ಹಾಸನ: ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಹೃದಯಾಘಾತದ ಸಾವುಗಳ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಿಲ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಆದರೆ, ಮೃತರ ಕುಟುಂಬದವರು ಮರಣೋತ್ತರ ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದು, ನಿಖರ ಮಾಹಿತಿ ಕಲೆ ಹಾಕಲು ತೊಡಕುಂಟಾಗಿದೆ.
ಜಿಲ್ಲೆಯಲ್ಲಿ ಒಟ್ಟು 22 ಹೃದಯಾಘಾತದ ಸಾವುಗಳ ಬಗ್ಗೆ ವರದಿ ಮಾಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ಒಟ್ಟು 8 ಜನರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಾಲ್ವರ ವರದಿ ಬಂದಿದೆ. ಇನ್ನೂ ನಾಲ್ಕು ವರದಿಗಳು ಬರಬೇಕಾಗಿವೆ. 14 ಪ್ರಕರಣಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸಿಲ್ಲ.
ಇದೀಗ ವೈದ್ಯರ ತಂಡ ಮೃತರ ಮನೆಗಳಿಗೆ ತೆರಳಿ, ಅವರ ಕುಟುಂಬದಲ್ಲಿ ಯಾರಿಗಾದರೂ ಹೃದ್ರೋಗ ಸಮಸ್ಯೆ ಇತ್ತೇ? ಅವರು ಏನಾದರೂ ಚಿಕಿತ್ಸೆ ಪಡೆಯುತ್ತಿದ್ದರೆ? ಅವರ ಆಹಾರ ಪದ್ಧತಿ, ಜೀವನ ಶೈಲಿ ಹೇಗಿತ್ತು ಎಂಬಿತ್ಯಾದಿ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಆದರೆ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾದ ವ್ಯಕ್ತಿಗಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗಲೇ, ಆ ಸಾವಿಗೆ ನಿಖರ ಕಾರಣ ಪತ್ತೆಯಾಗಲಿದೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ಕುಟುಂಬಸ್ಥರು ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪಿಗೆ ಕೊಡುತ್ತಿಲ್ಲ. ಇದರಿಂದ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸುವುದು ಕಷ್ಟಸಾಧ್ಯವಾಗುತ್ತಿದೆ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದರು.
‘ಈಗಾಗಲೇ ನಾಲ್ಕು ಮರಣೋತ್ತರ ಪರೀಕ್ಷೆ ವರದಿಗಳು ಕೈಸೇರಿದ್ದು, ಹೃದಯಾಘಾತದಿಂದ ಮೃತಪಟ್ಟಿರುವುದು ಖಚಿತವಾಗಿದೆ. ಇನ್ನುಳಿದ 14 ಪ್ರಕರಣಗಳಲ್ಲಿ ಮಾಹಿತಿ ಸಂಗ್ರಹಿಸುವುದೇ ದೊಡ್ಡ ಸವಾಲಾಗಿದೆ. ಹೀಗಾಗಿ ಕೂಲಂಕಷ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಹೃದಯಾಘಾತ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ಮರಣೋತ್ತರ ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚೆಗೆ ನಗರದ ಹೊರವಲಯದಲ್ಲಿ ಮೃತಪಟ್ಟ ಯುವಕನ ಮೃತದೇಹದ ಮರಣೋತ್ತರ ಪರೀಕ್ಷೆಗೆ ವೈದ್ಯರು ಮನವಿ ಮಾಡಿದರೂ, ಕುಟುಂಬದವರು ನಿರಾಕರಿಸಿದ್ದರು.
‘ಚಿಕ್ಕವಯಸ್ಸಿನ ಮಗ ತೀರಿಕೊಂಡಿದ್ದಾನೆ. ಅದೇ ದೊಡ್ಡ ಆಘಾತವಾಗಿದೆ. ಹೇಗೋ ಅಂತ್ಯಸಂಸ್ಕಾರ ಮಾಡುತ್ತೇವೆ. ಮರಣೋತ್ತರ ಪರೀಕ್ಷೆ ಬೇಡ. ದೇಹವನ್ನು ಛಿದ್ರಗೊಳಿಸಬೇಡಿ’ ಎಂದು ಯುವಕನ ತಾಯಿ ವೈದ್ಯರ ಬಳಿ ಕೇಳಿಕೊಂಡಿದ್ದರು.
ಒಂದೆರಡು ಪ್ರಕರಣಗಳು ಇದಕ್ಕೆ ಅಪವಾದವಾಗಿದ್ದು, ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡುತ್ತಾರೆ. ಆದರೆ, ಬಹುಪಾಲು ಪ್ರಕರಣಗಳಲ್ಲಿ ಮರಣೋತ್ತರ ಪರೀಕ್ಷೆಗೆ ಕುಟುಂಬದ ಸದಸ್ಯರು ನಿರಾಕರಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ 8 ಮೃತರ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು 4 ವರದಿ ಬಂದಿವೆ. ಎಲ್ಲವನ್ನೂ ಕ್ರೋಡೀಕರಿಸಿ ಸಮಗ್ರ ವರದಿ ಸಲ್ಲಿಸಲಾಗುವುದು.ಡಾ.ಅನಿಲ್ ಡಿಎಚ್‌ಒ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜೊತೆ ಹಾಸನದಲ್ಲಿ ಶೀಘ್ರ ಸಭೆ ನಡೆಸುತ್ತೇವೆ. ತಜ್ಞರ ಸಮಿತಿ ನೀಡುವ ಸಲಹೆಯಂತೆ ಕ್ರಮ ಕೈಗೊಳ್ಳುತ್ತೇವೆ.ಕೆ.ಎನ್. ರಾಜಣ್ಣ ಜಿಲ್ಲಾ ಉಸ್ತುವಾರಿ ಸಚಿವ
ಮೃತಪಟ್ಟವರ ಬಗ್ಗೆ ನಿಖರ ಕಾರಣ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಒಂದು ತಂಡ ರಚಿಸಿದ್ದು ಪ್ರತಿ ಪ್ರಕರಣ ತನಿಖೆ ಮಾಡಿ ವರದಿ ನೀಡುವಂತೆ ನಿರ್ದೇಶನ ನೀಡಲಾಗಿದೆ.ಕೆ.ಎಸ್. ಲತಾಕುಮಾರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.