ADVERTISEMENT

ಒಂದು ಸಮಾಜಕ್ಕೆ ಅನ್ಯಾಯ ಮಾಡಿದ ಪಾಪಪ್ರಜ್ಞೆ

ಸಿದ್ದರಾಮಯ್ಯಗೆ ಟೋಪಿ ಹಾಕಲು ಕಾಯುತ್ತಿರುವ ಗಿರಾಕಿ: ಶಿವಲಿಂಗೇಗೌಡರ ವಿರುದ್ಧ ಎಚ್‌.ಡಿ. ರೇವಣ್ಣ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 4:44 IST
Last Updated 18 ಜನವರಿ 2026, 4:44 IST
ಅರಸೀಕೆರೆಯಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಶಾಸಕ ಎಚ್‌.ಡಿ. ರೇವಣ್ಣ ಉದ್ಘಾಟಿಸಿದರು
ಅರಸೀಕೆರೆಯಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಶಾಸಕ ಎಚ್‌.ಡಿ. ರೇವಣ್ಣ ಉದ್ಘಾಟಿಸಿದರು   

ಅರಸೀಕೆರೆ: ‘ರಾಜಕೀಯವಾಗಿ ನಾನು ಮತ್ತು ನಮ್ಮ ಕುಟುಂಬ ಬೆಳೆಯಲು ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜನತೆಯ ಋಣ ಅಪಾರವಾಗಿದೆ. ಆದರೆ ಒಬ್ಬನನ್ನು ಉಳಿಸಿಕೊಳ್ಳಲು ಒಂದು ಸಮಾಜಕ್ಕೆ ಅನ್ಯಾಯ ಮಾಡಿದ ಪಾಪಪ್ರಜ್ಞೆ ನನ್ನನ್ನು ಕಾಡುತ್ತಿದೆ’ ಎಂದು ಶಾಸಕ ಎಚ್.ಡಿ. ರೇವಣ್ಣ ಬೇಸರ ಹೊರಹಾಕಿದರು.

ನಗರದ ಬಂಜಾರ ಸೇವಾಲಾಲ್ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ವೀರಶೈವ ಸಮಾಜ ದೊಡ್ಡ ಸಂಖ್ಯೆಯಲ್ಲಿದ್ದರೂ, ಹಿರಿಯರ ಮಾತು ಕೇಳದೇ ಈ ಮನುಷ್ಯನಿಗೆ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಬಿ ಫಾರಂ ನೀಡಿ ಕಾರ್ಯಕರ್ತರು ಮತ್ತು ಮುಖಂಡರ ಸಹಕಾರದಿಂದ ಗೆಲ್ಲಿಸಿಕೊಂಡಿದ್ದೆ. ಆದರೆ ಈ ಗಿರಾಕಿ ನಮಗೆ ಟೋಪಿ ಹಾಕಿ, ಈಗ ಸಿದ್ದರಾಮಯ್ಯ ಅವರಿಗೆ ಟೋಪಿ ಹಾಕಲು ಕಾಯುತ್ತಿದ್ದಾರೆ’ ಎಂದು ಶಾಸಕ ಶಿವಲಿಂಗೇಗೌಡರ ಹೆಸರು ಹೇಳದೆಯೇ ಲೇವಡಿ ಮಾಡಿದರು.

ADVERTISEMENT

ಇವರ ಕುಟುಂಬ ಸದಸ್ಯರ ಹೆಸರಿನಲ್ಲಿ ಕ್ರಷರ್, ಜಲ್ಲಿಕಲ್ಲು, ಇಟ್ಟಿಗೆ, ಸಿಮೆಂಟ್ ವ್ಯಾಪಾರ ಮಾಡುವ ವರ್ಕ್‌ಶಾಪ್ ಇಟ್ಟುಕೊಂಡು ಇವರೊಬ್ಬರೇ ಅಭಿವೃದ್ಧಿಯಾಗುತ್ತಿದ್ದಾರೆಯೇ ವಿನಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ ಎಂದು ಕಿಡಿ ಕಾರಿದರು.

‘ನಿಮ್ಮ ಮುಖ ನೋಡಿ ವೋಟು ಹಾಕುವುದಿಲ್ಲ, ಹಣ ಕೊಟ್ಟರೆ ಮಾತ್ರ ವೋಟು ಬೀಳುವುದು ಎಂದು ದೇವೇಗೌಡರ ಮುಂದೆಯೇ ಅರಸೀಕೆರೆ ಜನತೆಯನ್ನು ದುಡ್ಡಿಗೆ ಅಳೆದ ಮಹಾನುಭಾವರು ಇವರು’ ಎಂದು ಟೀಕಿಸಿದರು.

