ADVERTISEMENT

ಹಾಸನ ದುರಂತ: ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಕುಟುಂಬಗಳು

ಮಕ್ಕಳನ್ನು ಕಳೆದುಕೊಂಡ ಪಾಲಕರ ರೋದನೆ: ಆಘಾತದಿಂದ ಹೊರಬರದ ಮೊಸಳೆಹೊಸಹಳ್ಳಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 2:07 IST
Last Updated 15 ಸೆಪ್ಟೆಂಬರ್ 2025, 2:07 IST
ಶುಕ್ರವಾರ ಮೊಸಳೆಹೊಸಹಳ್ಳಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದ ವೇಳೆ ಕಂಟೈನರ್‌ ಲಾರಿ ಗುದ್ದಿದ ರಸ್ತೆ ವಿಭಜಕ
ಶುಕ್ರವಾರ ಮೊಸಳೆಹೊಸಹಳ್ಳಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದ ವೇಳೆ ಕಂಟೈನರ್‌ ಲಾರಿ ಗುದ್ದಿದ ರಸ್ತೆ ವಿಭಜಕ   

ಹಾಸನ: ಮೊಸಳೆಹೊಸಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಯುವಕರ ಕುಟುಂಬಗಳು ನಿತ್ಯ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಇನ್ನೇನು ಪದವಿ ಮುಗಿಸಿ, ಉದ್ಯೋಗ ಹಿಡಿದು ಕುಟುಂಬಕ್ಕೆ ಆಧಾರ ಆಗಬೇಕಿದ್ದ ಯುವಕರು ಮೃತಪಟ್ಟಿದ್ದು, ಅವರನ್ನು ನೆನೆದು ಪಾಲಕರು ಕಣ್ಣೀರು ಹಾಕುತ್ತಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಗೋಕುಲ್ ಅವರ ತಾಯಿ ಕಸ ಗುಡಿಸಿ ಆತನನ್ನು ಓದಿಸುತ್ತಿದ್ದರು. ಎಂಜಿನಿಯರ್ ಆಗುವ ಕನಸು ಕಂಡಿದ್ದ ಮಗ ಕಣ್ಣೆದುರಲ್ಲೇ ಸಾವನ್ನಪ್ಪಿದ್ದಾನೆ. ತಮ್ಮ ಮಗನ ಕಳೆದುಕೊಂಡ ತಾಯಿ ದುಃಖದಲ್ಲಿದ್ದಾರೆ.

ಮಗ ಉತ್ತಮ ವಿದ್ಯಾರ್ಥಿಯಾಗಿದ್ದು, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉನ್ನತ ಶಿಕ್ಷಣಕ್ಕೆ ಹೋಗುವ ಕನಸು ಕಂಡಿದ್ದ. ಮಗನನ್ನು ಕಸ ಗುಡಿಸುವ ಕೆಲಸದಿಂದ ಬಂದ ಹಣದಿಂದ ಓದಿಸುತ್ತಿದ್ದೆ ಎಂದು ರೋದಿಸುತ್ತಲೇ ಹೇಳಿದರು.

ADVERTISEMENT

ಗೋಕುಲ್‌ ತನ್ನ ಸ್ನೇಹಿತರೊಂದಿಗೆ ಗಣೇಶೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ. ಮೆರವಣಿಗೆಯ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು, ಮೃತಪಟ್ಟಿದ್ದಾನೆ. ನಮ್ಮ ಜೀವನವೇ ಮುಗಿದಂತಾಗಿದೆ ಎಂದು ದುಃಖಿಸಿದರು.

ನಾಯಿಯ ಮೂಕರೋದನೆ: ಹೊಳೆನರಸೀಪುರ ತಾಲ್ಲೂಕಿನ ಕಬ್ಬಿನಹಳ್ಳಿ ಪ್ರವೀಣ್‌ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಪಾಲಕರ ಜೊತೆಗೆ ಆತ ಸಾಕಿದ್ದ ನಾಯಿಯೂ ಮೂಕರೋದನೆಯಲ್ಲಿದೆ.

ಐದು ವರ್ಷದ ಹಿಂದೆ ಲ್ಯಾಬ್ರಡಾರ್‌ ನಾಯಿಯನ್ನು ತಂದಿದ್ದ ಪ್ರವೀಣ್‌, ಅದಕ್ಕೆ ದಿವಾನ್‌ ಎಂದು ಹೆಸರಿಟ್ಟು ಸಾಕಿದ್ದರು. ಇದೀಗ ಪ್ರವೀಣ್‌ ಕಾಣದೇ ಕಂಗಾಲಾಗಿರುವ ದಿವಾನ್‌, ನರಳಾಡುತ್ತಿದೆ. ನಿತ್ಯ ಪ್ರವೀಣ್‌ ಕೆಲಸಕ್ಕೆ ಹೋಗುವಾಗ ಅವರೊಂದಿಗೆ ಸ್ವಲ್ಪ ದೂರ ಹೋಗಿ ಕಳುಹಿಸಿ ಬರುತ್ತಿದ್ದ ನಾಯಿ, ಸಂಜೆ ಪ್ರವೀಣ್‌ ಬರುವ ವೇಳೆ ಮನೆಯ ಮಹಡಿಯ ಮೇಲೆ ಹೋಗಿ ಕಾಯುತ್ತಿತ್ತು. ಇದೀಗ ಪ್ರವೀಣ್‌ ಕಾಣದೇ ಅದೂ ದುಃಖದಲ್ಲಿ ಮುಳುಗಿದ್ದು, ಪ್ರವೀಣ್‌ ತಂದೆ ಹನುಮಯ್ಯ ಹಾಗೂ ಭಾಗ್ಯ, ನಾಯಿಯನ್ನು ಸಂತೈಸುತ್ತಿದ್ದಾರೆ.

