ಹಾಸನ: ಜಿಲ್ಲೆಯಲ್ಲಿ 15 ದಿನಗಳ ಕಾಲ ಸುರಿದ ಮಳೆ, ಆಡಳಿತದ ಅವ್ಯವಸ್ಥೆಯನ್ನು ಬಯಲು ಮಾಡಿದೆ. ಎಲ್ಲಿ ನೋಡಿದರೂ ನೀರು, ಭೂಕುಸಿತ, ಮನೆಗಳ ಹಾನಿ, ಬೆಳೆದು ನಿಂತು ಪೈರು ಜಲಾವೃತ ಹೀಗೆ... ಸಂಪೂರ್ಣ ಜನಜೀವನವನ್ನೇ ಸ್ತಬ್ಧಗೊಳಿಸಿದೆ. ವರುಣನ ಆರ್ಭಟಕ್ಕೆ ಮಲೆನಾಡು ನಲುಗಿದ್ದರೆ, ಹೇಮೆಯ ಪ್ರವಾಹಕ್ಕೆ ಅರೆ ಮಲೆನಾಡು, ಬಯಲು ಸೀಮೆ ಪ್ರದೇಶಗಳೂ ಹಾನಿ ಅನುಭವಿಸುವಂತಾಗಿವೆ.
ಸಕಲೇಶಪುರ, ಆಲೂರು, ಬೇಲೂರು, ಹಾಸನ ತಾಲ್ಲೂಕುಗಳಲ್ಲಿ ಮಳೆಯ ಆರ್ಭಟದಿಂದ ಹೆಚ್ಚಿನ ಅನಾಹುತ ಸಂಭವಿಸಿದೆ. ಸಕಲೇಶಪುರ ತಾಲ್ಲೂಕಿನಲ್ಲಂತೂ ಭೂಕುಸಿತದ ಆತಂಕ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಸಂಚರಿಸುವುದೇ ದುಸ್ತರ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಕೃತಿಯ ಮುನಿಸೋ, ಸ್ವಯಂಕೃತ ಅಪರಾಧವೋ: ಮಲೆನಾಡು ಭಾಗವಾದ ಸಕಲೇಶಪುರ, ಆಲೂರು ತಾಲ್ಲೂಕುಗಳಲ್ಲಿ ಭೂಕುಸಿತದ ಭೀತಿ ಹೆಚ್ಚುತ್ತಲೇ ಇದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ ಈ ತಾಲ್ಲೂಕುಗಳಲ್ಲಿ ಪ್ರಕೃತಿಯ ಮುನಿಸಿನ ಜೊತೆಗೆ ಸ್ವಯಂಕೃತ ಅಪರಾಧವೂ ಭೂಕುಸಿತಕ್ಕೆ ಕಾರಣವಾಗುತ್ತಿದೆ ಎನ್ನುವುದು ಮಲೆನಾಡಿನ ಜನರ ಆರೋಪ.
ಹೆದ್ದಾರಿ ಕಾಮಗಾರಿ ಆರಂಭಿಸುವ ಮೊದಲು, ಹೆದ್ದಾರಿಯ ಬದಿಯಲ್ಲಿ ಭೂಕುಸಿತದ ಆತಂಕ ಇರಲಿಲ್ಲ. ಯಾವಾಗ ಹೆದ್ದಾರಿ ವಿಸ್ತರಣೆ ಕಾಮಗಾರಿ ಆರಂಭವಾಯಿತೋ, ಭೂಕುಸಿತದ ಘಟನೆಗಳೂ ಶುರುವಾದವು. ಮೊದಲು ದೋಣಿಗಾಲ್‌ನಲ್ಲಿ ಆರಂಭವಾದ ಭೂಕುಸಿತ ಈಗ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆಗೆ ಸ್ಥಳಾಂತರವಾಗಿದೆ.
ಎತ್ತರಕ್ಕೆ ಕತ್ತರಿಸಿರುವ ಗುಡ್ಡಗಳ ಮೇಲಿಂದ ಮಳೆ ನೀರು ನಿರಂತರವಾಗಿ ಹರಿಯುತ್ತದೆ. ಮಳೆಯ ರಭಸಕ್ಕೆ ನೀರಿನ ಜೊತೆಗೆ ಮಣ್ಣೂ ಕುಸಿದು ಕೆಳಗೆ ಬೀಳುತ್ತಿದೆ. ಸಮರ್ಪಕ ತಡೆಗೋಡೆಗಳ ನಿರ್ಮಾಣ ಮಾಡದೇ ಇರುವುದು ಈ ಭೂಕುಸಿತಕ್ಕೆ ಕಾರಣ ಎನ್ನುವುದು ಸ್ಥಳೀಯರ ಆರೋಪ.
ಹಾಸನದಿಂದ ಸಕಲೇಶಪುರದವರೆಗಿನ ಕಾಮಗಾರಿಯಲ್ಲಿ ಅಷ್ಟೊಂದು ಭೂಕುಸಿತ ಆಗಿಲ್ಲ. ಆದರೆ, ಹೆದ್ದಾರಿಯ ತಡೆಗೋಡೆಗಳೇ ಕುಸಿದಿವೆ. ಆದರೆ, ಸಕಲೇಶಪುರದಿಂದ ಮಾರನಹಳ್ಳಿವರೆಗಿನ ರಸ್ತೆಯಲ್ಲಿ ಮಾತ್ರ ಭೂಕುಸಿತದ ಪ್ರಮಾಣ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಗುಡ್ಡಗಳನ್ನೇ ಕತ್ತರಿಸಿ, ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಈ ಪ್ರದೇಶದಲ್ಲಿ ಭೂಕುಸಿತದ ಆತಂಕ ನಿರಂತರವಾಗಿದೆ.
ಮೇಲಿನಿಂದ ಬೀಳುವ ಮಣ್ಣು ರಸ್ತೆಯನ್ನಷ್ಟೇ ಆಕ್ರಮಿಸಿಕೊಳ್ಳುತ್ತಿಲ್ಲ. ಅಕ್ಕಪಕ್ಕದ ಗದ್ದೆಗಳ ಮೇಲೂ ಮಣ್ಣಿನ ರಾಶಿ ಬೀಳುತ್ತಿದ್ದು, ಬೆಳೆದ ಬೆಳೆಗಳೆಲ್ಲ ಮಣ್ಣು ಪಾಲಾಗುತ್ತಿವೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಸ್ಥಿತಿ ರೈತರದ್ದಾಗಿದೆ.
ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಸಂತೋಷ್ ಸಿ.ಬಿ., ಜಾನೇಕೆರೆ ಆರ್. ಪರಮೇಶ್, ಎಚ್.ವಿ. ಸುರೇಶ್‌ಕುಮಾರ್, ಜಗದೀಶ್ ಆರ್. ಹೊರಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.