‘ನಮ್ಮ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗೂಡಿ, ಕೈ ಜಾರಿರುವ ಅರಸೀಕೆರೆ ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಜಿ.ಎಸ್. ಪರಮೇಶ್ವರಪ್ಪ ಮಾತನಾಡಿ, ‘ಶಿವಲಿಂಗೇಗೌಡರು ಅರಸೀಕೆರೆಯಲ್ಲಿ ಗೆಲ್ಲುವ ಮೊದಲು ಇಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಪಕ್ಷಕ್ಕೆ ಅಂದು, ಇಂದು, ಮುಂದು ಎಂದೆಂದೂ ಭದ್ರ ಬುನಾದಿ ಇದ್ದು, ದೇವೇಗೌಡರ ಆಶೀರ್ವಾದ, ರೇವಣ್ಣ ಅವರ ಮಾರ್ಗದರ್ಶನದಲ್ಲಿ ಮುಖಂಡರು ತಮ್ಮ ಭಿನ್ನಾಭಿಪ್ರಾಯ ಬಿಟ್ಟು ಸಂಘಟನಾತ್ಮಕವಾಗಿ ಹೋರಾಟ ನಡೆಸಿದರೆ 2028 ಚುನಾವಣೆಯಲ್ಲಿ ಜೆಡಿಎಸ್ ಕ್ಷೇತ್ರದಲ್ಲಿ ಗೆಲ್ಲುವುದರಲ್ಲಿ ಸಂದೇಹವಿಲ್ಲ’ ಎಂದು ಎಂದು ತಿಳಿಸಿದರು.

ಜೆಡಿಎಸ್ ಮುಖಂಡರಾದ ಬಾಣಾವರ ಅಶೋಕ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶೇಖರಪ್ಪ, ಹೊಸೂರು ಗಂಗಾಧರ್, ಜಿ.ಪಂ. ಮಾಜಿ ಉಪಾಧ್ಯಕ್ಷ ಬಂಡಿಗೌಡ್ರ ರಾಜಣ್ಣ ಮಾತನಾಡಿದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್, ಕರ್ನಾಟಕ ಕುರುಬರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆಂಕೆರೆ ಕೇಶವಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಮುಖಂಡ ವೇಣು, ಲಾಳನಕೆರೆ ಯೋಗೇಶ್ ಮೊದಲಾದವರಿದ್ದರು. 

‘ಶಿವಲಿಂಗೇಗೌಡರು ಭಸ್ಮಾಸುರರಿದ್ದಂತೆ’

‘ರೇವಣ್ಣ ಅವರಿಂದ ಸಹಕಾರ ಪಡೆದು ಶಾಸಕರಾದ ಶಿವಲಿಂಗೇಗೌಡರು ಭಸ್ಮಾಸುರರಿದ್ದಂತೆ. ವರ ಪಡೆದ ಬಳಿಕ ಶಿವನಿಗೆ ತಿರುಗಿಬಿದ್ದ ಭಸ್ಮಾಸುರನಂತೆ ಶಿವಲಿಂಗೇಗೌಡರು ತಮ್ಮನ್ನು ರಾಜಕೀಯವಾಗಿ ಬೆಳೆಸಿದ ರೇವಣ್ಣ ಅವರ ಕುಟುಂಬದ ವಿರುದ್ಧ ತಿರುಗಿ ಬೀಳುವುದು ಸರಿಯಲ್ಲ’ ಎಂದು ಪರಾಜಿತ ಅಭ್ಯರ್ಥಿ ಎನ್.ಆರ್.ಸಂತೋಷ್ ದೂರಿದರು. ‘ಅಭಿವೃದ್ಧಿ ಎಂದರೆ ಕಾಂಕ್ರಿಟ್ ರಸ್ತೆಯಲ್ಲ ತಾಲ್ಲೂಕಿನ ಮಕ್ಕಳು ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ವಾತಾವರಣ ನಿರ್ಮಿಸಿಕೊಡುವುದು ಅಭಿವೃದ್ಧಿ ಎನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಶಾಸಕರು ತಮ್ಮ ಚಿಂತನೆ ಬದಲಿಸಿಕೊಳ್ಳಲಿ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಜನರೇ ಬದಲಿಸುತ್ತಾರೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.