ಮಳೆ ಹಾನಿ ಪ್ರದೇಶಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ ಭೇಟಿ.
ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿತಕ್ಕೆ ಸಂಬಂಧಿಸಿ ಸಕಲೇಶಪುರ ದೊಡ್ಡತಪ್ಪಲು ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ ಭೇಟಿ ನೀಡಿದ್ದಾರೆ.
ನಂತರ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಕಳೆದ ಐದಾರು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಆರಂಭವಾಗಿದೆ. 2018ರಲ್ಲಿ ನಾನು ಸಿಎಂ ಆಗಿದ್ದಾಗ ಇದೇ ರೀತಿ ಮಳೆಯಾಗಿತ್ತು. 2018ರ ನಂತರ ಈಗ ಈ ರೀತಿ ಮಳೆಯಾಗಿದೆ. ಒಂದೆಡೆ ಜಲಾಶಯಗಳು ತುಂಬಿದ್ದು ಪಕ್ಕದ ರಾಜ್ಯಗಳ ಜೊತೆ ಸಂಘರ್ಷಕ್ಕೆ ಒಂದು ವರ್ಷ ವಿರಾಮ ಸಿಕ್ಕಿದೆ. ಮಳೆಯಿಂದ ಆಗಿರುವ ಅನಾಹುತಗಳು, ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಶಿರೂರಿನಲ್ಲಿ ಮಳೆ ಮುಂದುವರೆದರೆ ಇನ್ನೂ ಭೂಕುಸಿತವಾಗುತ್ತದೆ ಎಂದರು.
ಸಕಲೇಶಪುರದಿಂದ ಉದ್ದಕ್ಕೂ ಭೂಕುಸಿತವಾಗುತ್ತಲೇ ಇದೆ. ಎಂಟು ವರ್ಷದ ಹಿಂದಿನಿಂದ ಗುತ್ತಿಗೆದಾರ ಕೆಲಸ ಮಾಡುತ್ತಿದ್ದಾನೆ. ಕಳಪೆ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗುತ್ತಿದೆ. ಕೇಂದ್ರದ ಭೂಸಾರಿಗೆ ಸಚಿವರಿಗೆ ಎಲ್ಲ ಮಾಹಿತಿ ಕೊಡುತ್ತೇನೆ. ಗಡ್ಕರಿ ಅವರ ಪಾತ್ರವೂ ಜಾಸ್ತಿ ಇದೆ. ವೈಜ್ಞಾನಿಕವಾಗಿ ಕಾಮಗಾರಿ ಮಾಡಲು ಗಡ್ಕರಿ ಅವರ ಜೊತೆ ಚರ್ಚೆ ಮಾಡುತ್ತೇನೆ. ಸ್ಥಳಕ್ಕೆ ಒಮ್ಮೆ ಭೇಟಿ ನೀಡಲು ಮನವಿ ಮಾಡುತ್ತೇನೆ. ರಾಜ್ಯ ಸರ್ಕಾರದ ಮಂತ್ರಿಗಳು ಭೇಟಿ ನೀಡಿ ಜನಗಳಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ಆದ್ದರಿಂದ ನಾನು ನಿನ್ನೆಯಿಂದ ಭೇಟಿ ನೀಡುತ್ತಿದ್ದೇನೆ ಎಂದರು.
ಶಾಸಕರಾದ ಸಿಮೆಂಟ್ ಮಂಜು, ಎಚ್.ಪಿ.ಸ್ವರೂಪ್ಪ್ರಕಾಶ್, ಸಿ.ಎನ್.ಬಾಲಕೃಷ್ಣ, ಎಚ್.ಕೆ.ಸುರೇಶ್, ಜಿಲ್ಲಾಧಿಕಾರಿ ಸತ್ಯಭಾಮಾ, ಎಸ್ಪಿ ಮೊಹಮ್ಮದ ಸುಜೀತಾ, ಉಪವಿಭಾಗಾಧಿಕಾರಿ ಡಾ.ಶ್ರುತಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.