ಹಾಸನ: ಹಾಸನಾಂಬ ದೇವಿ ಸಾರ್ವಜನಿಕ ದರ್ಶನದ ಒಂಬತ್ತನೇ ದಿನವಾದ ಶನಿವಾರವೂ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಿ ದರ್ಶನಕ್ಕೆ ಬಂದಿದ್ದರು. ಧರ್ಮ ದರ್ಶನದ ಸಾಲು ಭಕ್ತರಿಂದ ತುಂಬಿ ತುಳುಕುತ್ತಿತ್ತು. ₹ 1ಸಾವಿರ, ₹ 300 ವಿಶೇಷ ದರ್ಶನದ ಸಾಲುಗಳು ಸಂಪೂರ್ಣ ಭರ್ತಿಯಾಗಿದ್ದವು.
ಧರ್ಮ ದರ್ಶನದ ಸರತಿ ಸಾಲಿನ ಬ್ಯಾರಿಕೇಡ್ ಅನ್ನು 10 ಕಿ.ಮೀ.ವರೆಗೆ ವಿಸ್ತರಣೆ ಮಾಡಲಾಗಿತ್ತು. ವಾರಾಂತ್ಯ ಹಾಗೂ ಸಾಲು-ಸಾಲು ರಜೆ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ₹ 300 ವಿಶೇಷ ದರ್ಶನ ಸಾಲು 4 ಕಿ.ಮೀ.ಗೂ ಉದ್ದವಾಗಿತ್ತು. ₹ 1 ಸಾವಿರ ಟಿಕೆಟ್ ಸಾಲೂ 2 ಕಿ.ಮೀ.ನಷ್ಟಿತ್ತು. ಬೆಳಿಗ್ಗೆ 3 ಗಂಟೆಯಿಂದಲೂ ಹಾಸನಾಂಬ ದೇವಿ ದರ್ಶನಕ್ಕೆ ಸರತಿ ಸಾಲಿನಲ್ಲಿ ಭಕ್ತರು ಬರುತ್ತಿದ್ದಾರೆ. ದೇವಿ ದರ್ಶನ ಪಡೆದು ನಗರದ ಕೇಂದ್ರ ಬಸ್ ನಿಲ್ದಾಣದಲ್ಲೇ ಹಲವಾರು ಜನರು ಮಲಗಿದ್ದ ದೃಶ್ಯ ಕಂಡು ಬಂತು.
ಜನಸಂದಣಿ ನಿಯಂತ್ರಿಸಿದ ಸಚಿವ:
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗಿನ ಜಾವ 4 ಗಂಟೆಯವರೆಗೆ ಹಾಸನಾಂಬ ದೇವಾಲಯದಲ್ಲೇ ಹಾಜರಿದ್ದು, ಸಾರ್ವಜನಿಕರಿಗೆ ಸುಗಮ ದರ್ಶನಕ್ಕೆ ಅನುವು ಮಾಡಿಕೊಟ್ಟರು.
ಶನಿವಾರ ಬೆಳಿಗ್ಗೆ 7.30ಕ್ಕೆ ಮತ್ತೆ ದೇವಸ್ಥಾನಕ್ಕೆ ಬಂದ ಅವರು, ಜನರಿಗೆ ಸುಗಮ ದರ್ಶನದ ಜೊತೆಗೆ ಶೌಚಾಲಯಗಳ ನೈರ್ಮಲ್ಯ ಪರಿಶೀಲಿಸಿದರು. ನಂತರ ದೇವಾಲಯದ ಆವರಣದಲ್ಲಿ ಖುದ್ದು ನಿಂತು ಭಕ್ತಾದಿಗಳು ಸರತಿ ಸಾಲಿನಲ್ಲಿ ಸಾಗುವಾಗ, ‘ದರ್ಶನದ ಬಾಗಿಲ ಬಳಿ ಬಂದ ತಕ್ಷಣ ದೇವಿಯ ದರ್ಶನ ಮಾಡುತ್ತಾ ಸಾಗಿ. ಇತರರಿಗೂ ದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ’ ಧ್ವನಿ ವರ್ಧಕದ ಮೂಲಕ ಮನವಿ ಮಾಡಿದರು.
