ಹೇಮಾವತಿ ಹಿನ್ನೀರಿನಲ್ಲಿ ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ ಚರ್ಚ್ ಮುಳುಗಡೆಯಾಗುತ್ತಿದೆ. ಪ್ರಜಾವಾಣಿ
ಚಿತ್ರ/ಅತೀಖುರ್ ರಹಮಾನ್
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮೂರನೇ ದಿನವೂ ಮಳೆಯ ಅಬ್ಬರ ಜೋರಾಗಿತ್ತು. ಬುಧವಾರವೂ ಬಿಟ್ಟುಬಿಡದೇ ಸುರಿದ ಮಳೆಯಿಂದ ಜಿಲ್ಲೆಯ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕಳೆದ ವರ್ಷ ಬರದ ಬವಣೆಯನ್ನು ನೀಗಿಸಿದಂತಾಗಿದೆ.
ಜಿಲ್ಲೆಯ ಹೇಮಾವತಿ, ಯಗಚಿ, ವಾಟೆಹೊಳೆ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಳವಾಗಿದೆ. ಹೇಮಾವತಿ ಜಲಾಶಯ ಭರ್ತಿಗೆ ಇನ್ನು 13 ಅಡಿ ಮಾತ್ರ ಬಾಕಿ ಉಳಿದಿದೆ. ಇದೇ ರೀತಿ ಮಳೆ ಮುಂದುವರಿದರೆ, ಇನ್ನೊಂದು ವಾರದಲ್ಲಿ ಜಲಾಶಯ ಭರ್ತಿ ಆಗಲಿದೆ ಎಂದು ಅಂದಾಜಿಸಲಾಗಿದೆ.
ಗರಿಷ್ಠ 37 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿದ್ದು, 26.047 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯಕ್ಕೆ ಜಲಾಶಯದಿಂದ ನೀರನ್ನು ಹೊರಗೆ ಬಿಡುತ್ತಿಲ್ಲ.
ಮಲೆನಾಡು ಭಾಗವಾದ ಸಕಲೇಶಪುರ, ಆಲೂರು ತಾಲ್ಲೂಕಿನಲ್ಲಿ ಮಳೆ ಹೆಚ್ಚಾಗಿದ್ದು, ನದಿ, ಹಳ್ಳ–ಕೊಳ್ಳಗಳಿಗೆ ನೀರು ಹರಿದು ಬರುತ್ತಿದೆ. ಆದರೆ, ಅರೆಮಲೆನಾಡು, ಬಯಲು ಸೀಮೆ ಪ್ರದೇಶಗಳಾದ ಅರಸೀಕೆರೆ, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ.
ಆಲೂರಿನ ಕೆ. ಹೊಸಕೋಟೆಯಲ್ಲಿ 5 ಸೆಂ.ಮೀ., ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ 6.7 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಸಕಲೇಶಪುರ ತಾಲ್ಲೂಕು ಹೊರತುಪಡಿಸಿ, ಬೇರೆ ಯಾವುದೇ ತಾಲ್ಲೂಕಿನಲ್ಲಿಯೂ 2 ಸೆಂ.ಮೀ.ಗಿಂತ ಅಧಿಕ ಮಳೆಯಾಗಿಲ್ಲ.
ಮುಳುಗಿದ ಶೆಟ್ಟಿಹಳ್ಳಿ ಚರ್ಚ್: ಹೇಮಾವತಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ ಚರ್ಚ್, ಮತ್ತೆ ಮುಳುಗಡೆಯಾಗಿದೆ.
ಕಳೆದ ವರ್ಷ ಮಳೆ ಕೈಕೊಟ್ಟಿದ್ದರಿಂದ ಹೇಮಾವತಿ ಜಲಾಶಯ ಬರಿದಾಗಿತ್ತು. ಹೀಗಾಗಿ ಶೆಟ್ಟಿಹಳ್ಳಿಯ ಚರ್ಚ್ ಪ್ರವಾಸಿಗರ ನೆಚ್ಚಿನ ತಾಣವಾಗಿ ಪರಿಣಮಿಸಿತ್ತು. ಮತ್ತೊಮ್ಮೆ ಹೆಚ್ಚಿನ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಹೀಗಾಗಿ ಬುಧವಾರ ಸಂಜೆಯೊಳಗೆ ಚರ್ಚ್ ಸಂಪೂರ್ಣ ಮುಳುಗಡೆಯಾಗಿದೆ.
21 ರವರೆಗೆ ಯೆಲ್ಲೋ ಅಲರ್ಟ್: ಜಿಲ್ಲೆಯಲ್ಲಿ ಮಂಗಳವಾರ, ಬುಧವಾರ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಇದೀಗ ಜು.18 ರಿಂದ 21 ರವರೆಗೆ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಸಾಧಾರಣದಿಂದ ಅಧಿಕ ಮಳೆಯಾಗಲಿದ್ದು, 6.4 ಸೆಂ.ಮೀ.ನಿಂದ 11 ಸೆಂ.ಮೀ.ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೇಮಾವತಿ ಹಿನ್ನೀರಿನಲ್ಲಿ ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ ಚರ್ಚ್ ಮುಳುಗಡೆಯಾಗುತ್ತಿದೆ. ಪ್ರಜಾವಾಣಿ ಚಿತ್ರ/ಅತೀಖುರ್ ರಹಮಾನ್
ಶಾಲೆಗಳಿಗೆ ರಜೆ
ಭಾರಿ ಮಳೆ ಸುರಿಯುತ್ತಿರುವುದರಿಂದ ಸಕಲೇಶಪುರ ಹಾಗೂ ಆಲೂರು ತಾಲ್ಲೂಕಿನ ಶಾಲೆಗಳಿಗೆ ಜುಲೈ 19ರಂದು ರಜೆ ಘೋಷಿಸಲಾಗಿದೆ. ಎರಡೂ ತಾಲ್ಲೂಕಿನ ಅಂಗನವಾಡಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಕೆ. ಪಾಂಡು ತಿಳಿಸಿದ್ದಾರೆ. ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆದೇಶ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.