಾಗೂ ಕೈಗೆಟಕುವ ಆರೋಗ್ಯ ಸೇವೆ ದೊರೆಯಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಶುಲ್ಕಗಳಿಗೆ ಯಾವುದೇ ಮಿತಿ ಇಲ್ಲ. ಹಾಗಾಗಿ ರೋಗಿಗಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಇದರಿಂದ ಆರೋಗ್ಯ ಸೇವೆ ದುಬಾರಿಯಾಗಿದ್ದು, ಬಡವರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಶುಲ್ಕಗಳಿಗೆ ಮಿತಿ ವಿಧಿಸುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದ್ದು, ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಸ್ಪತ್ರೆಗಳಲ್ಲಿ ಖಾಸಗೀಕರಣದ ಪ್ರಯತ್ನ ಸಂಪೂರ್ಣವಾಗಿ ಕೈಬಿಡಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿರುವ ಬಡ ಜನರ ಆರೋಗ್ಯದ ಹಿತಾಸಕ್ತಿ ರಕ್ಷಿಸುವುದು ಸರ್ಕಾರದ ಜವಾಬ್ದಾರಿ ಎಂದರು.
ಕೆಆರ್‌ಎಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್, ಆರ್. ಮರಿ ಜೋಸೆಫ್, ಕೃತಿಕಾ, ಎನ್. ಮಾರತಮ್ಮ, ಮಂಜುನಾಥ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.