ADVERTISEMENT

ಹೃದಯಾಘಾತಕ್ಕೆ ಸೂಕ್ತ ಚಿಕಿತ್ಸೆ ನೀಡಿ

ಹಿಮ್ಸ್‌ನಲ್ಲಿ ದೊರೆಯುವ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸಿ: ಎಚ್‌.ಡಿ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 4:40 IST
Last Updated 9 ಜುಲೈ 2025, 4:40 IST
ಹಾಸನದ ಹಿಮ್ಸ್‌ ಸಭಾಂಗಣದಲ್ಲಿ ಶಾಸಕ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ವೈದ್ಯಾಧಿಕಾರಿಗಳ ಸಭೆ ಮಂಗಳವಾರ ನಡೆಯಿತು.
ಹಾಸನದ ಹಿಮ್ಸ್‌ ಸಭಾಂಗಣದಲ್ಲಿ ಶಾಸಕ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ವೈದ್ಯಾಧಿಕಾರಿಗಳ ಸಭೆ ಮಂಗಳವಾರ ನಡೆಯಿತು.   

ಹಾಸನ: ‘ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣ ಹೆಚ್ಚುತ್ತಿದ್ದು, ಅಗತ್ಯ ಚಿಕಿತ್ಸೆ ಒದಗಿಸಲು  ಕ್ರಮ ಕೈಗೊಳ್ಳಬೇಕು’ ಎಂದು ಹಿಮ್ಸ್ ನಿರ್ದೇಶಕ ಹಾಗೂ ವೈದ್ಯಾಧಿಕಾರಿಗಳಿಗೆ ಶಾಸಕ ಎಚ್.ಡಿ. ರೇವಣ್ಣ ಸೂಚನೆ ನೀಡಿದರು.

ಮಂಗಳವಾರ ಹಿಮ್ಸ್ ಆಸ್ಪತ್ರೆಯಲ್ಲಿ ನಿರ್ದೇಶಕ ಡಾ.ಬಿ.ರಾಜಣ್ಣ ಹಾಗೂ  ವೈದ್ಯಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹೃದಯಾಘಾತ  ಪ್ರಕರಣ ಹೆಚ್ಚುತ್ತಿದೆ.  ಕ್ಯಾಥ್‌ ಲ್ಯಾಬ್ ಸೇರಿದಂತೆ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದರು. ವರದಿ ನೀಡಿದರೆ, ನಾನು ಹಾಗೂ ಜಿಲ್ಲೆಯ ಜೆಡಿಎಸ್ ಶಾಸಕರೆಲ್ಲ ಸೇರಿ ಸರ್ಕಾರದ ಗಮನಕ್ಕೆ ತರಲಿದ್ದೇವೆ ಎಂದರು.

ಜಿಲ್ಲೆಯಲ್ಲಿ 46 ದಿನದಲ್ಲಿ 40 ಮಂದಿ ಹೃದಯಾಘಾತದಿಂಧ ಸಾವಿಗೀಡಾಗಿದ್ದಾರೆ. ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಇಸಿಜಿ, ಇತರೆ ಹೃದಯ ತಪಾಸಣೆ ನಡೆಸಬೇಕು. ರಾಜ್ಯದಲ್ಲಿ ಕೇವಲ 48 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪುನೀತ್ ಹೃದಯ ಸಂಜೀವಿನಿ ಯೋಜನೆಯಡಿ ಹೃದಯ ತಪಾಸಣೆ ಸೌಲಭ್ಯವಿದ್ದು, ಜಿಲ್ಲೆಯ ಹಾಸನ, ಹೊಳೆನರಸೀಪುರ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಮಾತ್ರ ಈ ಸೌಲಭ್ಯ ಇದೆ. ಎಲ್ಲ ತಾಲ್ಲೂಕುಗಳಿಗೆ ವಿಸ್ತರಿಸಲು ತಿಳಿಸಿದರು.

ADVERTISEMENT

ಬಡವರ ಹಣ ಲೂಟಿ: ‘ಖಾಸಗಿ ಆಸ್ಪತ್ರೆಯಲ್ಲಿ ಬಡವರ ಹಣ ಲೂಟಿ ಮಾಡಲಾಗುತ್ತಿದೆ ಯಾವುದೇ ಅಪಘಾತವಾದರೂ ತುರ್ತು ವಾಹನ 108 ಕ್ಕೆ ಕರೆ ಮಾಡಿದರೆ, ಅವರು ನೇರವಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ₹8 ಲಕ್ಷದಿಂದ ₹10 ಲಕ್ಷದವರೆಗೆ ವ್ಯಯಿಸಬೇಕಾದ ಪರಿಸ್ಥಿತಿಯಲ್ಲಿ ಬಡವರಿದ್ದಾರೆ. ಪೊಲೀಸ್ ಇಲಾಖೆ ಹಾಗೂ ತುರ್ತು ವಾಹನ 108 ಸಿಬ್ಬಂದಿಗೆ ಸೂಚನೆ ನೀಡಿ, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆತರುವಂತೆ ನಿರ್ದೇಶನ ನೀಡಬೇಕೆಂದು ನಿರ್ದೇಶಕರಿಗೆ ರೇವಣ್ಣ ತಿಳಿಸಿದರು.

