ಹಾಸನ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ಸಮೇತ ಹಾಸನಾಂಬ ದರ್ಶನ ಪಡೆದ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ದೇವಸ್ಥಾನ ಆಡಳಿತಾಧಿಕಾರಿಗಳು ಗೌರವ ಸಲ್ಲಿಸದೆ ಅವಮಾನಿಸಿದ್ದಾರೆ. ಈ ಸಂಬಂಧ ಅಕ್ಟೋಬರ್ 18 ರಂದು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿರುವುದಾಗಿ ವಕೀಲ ಜಿ. ದೇವರಾಜೇಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಗ್ ಬಾಸ್ ಸ್ಪರ್ಧಿ ಪ್ರಥಮ್‌ಗೆ ಜಿಲ್ಲಾಡಳಿತ ಗೌರವ ಸಲ್ಲಿಸುತ್ತದೆ. ಆದರೆ ಕೇಂದ್ರ ಸಚಿವರನ್ನು ಅವಮಾನಿಸಿರುವುದು ಎಷ್ಟು ಸರಿ? ಸಾಲುಮರದ ತಿಮ್ಮಕ್ಕ ಹಾಸನಾಂಬ ದರ್ಶನಕ್ಕೆ ಬಂದಾಗ ಜಿಲ್ಲಾಡಳಿತ ಸರಿಯಾಗಿ ನಡೆದುಕೊಂಡಿಲ್ಲ. ಈ ರೀತಿ ಅನೇಕ ಉದಾಹರಣೆಗಳು ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ’ ಎಂದು ಆರೋಪಿಸಿದರು.
‘ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಶಿಷ್ಟಾಚಾರ ಪಾಲನೆ ನಿಯಮದಂತೆ, ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಸಚಿವರಿಗೆ ಮಾತ್ರ ಶಿಷ್ಟಾಚಾರ ಪಾಲನೆಯ ನಿಯಮವಿದೆ. ಆದರೆ ಹಾಸನಾಂಬ ದರ್ಶನೋತ್ಸವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸೂಚಿಸಿದವರಿಗೆ ಶಿಷ್ಟಾಚಾರದಡಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ದೂರಿದರು.
‘ಗಣ್ಯರಿಗೆ ಹಾಗೂ ಜನಪ್ರತಿನಿಧಿಗಳು ₹ 5 ಲಕ್ಷದಿಂದ ₹ 10 ಲಕ್ಷ ಮೌಲ್ಯದ ಟಿಕೆಟ್ ಖರೀದಿ ಮಾಡಿರುವ ಕುರಿತು ಜಿಲ್ಲಾಡಳಿತ ಮಾಹಿತಿ ನೀಡಿದೆ. ಆದರೆ ಈ ಟಿಕೆಟ್‌ಗಳ ಮಾರಾಟ ಕುರಿತು ಜನಪ್ರತಿನಿಧಿಗಳಿಂದ ಪತ್ರ ವ್ಯವಹಾರ ನಡೆದಿದೆಯೇ ಅಥವಾ ಬೇಕಾಬಿಟ್ಟಿಯಾಗಿ ಹಂಚಲಾಗಿದೆಯೇ ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾಡಳಿತ ಶಿಷ್ಟಾಚಾರ ನೆಪದಲ್ಲಿ ಬೇಕಾಬಿಟ್ಟಿ ಆಡಳಿತ ನಡೆಸುತ್ತಿದೆ. ಕೇವಲ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳುವ ಸ್ಪರ್ಧೆ ಏರ್ಪಟ್ಟಿದೆ. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದರು.
ಪ್ರಾರಂಭದ 2–3 ದಿನ ಭಕ್ತರು ಸುಗಮವಾಗಿ ದರ್ಶನ ಪಡೆದರು. ನಂತರದ ದಿನಗಳಲ್ಲಿ ಜಿಲ್ಲಾಧಿಕಾರಿ, ದರ್ಶನೋತ್ಸವದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ರಿಲ್ಸ್ ಹರಿಬಿಡುವ ಮೂಲಕ ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.