ADVERTISEMENT

ಹಾಸನ: ಹೆಚ್ಚಿದ ಹೃದಯಾಘಾತ, ಒಂದೂವರೆ ತಿಂಗಳಲ್ಲಿ 21 ಮಂದಿ ಸಾವು

ಸೋಮವಾರ ನಾಲ್ವರು, ಒಂದೂವರೆ ತಿಂಗಳಲ್ಲಿ 21 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 0:30 IST
Last Updated 1 ಜುಲೈ 2025, 0:30 IST
<div class="paragraphs"><p>ಹೃದಯಾಘಾತ</p></div>

ಹೃದಯಾಘಾತ

   

(ಐಸ್ಟೋಕ್ ಪ್ರಾತಿನಿಧಿಕ ಚಿತ್ರ)

ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವು ಪ್ರಕರಣಗಳು ಮುಂದುವರಿದಿವೆ. ಸೋಮವಾರ ಒಂದೇ ದಿನ ನಾಲ್ವರು ಮೃತಪಟ್ಟಿದ್ದಾರೆ. ದೈಹಿಕವಾಗಿ ಸದೃಢರಾಗಿರುವವರೂ ತೀವ್ರ ಹೃದಯಾಘಾತ, ಹೃದಯ ಸ್ತಂಭನದಿಂದ ಸಾವಿಗೀಡಾಗುತ್ತಿದ್ದು, ಜಿಲ್ಲೆಯಲ್ಲಿ ಆತಂಕದ ಅಲೆ ಎದ್ದಿದೆ.  

ADVERTISEMENT

ಸೋಮವಾರ ಒಂದೇ ದಿನ ಜಿಲ್ಲೆಯ ಬೇಲೂರಿನಲ್ಲಿ ಗೃಹಿಣಿ ಲೇಪಾಕ್ಷಿ (50), ಹೊಳೆನರಸೀಪುರದ ಪ್ರಾಧ್ಯಾಪಕ ಮುತ್ತಯ್ಯ (58), ನುಗ್ಗೇಹಳ್ಳಿ ನಾಡ ಕಚೇರಿಯ ‘ಡಿ’ ಗ್ರೂಪ್‌ ನೌಕರ ಕುಮಾರ್‌ (57) ಹಾಗೂ ನಗರದ ಆಟೊರಿಕ್ಷಾ ಚಾಲಕ ಸೂರ್ಯನಾರಾಯಣರಾವ್‌ (63) ಮೃತಪಟ್ಟಿದ್ದಾರೆ.

ಮೇ 20ರಿಂದ ಜೂನ್‌ 30ರವರೆಗೆ 21 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಪೈಕಿ ನಾಲ್ವರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. 25 ವರ್ಷದೊಳಗಿನ ಮೂವರು ಯುವತಿಯರು ಹಾಗೂ ಇಬ್ಬರು ಯುವಕರು ಮೃತಪಟ್ಟಿದ್ದಾರೆ. 30 ವರ್ಷ ಮೇಲಿನ 16 ಜನರು ಮೃತಪಟ್ಟಿದ್ದಾರೆ.

ಹೃದಯಾಘಾತಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಸದ ಶ್ರೇಯಸ್ ಪಟೇಲ್‌ ಅವರು ಜಿಲ್ಲೆಯ ಆರೋಗ್ಯಾಧಿಕಾರಿಗಳು, ಹಿಮ್ಸ್‌ ತಜ್ಞರ ಜೊತೆಗೆ ಸಭೆ ನಡೆಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ತುರ್ತು ಚಿಕಿತ್ಸೆಯ ತರಬೇತಿ ನೀಡುವುದು ಹಾಗೂ ಶಾಲಾ ಮಕ್ಕಳು, ಸ್ಕೌಟ್ಸ್‌, ಗೈಡ್‌ ಸ್ವಯಂ ಸೇವಕರ ಮೂಲಕ ಹೃದಯಾಘಾತದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

‘ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಧುನಿಕ ಯಂತ್ರಗಳನ್ನು ಒದಗಿಸುವ ಮೂಲಕ ಇಸಿಜಿ, ಎಕೊ, ಟಿಎಂಟಿ ತಪಾಸಣೆ ಹಾಗೂ ಯುವಜನರ ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಪತ್ತೆ ಮಾಡಬೇಕು’ ಎಂದು ಹೊಳೆನರಸೀಪುರದ ನಿವಾಸಿಗಳಾದ ಜಯಪ್ರಕಾಶ್‌, ಗೋಕುಲ್‌ ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ಡಾ.ಚೇತನ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ’ ಎಂದು ಡಿಎಚ್‌ಒ ಡಾ.ಅನಿಲ್‌ ಎಚ್‌. ತಿಳಿಸಿದರು.

‘ಕೋವಿಡ್‌–19 ಲಸಿಕೆಯ ಅಡ್ಡಪರಿಣಾಮ ಎಂಬ ಆತಂಕ ಬೇಡ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಬದಲಾಗುತ್ತಿರುವ ಜೀವನಶೈಲಿ, ವ್ಯಾಯಾಮದ ಕೊರತೆ, ನಿಯಮಿತ ಆರೋಗ್ಯ ತಪಾಸಣೆ ಇಲ್ಲದಿರುವುದು ಹೃದಯಾಘಾತಕ್ಕೆ ಪ್ರಮುಖ ಕಾರಣ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.