ಜನಜಾಗೃತಿ ಮೂಡಿಸಿ: ಹಿಮ್ಸ್ ಆಸ್ಪತ್ರೆಯಲ್ಲಿನ ಹೆರಿಗೆ, ಮೂಳೆ ಚಿಕಿತ್ಸೆ , ಇತರೆ ಸೌಲಭ್ಯಗಳ ಕುರಿತು ತಿಂಗಳಿಗೊಮ್ಮೆ ಆಕಾಶವಾಣಿ, ಇತರೆ ಮಾಧ್ಯಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಾಕೀತು ಮಾಡಿದರು. ಜಿಲ್ಲೆಯಲ್ಲಿ ಪ್ರತಿ ಎರಡು ತಾಲ್ಲೂಕಿಗೆ ಹಿಮ್ಸ್‌ನಿಂದ ಪಿಆರ್‌ಒಗಳನ್ನು ನೇಮಿಸಿ. ಜನರಿಗೆ ಮಾಹಿತಿ ನೀಡಲು ಸಮುದಾಯ ಆರೋಗ್ಯ ಅಧಿಕಾರಿಗಳನ್ನು ನೇಮಿಸುವಂತೆ ಶಾಸಕ ಸಿ.ಎನ್. ಬಾಲಕೃಷ್ಣ ಅಧಿಕಾರಿಗಳಿಗೆ ತಿಳಿಸಿದರು.

ಶಾಸಕರಾದ ಎ.ಮಂಜು, ಸ್ವರೂಪ್ ಪ್ರಕಾಶ್, ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ, ಡಿಎಚ್‌ಒ ಡಾ.ಅನಿಲ್ ಎಚ್‌., ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.

ಹೃದಯಾಘಾತ ಹೆಚ್ಚಳವಾಗಿಲ್ಲ’

2023-24 ಹಾಗೂ 2024 -25 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ವರದಿಯಾದ ಹೃದ್ರೋಗ ಪ್ರಕರಣಗಳ ಕುರಿತು ವಿವರಿಸಿದ ಹಿಮ್ಸ್ ನಿರ್ದೇಶಕ ಬಿ.ರಾಜಣ್ಣ ‘ಕೆಲ ವರ್ಷಗಳಲ್ಲಿ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣ ಏರಿಕೆಯಾಗಿಲ್ಲ. ಮೇ ತಿಂಗಳಿನಲ್ಲಿ 42 ಮಂದಿ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದರು. ಅವರಿಗೆ  ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ ಇಬ್ಬರು ಮೃತರಾಗಿದ್ದಾರೆ’ ಎಂದರು. ಜೂನ್‌ನಲ್ಲಿ 38 ಮಂದಿ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ 11 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಇತ್ತೀಚಿಗೆ ಮಾಧ್ಯಮಗಳಲ್ಲಿ ವರದಿಯಾದ ಹೃದಯಘಾತ ಪ್ರಕರಣಗಳಲ್ಲಿ ಆಸ್ಪತ್ರೆಗೆ ಬರುವ ಮುನ್ನವೇ ಸಾವು ಸಂಭವಿಸಿದೆ ಎಂದು ಮಾಹಿತಿ ನೀಡಿದರು. ಎಲ್ಲ ಅಂಕಿ– ಅಂಶಗಳನ್ನು ಪರಿಶೀಲಿಸಿದಾಗ ನಮ್ಮಲ್ಲಿ ಹೃದಯಾಘಾತ ಪ್ರಕರಣಗಳು ಏರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಮ್ಸ್ ಏಕೆ ಬೇಕು?

ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಮೂಳೆ ಚಿಕಿತ್ಸೆ ಪಡೆಯಲು ಜನರು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಉದ್ಭವಿಸುವುದಾದರೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಿಮ್ಸ್ ಆಸ್ಪತ್ರೆ ತೆರೆಯುವ ಅಗತ್ಯ ಏನಿತ್ತು ಎಂದು ಎಚ್‌.ಡಿ. ರೇವಣ್ಣ ಪ್ರಶ್ನಿಸಿದರು. ಎಚ್.ಡಿ. ದೇವೇಗೌಡರು ಎಚ್.ಡಿ. ಕುಮಾರಸ್ವಾಮಿ ಹಾಗೂ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಹೋರಾಟದ ಫಲವಾಗಿ ಇಲ್ಲಿ ಬೃಹತ್ ಆಸ್ಪತ್ರೆಯನ್ನು ತೆರೆಯಲಾಗಿದೆ. ಆದರೆ ಜನರಿಗೆ ಸೂಕ್ತ ಸೌಲಭ್ಯ ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.