ಕುಟುಂಬಗಳಿಗೆ ದೇವೇಗೌಡರ ಸಾಂತ್ವನ:

ಮೊಸಳೆ ಹೊಸಹಳ್ಳಿಗೆ ಭಾನುವಾರ ಭೇಟಿ ನೀಡಿದ ಎಚ್‌.ಡಿ. ದೇವೇಗೌಡ, ಸ್ಥಳದಲ್ಲಿದ್ದ ಗ್ರಾಮಸ್ಥರಿಂದ ಹಾಗೂ ಪೊಲೀಸರಿಂದ ಘಟನೆಯ ಮಾಹಿತಿ ಪಡೆದರು.

ನಂತರ ಘಟನೆಯಲ್ಲಿ ಮೃತಪಟ್ಟವರ ಮನೆಗಳಿಗೆ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.

ಹೊಳೆನರಸೀಪುರ ತಾಲ್ಲೂಕಿನ ಕಬ್ಬಿನಹಳ್ಳಿ ಪ್ರವೀಣ್‌ ಸಾಕಿದ್ದ ನಾಯಿಯನ್ನು ಸಂತೈಸುತ್ತಿರುವ ಪ್ರವೀಣ್‌ ತಂದೆ ಹನುಮಯ್ಯ
ಮೊಸಳೆಹೊಸಹಳ್ಳಿಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಉಬ್ಬು ಅಳವಡಿಸುವ ಕಾಮಗಾರಿ ಆರಂಭಿಸಲಾಗಿದೆ
ಹಾಸನದ ಹಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು
10 ಜನ ಮೃತಪಟ್ಟು 20ಕ್ಕೂ ಹೆಚ್ಚು ಜನ ಗಾಯಗೊಂಡಿರುವುದು ದಿಗ್ಭ್ರಮೆ ಮೂಡಿಸಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬ ಹಾಗೂ ಬಂಧು ಮಿತ್ರರಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ.
ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ

ಚಾಲಕ ಭುವನೇಶ್ ಬೆಂಗಳೂರು ಆಸ್ಪತ್ರೆಗೆ

ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೆರವಣಿಗೆ ವೇಳೆ 10 ಜನರ ಸಾವಿಗೆ ಕಾರಣನಾಗಿದ್ದ ಟ್ರಕ್ ಚಾಲಕ ಭುವನೇಶ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಭೂವನೇಶ್‌ನನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಲಾಗಿದೆ. ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಪೆಟ್ಟಾಗಿದ್ದು ನಂತರ ನಾಗಮಂಗಲದ ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆಯಾದ ಹಿನ್ನೆಲೆ ಶನಿವಾರ ರಾತ್ರಿಯೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆತನನ್ನು ವಶಕ್ಕೆ ಪಡೆದ ಪೊಲೀಸರು ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ನಿರ್ಧರಿಸಿದ್ದರು. ಪೊಲೀಸರು ವಶಕ್ಕೆ ಪಡೆದ ಬಳಿಕ ಎದೆನೋವು ಆರೋಗ್ಯದ ಸಮಸ್ಯೆ ಆಗುತ್ತಿದೆ ಎಂದು ಆತ ಹೇಳಿಕೊಂಡಿದ್ದು ಪೊಲೀಸರು ಮತ್ತೆ ಆತನನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆದ್ದಾರಿಯಲ್ಲಿ ಉಬ್ಬು ಅಳವಡಿಕೆ

ರಸ್ತೆ ಅಪಘಾತ ಸಂಭವಿಸಿದ ನಂತರ ಎಚ್ಚೆತ್ತಿರುವ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಇದೀಗ ಮೊಸಳೆ ಹೊಸಹಳ್ಳಿಯ ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ರಸ್ತೆ ಉಬ್ಬು ಅಳವಡಿಸುವ ಕಾಮಗಾರಿ ಆರಂಭಿಸಿದೆ. ಗ್ರಾಮ ಪ್ರವೇಶಿಸುವ ಹಂತದಲ್ಲಿ ಉಬ್ಬುಗಳನ್ನು ಹಾಕುವಂತೆ ಗ್ರಾಮಸ್ಥರೂ ಸಚಿವ ಕೃಷ್ಣ ಬೈರೇಗೌಡರಲ್ಲಿ ಒತ್ತಾಯಿಸಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಅದರಂತೆ ಇದೀಗ ಉಬ್ಬು ಅಳವಡಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.