ಹಾಸನ: ವೈದ್ಯಕೀಯ ನಿರ್ಲಕ್ಷ್ಯ ತೋರಿದ ನಗರದ ರಾಜೀವ್ ಆಸ್ಪತ್ರೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆ ₹15 ಲಕ್ಷ ದಂಡ ವಿಧಿಸಿದೆ
ಅರಕಲಗೂಡು ತಾಲ್ಲೂಕಿನ ಬಿಸಿಲಹಳ್ಳಿ ಪದ್ಮಾವತಿ ಎನ್.ಟಿ. ಅವರು ಗರ್ಭಿಣಿಯಾಗಿದ್ದು, ರಾಜೀವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಾ.ಪೂರ್ಣಿಮ ಅವರು 2014 ರ ಆಗಸ್ಟ್ 21 ರಂದು ಸಾಮಾನ್ಯ ಹೆರಿಗೆ ಮಾಡಿಸುವುದಾಗಿ ದಿನಾಂಕ ನಿಗದಿಪಡಿಸಿದ್ದರು. ಮಗುವಿನ ತೂಕ 3.5 ಕೆ.ಜಿ ಗಿಂತ ಹೆಚ್ಚಿದ್ದು, ನಿಗದಿಪಡಿಸಿದ್ದ ದಿನಕ್ಕಿಂತ ಮುಂಚೆ ಪದ್ಮಾವತಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸಿಜೇರಿಯನ್ ಹೆರಿಗೆ ಮಾಡುವಂತೆ ಕೋರಿದ್ದರೂ ಡಾ.ಪೂರ್ಣಿಮಾ ಅವರು ಅದನ್ನು ನಿರಾಕರಿಸಿದ್ದರು.
2014 ರ ಆಗಸ್ಟ್ 14 ರಂದು ರಾತ್ರಿ ಸುಮಾರು 11.30 ಕ್ಕೆ ಪದ್ಮಾವತಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನರ್ಸಿಂಗ್ ಹೋಂನಲ್ಲಿ ದಾಖಲಿಸಿಕೊಂಡು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಸಾಮಾನ್ಯ ಹೆರಿಗೆ ಆಗುವುದಾಗಿ ಭರವಸೆ ನೀಡಿದ್ದರು. ಆದರೆ ಪದ್ಮಾವತಿ ಅವರು ಹೆರಿಗೆ ನೋವು ತಡೆಯಲು ಸಾಧ್ಯವಾಗದೇ ಇದ್ದಾಗ ಸಿಜೆರಿಯನ್ ಮಾಡಲು ಕೇಳಿಕೊಂಡರು. ಆದರೂ ವೈದ್ಯರು, ಅವರ ಮಾತನ್ನು ಕೇಳದೇ, ಸಾಮಾನ್ಯ ಹೆರಿಗೆ ಮಾಡಿಸಿದರು. ಈ ಸಂದರ್ಭದಲ್ಲಿ ಮಗುವಿನ ಕತ್ತು ಮತ್ತು ಬಲಗೈ ಅನ್ನು ಬಲವಾಗಿ ಎಳೆದ ಕಾರಣ, ಮಗುವಿನ ಬಲಗೈ ನರಗಳು ಕುತ್ತಿಗೆಯ ಭಾಗದಿಂದ ಕಿತ್ತು ಬಂದಿದ್ದು, ಮಗು ತನ್ನ ಬಲಗೈ ಸ್ವಾಧೀನ ಕಳೆದುಕೊಂಡಿತ್ತು.
ಈ ವಿಚಾರವನ್ನು ಮುಚ್ಚಿಟ್ಟು, ಕ್ರಮೇಣ ಮಗುವಿನ ಬಲಗೈ ಸರಿ ಆಗಲಿದೆ ಎಂದು ಹೇಳಿ ಪದ್ಮಾವತಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಮಗುವಿನ ಬಲಗೈಗೆ ಅಂಗವಿಕಲತೆ ಉಂಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಪಾರ ಹಣ ಖರ್ಚಾಗಿದೆ. ಇದಕ್ಕೆ ರಾಜೀವ್ ಆಸ್ಪತ್ರೆಯವರು ಮತ್ತು ಡಾ.ಪೂರ್ಣಿಮಾ ಅವರ ನಿರ್ಲಕ್ಷ್ಯ ಹಾಗೂ ಸೇವಾನ್ಯೂನತೆಗೆ ಕಾರಣ ಎಂದು ಪದ್ಮಾವತಿ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಆಯೋಗದ ಅಧ್ಯಕ್ಷರಾದ ಚಂಚಲ ಸಿ.ಎಂ. ಹಾಗೂ ಅನುಪಮಾ ಆರ್. ಅವರನ್ನು ಒಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿದ್ದು, ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ಸೇವಾ ನೂನ್ಯತೆ ಉಂಟಾಗಿದೆ ಎಂದು ನಿರ್ಣಯಿಸಿದರು. ₹ 15 ಲಕ್ಷ ಅನ್ನು ಶೇ 10 ಬಡ್ಡಿಯೊಂದಿಗೆ ಪಾವತಿಸುವಂತೆ ತೀರ್ಪು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.