ADVERTISEMENT

ಹೃದಯಾಘಾತ ಹೆಚ್ಚಳವಾಗಿಲ್ಲ: ಡಾ.ರಾಜಣ್ಣ

ಅರಸೀಕಟ್ಟೆ ಅಮ್ಮ ಸಮಿತಿಯಿಂದ ಹೃದಯ ಆರೋಗ್ಯ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 2:12 IST
Last Updated 20 ಜುಲೈ 2025, 2:12 IST
ಇಸಿಜಿ ಪರೀಕ್ಷೆ ಮಾಡಿಸಲು ಜನರು ಸರದಿಯಲ್ಲಿ ನಿಂತಿರುವುದು.
ಇಸಿಜಿ ಪರೀಕ್ಷೆ ಮಾಡಿಸಲು ಜನರು ಸರದಿಯಲ್ಲಿ ನಿಂತಿರುವುದು.   

ಕೊಣನೂರು: ಜಿಲ್ಲೆಯಲ್ಲಿ ಹದಿಹರೆಯದವರ ಸಾವಿನ ವಿಷಯವು ಹೆಚ್ಚಿದ್ದು, ಸಮುದಾಯ ಮತ್ತು ಆರೋಗ್ಯ ಇಲಾಖೆಯನ್ನು ಆತಂಕಕ್ಕೆ ದೂಡಿತ್ತು ಎಂದು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ರಾಜಣ್ಣ ತಿಳಿಸಿದರು.

ಹೋಬಳಿಯ ಅರಸೀಕಟ್ಟೆ ಅಮ್ಮ ದೇವಾಲಯದ ಆವರಣದಲ್ಲಿ ಶನಿವಾರ ನಡೆದ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವಿನ ಸಂಖ್ಯೆಯ ಹೆಚ್ಚುತ್ತಿರುವ ವರದಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯು ವರದಿ ನೀಡಿದೆ. ವರದಿಯ ಪ್ರಕಾರ ಜಿಲ್ಲೆಯಲ್ಲಿ ಮೃತರ ಪೈಕಿ 20 ಜನರು ಮಾತ್ರ ಹೃದಯ ಸಂಬಂಧಿ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಮಾಧ್ಯಮಗಳು ಈ ಕುರಿತು ಸುದ್ದಿಗಳನ್ನು ಪ್ರಕಟಿಸಿದ್ದರಿಂದ ಜನರು ಮತ್ತು ಇಲಾಖೆ ಇತ್ತ ಗಮನಹರಿಸಲು ಸಹಕಾರಿಯಾಗಿದೆ ಎಂದರು.

ADVERTISEMENT

ಅರಸೀಕಟ್ಟೆ ಅಮ್ಮ ಸಮಿತಿಯ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಮಾತನಾಡಿ, ಹದಿಹರೆಯದ ವಯಸ್ಸಿನವರೂ ಹೃದಯ ಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜೀವನಶೈಲಿ, ಒತ್ತಡಗಳು, ಆಹಾರ ಪದ್ಧತಿ, ದುರಾಸೆ ಮತ್ತು ಮಲೀನ ಪರಿಸರ ಮತ್ತು ತಿನ್ನುವ ಆಹಾರದಲ್ಲಿಯೂ ವಿಷದ ಅಂಶಗಳು ಹೃದಯ ಸಮಸ್ಯೆಗೆ ಕಾರಣವಾಗುತ್ತಿವೆ. ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ ಎಂದಯ ಸಲಹೆ ನೀಡಿದರು.

