ADVERTISEMENT

ಕೋವಿಡ್‌ನಿಂದ ಮೃತಪಟ್ಟ ಶಿಕ್ಷಕಿ ಕುಟುಂಬಕ್ಕೆ ನೆರವು: ಸಚಿವ ಗೋಪಾಲಯ್ಯ ಭರವಸೆ

ತಂದೆ, ತಾಯಿ ಕಳೆದುಕೊಂಡ ಮಗನಿಗೆ ಸಾಂತ್ವನ ಹೇಳಿದ ಸಚಿವ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 13:59 IST
Last Updated 10 ಅಕ್ಟೋಬರ್ 2020, 13:59 IST
ಹಾಸನದ ಸತ್ಯಮಂಗಲದಲ್ಲಿರುವ ಮೃತ ಶಿಕ್ಷಕಿ ಸ್ವರ್ಣ ನಿವಾಸಕ್ಕೆ ಸಚಿವ ಗೋಪಾಲಯ್ಯ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಹಾಸನದ ಸತ್ಯಮಂಗಲದಲ್ಲಿರುವ ಮೃತ ಶಿಕ್ಷಕಿ ಸ್ವರ್ಣ ನಿವಾಸಕ್ಕೆ ಸಚಿವ ಗೋಪಾಲಯ್ಯ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.   

ಹಾಸನ: ಕೋವಿಡ್‌ನಿಂದ ಇತ್ತೀಚೆಗೆ ಮೃತಪಟ್ಟ ಶಿಕ್ಷಕಿ ಸ್ವರ್ಣ ಅವರ ಕುಟುಂಬಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ನಗರದ ಸತ್ಯಮಂಗಲದಲ್ಲಿರುವ ಸ್ವರ್ಣ ನಿವಾಸಕ್ಕೆ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಅನುಕಂಪದ ಆಧಾರದ ಮೇಲೆ ಸ್ವರ್ಣ ಅವರ ಮಗನಿಗೆ ಉದ್ಯೋಗ ಒದಗಿಸಲಾಗುವುದು ಎಂದರು.

ಪರಿಹಾರ ಹಾಗೂ ಇತರೆ ಬರಬೇಕಿರುವ ಹಣವನ್ನು ಶೀಘ್ರ ಒದಗಿಸುವ ಜೊತೆಗೆ ಅನುಕಂಪದ ಅಧಾರದ ಮೇಲೆ ಉದ್ಯೋಗಕ್ಕೆ ಯುವಕನನ್ನು ಅಲೆದಾಡಿಸದೆ ಶೀಘ್ರವೇ ಕಡತ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಸ್‌.ಪ್ರಕಾಶ್‌ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಮ್‌ ಅವರಿಗೆ ಸಚಿವರು ಸೂಚನೆ ನೀಡಿದರು.

ADVERTISEMENT

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಶಿಕ್ಷಕಿ ಸ್ವರ್ಣ ಅವರ ಪತಿ ಮಂಜುನಾಥ್ ದೇವಾಲಯದಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದರು. ಅವರು ಮೃತಪಟ್ಟ ಕೆಲವೇ ದಿನದಲ್ಲಿ ಶಿಕ್ಷಕಿ ಸಹ ಸಾವಿಗೀಡಾಗಿದ್ದಾರೆ. ಆದ್ದರಿಂದ ಸರ್ಕಾರ ಅವರ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡಲಿದ್ದು, ಅವರ ಒಬ್ಬರೇ ಪುತ್ರನಿಗೆ ಸರ್ಕಾರಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದರು.

ರಾಜ್ಯದಲ್ಲಿ ಶಾಲಾ, ಕಾಲೇಜು ಆರಂಭಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿಲ್ಲ. ಶಿಕ್ಷಣ ತಜ್ಞರು ಹಾಗೂ ಪೋಷಕರೊಂದಿಗೆ ಚರ್ಚಿಸಿದ ಬಳಿಕವಷ್ಟೇ ಆರಂಭವಾಗಲಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದಿಲ್ಲ ಎಂದು ಸ್ಪಷ್ಟಪಡಿಸಿದರು.

ಅರಸೀಕೆರೆ ತಾಲ್ಲೂಕಿನ ಡಿ.ಎಂ.ಕುರ್ಕೆ ಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕೊರೊನಾ ಸೋಂಕಿತನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು. ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.