‘ನಾನು ಗಮನಿಸಿದ್ದೇನೆ. ಕೆಲವರು ರ‍್ಯಾಂಪ್ ಹತ್ತಿದ ತಕ್ಷಣ ಅತ್ತಿತ್ತ ನೋಡುತ್ತಾರೆ. ಹಾಗೆ ಮಾಡದೇ ಮುಂದೆ ನೋಡುತ್ತ ನೇರವಾಗಿ ದೇವಿ ದರ್ಶನ ಮಾಡುತ್ತ ಸಾಗಿ. ಭಕ್ತಾದಿಗಳು ಯಾವುದೇ ಗೊಂದಲಕ್ಕೀಡಾಗದೇ ದೇವಿ ದರ್ಶನ ಪಡೆದು ಪುನೀತರಾಗಿ’ ಎಂದು ತಿಳಿಸಿದರು.
‘ಭಕ್ತಾದಿಗಳು ಸರಾಗವಾಗಿ ಸರತಿ ಸಾಲಿನಲ್ಲಿ ಸಾಗುವುದರ ಮೂಲಕ ಇತರರಿಗೂ ದರ್ಶನಕ್ಕೆ ಅವಕಾಶ ಕಲ್ಪಿಸುತ್ತ ಸಹಕಾರ ನೀಡಿ’ ಎಂದು ಮನವಿ ಮಾಡಿದರು.
‘ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಬೆಳಿಗ್ಗೆವರೆಗೂ 3.70 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿರುವುದು ಹೊಸ ದಾಖಲೆಯಾಗಿದೆ. ಈಗಲೂ ಭಕ್ತರ ಸಾಗರವೇ ಹರಿದು ಬರುತ್ತಿದ್ದು, ದರ್ಶದನ ಅವಧಿ ಮತ್ತಷ್ಟು ಹೆಚ್ಚಾಗಲಿದೆ’ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
‘ಶನಿವಾರ ಮಧ್ಯಾಹ್ನ 2 ರಿಂದ 3.30 ರವರೆಗೆ ಹಾಗೂ ಮಧ್ಯರಾತ್ರಿ 12 ರಿಂದ ಭಾನುವಾರ ಬೆಳಿಗ್ಗೆ 6ರವರೆಗೆ ದರ್ಶನ ಇರುವುದಿಲ್ಲ. ಭಾನುವಾರ ಮಧ್ಯರಾತ್ರಿ 12 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಶಾಸ್ತ್ರಾನುಸಾರ ವಿಶೇಷ ಪೂಜೆ ನಡೆಯಲಿದ್ದು, ದರ್ಶನ ವಿಳಂಬವಾಗಲಿದೆ’ ಎಂದು ಹೇಳಿದ್ದಾರೆ.
‘ಭಕ್ತರ ಸುರಕ್ಷತೆ ಹಾಗೂ ಅನುಕೂಲಕ್ಕಾಗಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ವಿಶೇಷ ವ್ಯವಸ್ಥೆಗಳನ್ನು ಕೈಗೊಂಡಿದ್ದು, ಮಳೆಯ ಸಾಧ್ಯತೆಯ ಕಾರಣ ಮುಂಜಾಗ್ರತ ಕ್ರಮಗಳನ್ನು ವಹಿಸಲಾಗಿದೆ’ ಎಂದು ತಿಳಿಸಿದ್ದಾರೆ.