ಗ್ರಾಮೀಣ ಜನರ ಅನುಕೂಲಕ್ಕಾಗಿ ಶಿಬಿರ ಆಯೋಜಿಸಲಾಗಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಪ್ರಥಮ ಚಿಕಿತ್ಸೆಯ ಪ್ರದರ್ಶನ ಏರ್ಪಡಿಸಲಾಗಿದೆ. ತಾಲ್ಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರಿಗೂ ಅರಸೀಕಟ್ಟೆ ಅಮ್ಮ ದೇವಾಲಯದ ವತಿಯಿಂದ ರಕ್ತದೊತ್ತಡ ತಪಾಸಣೆ, ಥರ್ಮಾಮೀಟರ್, ನಾಡಿ ಪರೀಕ್ಷಿಸುವ ಪರಿಕರಗಳನ್ನು ಒಳಗೊಂಡ ₹ 4,900 ಮೌಲ್ಯದ ಕಿಟ್ ಉಚಿತವಾಗಿ ನೀಡಿದ್ದೇವೆ ಎಂದರು.

ಕಾರ್ಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ತೇಜಸ್ವಿ ಮಾತನಾಡಿ, ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು 5 ಅಂಶಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗಿದ್ದು, ಪಾಲಿಶ್ ಮಾಡಿರುವ ಅಕ್ಕಿಯ ಬಳಕೆ ಕಡಿಮೆ ಮಾಡುವುದು, ಹೆಚ್ಚು ಬಿಳುಪಿರುವ ಪುಡಿ ಉಪ್ಪಿನ ಬದಲು ಹರಳುಪ್ಪನ್ನು ಬಳಸಬೇಕು. ರಿಫೈನ್ಡ್ ಅಡುಗೆ ಎಣ್ಣೆ ಬದಲು ಗಾಣದ ಎಣ್ಣೆ ಬಳಕೆ ಮಾಡುವುದು, ಮೈದಾ ಮತ್ತು ಸಕ್ಕರೆಯ ಬಳಕೆಯನ್ನು ಕಡಿಮೆಮಾಡುವುದು ಮತ್ತು ಕೃತಕ ಬಣ್ಣಗಳನ್ನು ಅಡುಗೆಗೆ ಬಳಸುವುದನ್ನು ನಿಲ್ಲಿಸಬೇಕು ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಲೋಕೇಶ್ ಪ್ರಥಮ ಚಿಕಿತ್ಸಾ ವಿಧಾನ ವಿವರಿಸಿದರು. ಹಿಮ್ಸ್ ವೈದ್ಯರ ತಂಡವು ಹೃದಯ ಸ್ತಂಭನ ಆದಾಗ, ಉಸಿರಾಟ ನಿಂತಲ್ಲಿ ನೀಡಬಹುದಾದ ಪ್ರಥಮ ಚಿಕಿತ್ಸೆ ಪ್ರಾತ್ಯಕ್ಷಿಕೆ ನೀಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಸೇರಿದಂತೆ 16 ವೈದ್ಯರು, ಸಿಬ್ಬಂದಿಗಳು ಇದ್ದರು. ಅರಸೀಕಟ್ಟೆ ಅಮ್ಮ ಸಮಿತಿಯ ಕಾರ್ಯದರ್ಶಿ ಕೃಷ್ಣೇಗೌಡ, ಉಪಾಧ್ಯಕ್ಷ ಬಸವರಾಜು, ಖಜಾಂಚಿ ಸಿದ್ಧರಾಮು, ಸದಸ್ಯ ಸತೀಶ್, ಕುಮಾರ್, ಸದಾಶಿವ, ಶ್ರೀನಾಥ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ವಿವಿಧೆಡೆಗಳಿಂದ ಬಂದಿದ್ದ ಶಿಬಿರಾರ್ಥಿಗಳು ಇದ್ದರು.

ಕೊಣನೂರು ಹೋಬಳಿಯ ಅರಸೀಕಟ್ಟೆ ಅಮ್ಮ ದೇವಾಲಯದ ಆವರಣದಲ್ಲಿ ನಡೆದ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ಹಿಮ್ಸ್ ವೈದ್ಯರ ತಂಡವು ಪ್ರಥಮ ಚಿಕಿತ್ಸೆ ಮಾಡುವ ವಿಧಾನವನ್ನು ಪ್ರದರ್ಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.