₹ 1ಸಾವಿರ, ₹ 300 ವಿಶೇಷ ದರ್ಶನದ ಸಾಲುಗಳು ಸಂಪೂರ್ಣ ಭರ್ತಿ ಕೇಂದ್ರ ಬಸ್ ನಿಲ್ದಾಣದಲ್ಲೇ ನಿದ್ದೆಗೆ ಜಾರಿ, ವಾಸ್ತವ್ಯ ಹೂಡಿದ ಹಲವರು
ಶಿಷ್ಟಾಚಾರದಲ್ಲಿ ಮಾರ್ಪಾಡು ಭಕ್ತರ ದರ್ಶನಕ್ಕೆ ಅಡ್ಡಿ ಆಗದಂತೆ ಶಿಷ್ಟಾಚಾರ ದರ್ಶನದಲ್ಲಿ ಜಿಲ್ಲಾಡಳಿತ ಮಹತ್ವದ ಮಾರ್ಪಾಡು ಮಾಡಿದೆ. ಸಚಿವರ ಪತ್ರ ಹಿಡಿದು ಶಿಷ್ಟಾಚಾರದಡಿ ದರ್ಶನಕ್ಕೆ ಬರುವವರಿಗೆ ಕಡಿವಾಣ ಹಾಕಲಾಗಿದೆ. ಗಣ್ಯರ ಪತ್ರ ತರುವ ಅವರ ಕುಟುಂಬ ಸದಸ್ಯರಿಗೆ ದೇವಿ ದರ್ಶನಕ್ಕೆ ಅವಕಾಶವಿಲ್ಲ. ಖುದ್ದು ಸಚಿವರು ಇದ್ದರೆ ಮಾತ್ರ ಶಿಷ್ಟಾಚಾರ ಪಾಲನೆ ಮಾಡಲಾಗುವುದು ಎಂದು ಹಾಸನಾಂಬೆ ದೇವಾಲಯ ಆಡಳಿತಾಧಿಕಾರಿ ಉಪ ವಿಭಾಗಾಧಿಕಾರಿ ಮಾರುತಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರ ಸೂಚನೆಯಂತೆ ಶಿಷ್ಟಾಚಾರದಲ್ಲಿ ಮಾರ್ಪಾಡು ಮಾಡಲಾಗಿದೆ.
ದರ್ಶನ ಪಡೆದ ಪಾರ್ವತಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಶನಿವಾರ ತಮ್ಮ ಆಪ್ತರ ಜೊತೆಗೆ ಬಂದು ಹಾಸನಾಂಬ ದೇವಿ ದರ್ಶನ ಪಡೆದರು. ಹಾಸನಾಂಬ ದೇವಿ ದರ್ಶನದ ನಂತರ ಸಿದ್ದೇಶ್ವರಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ ಅವರು ಪೂಜೆ ಸಲ್ಲಿಸಿದರು. ಇದೇ ಮೊದಲ ಬಾರಿಗೆ ಅವರು ದೇವಿ ದರ್ಶನ ಪಡೆದರು. ಈ ವೇಳೆ ಅವರ ಅಂಗರಕ್ಷಕರು ಫೋಟೊ ತೆಗೆಯಲು ಹಾಗೂ ವಿಡಿಯೋ ಚಿತ್ರೀಕರಣಕ್ಕೆ ಅಡ್ಡಿಪಡಿಸಿದರು.
ಬಸ್ ಸಿಗದೇ ಸಂಕಷ್ಟ ಹಾಸನಾಂಬ ದರ್ಶನೋತ್ಸವಕ್ಕೆ ಬೆಂಗಳೂರು ಕಡೆಯಿಂದ ಸಾರಿಗೆ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಸಮಯಕ್ಕೆ ಸರಿಯಾಗಿ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಗ್ರಾಮದಲ್ಲಿ ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳು ಪರಿತಪಿಸುವಂತಾಗಿದ್ದು ಬೆಳಿಗ್ಗೆ ಬಸ್‌ಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರಿಂದ ಸಾರ್ವಜನಿಕರೂ ಪರದಾಡುವಂತಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.