ಹೆತ್ತೂರು: ಅರಣ್ಯ ಇಲಾಖೆಯ ಅಧಿಕಾರಿಗಳ ಬಿಗಿ ನಿಲುವಿನಿಂದಾಗಿ ಇಟ್ಟಿಗೆ ಉದ್ಯಮದ ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ಹೆಚ್ಚು ಮಳೆ ಬೀಳುವ ಮಲೆನಾಡಿನಲ್ಲಿ ಕೈಗಾರಿಕೆಗಳು ಬೆಳೆಯುವುದು ಸಾಧ್ಯವೇ ಇಲ್ಲ. ಇಲ್ಲಿನ ವಾತಾವರಣ ಕೈಗಾರಿಕೆಗಳಿಗೆ ಪೂರಕವಾಗಿಲ್ಲ ಎಂಬ ಮಾತಿದೆ. ಇದರಿಂದಾಗಿ ತೋಟಗಳನ್ನು ಹೊರುತುಪಡಿಸಿದರೆ ವಿದ್ಯಾವಂತರಿಗೆ ದುಡಿಯಲು ಅವಕಾಶವೇ ಇಲ್ಲ.
ಇಂತಹ ಪರಿಸ್ಥಿತಿಯಲ್ಲೂ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡ ಕೆಲವು ಉದ್ಯಮಿಗಳು ವರ್ಷದ ಮೂರು ತಿಂಗಳು ಅಂದರೆ ಜನವರಿಯಿಂದ ಮಾರ್ಚ್‌ವರೆಗೆ ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ಹಲವು ದಶಕಗಳಿಂದ ಇಟ್ಟಿಗೆ ಉತ್ಪಾದಿಸುವ ಮೂಲಕ ಸಾವಿರಾರರು ಕಾರ್ಮಿಕರಿಗೆ ಉದ್ಯೋಗ ನೀಡುತ್ತಿದ್ದು, ತಾಲ್ಲೂಕಿನ ಆರ್ಥಿಕತೆಗೆ ತಮ್ಮದೆ ಕಾಣಿಕೆ ನೀಡುತ್ತಿದ್ದರು. ಸದ್ಯ ಕಾನೂನು ಪಾಲನೆ ಹೆಸರಿನಲ್ಲಿ ಅರಣ್ಯ ಇಲಾಖೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿರುವುದು ಇಟ್ಟಿಗೆ ಉದ್ಯಮವನ್ನು ಮುಚ್ಚುವಂತೆ ಮಾಡಿದೆ.
ಸೌದೆ ಸಾಗಾಟಕ್ಕೆ ತಡೆ: ನಿಯಮಾನುಸಾರವಾಗಿ ಮಾತ್ರ ಇಟ್ಟಿಗೆ ಭಟ್ಟಿಗಳಿಗೆ ಸೌದೆ ಪೂರೈಸಬಹುದು ಎಂಬ ನಿಯಮ ಇಟ್ಟಿಗೆ ಉದ್ಯಮದ ಮೇಲೆ ಪ್ರಹಾರ ನಡೆಸಿದೆ. ನಿಯಮದ ಪ್ರಕಾರ ಮರಗಸಿ ನಡೆಸಿದ ಹಾಗೂ ಒಣ ಸೌದೆಗಳನ್ನು ಸಾಗಿಸಲು ಅವಕಾಶ ಕಲ್ಪಿಸಲಾಗಿದೆ ಎಂಬುದು ಅರಣ್ಯ ಇಲಾಖೆಯ ಅಧಿಕಾರಿಗಳ ಮಾತು.
ಆದರೆ, ಇಟ್ಟಿಗೆ ಭಟ್ಟಿಗಳಿಗೆ ಹಸಿಯಾದ ಹಾಗೂ ಬುಡಗಸಿ ಸೌದೆಗಳನ್ನು ಮಾತ್ರ ಬಳಸಲಾಗುತ್ತಿದ್ದು, ಮರಗಸಿ ಸೌದೆಗಳಿಂದ ಇಟ್ಟಿಗೆ ಸುಡಲು ಸಾಧ್ಯವಿಲ್ಲ ಎಂಬುದು ಇಟ್ಟಿಗೆ ಉದ್ಯಮಿಗಳ ಮಾತು.
ಆದರೆ, ಬುಡಗಸಿ ಹಾಗೂ ಹಸಿ ಸೌದೆ ಸಾಗಾಟಕ್ಕೆ ಅವಕಾಶ ಇಲ್ಲದ ಪರಿಣಾಮ ಕಟ್ಟಿಗೆ ಕೊರತೆಯಿಂದ ಇಟ್ಟಿಗೆ ಉದ್ಯಮ ಸ್ಥಗಿತಗೊಂಡಿದೆ. ಇಟ್ಟಿಗೆ ಪೂರೈಕೆಗಾಗಿ ಹಿಡುವಳಿ ಜಮೀನಿನಲ್ಲಿರುವ ಅನುಪಯುಕ್ತ ಮರಗಳನ್ನು ಕಡಿದು, ಇಟ್ಟಿಗೆ ಭಟ್ಟಿಗಳಿಗೆ ಸಾಗಿಸುವ ವರ್ಗವೇ ಒಂದಿತ್ತು. ಹಿಡುವಳಿ ಜಮೀನಿನಲ್ಲಿ ಬುಡಸಹಿತ ಮರಕಡಿಯಲು ಅವಕಾಶವಿಲ್ಲ ಎಂಬ ಕಾನೂನನ್ನು ಎತ್ತಿ ಹಿಡಿದಿರುವ ಅಧಿಕಾರಿಗಳು, ಮರಕಡಿಯ ಬೇಕಾದರೆ ಇಲಾಖೆಯ ಪರವಾನಗಿ ಪಡೆಯಬೇಕು ಎನ್ನುವ ಷರತ್ತು ವಿಧಿಸಿದ್ದಾರೆ.
ಆದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲು ಸಾಕಷ್ಟು ಶ್ರಮ ಹಾಗೂ ಕಾಲಾವಕಾಶ ಬೇಕಿರುವುದರಿಂದ ಪರವಾನಗಿ ಪಡೆದು ಸೌದೆ ಸಾಗಿಸುವುದು ಸಾಧ್ಯವಿಲ್ಲದ ಮಾತು ಎಂಬುದು ಇಟ್ಟಿಗೆ ಉದ್ಯಮಿಗಳ ಅಭಿಪ್ರಾಯ. ಪರಿಣಾಮ ಸೌದೆ ಕೊರತೆ ಎದುರಿಸುತ್ತಿರುವ ಇಟ್ಟಿಗೆ ಉದ್ಯಮಿಗಳು ಲಕ್ಷಾಂತರ ಇಟ್ಟಿಗೆಗಳು ಭಟ್ಟಿ ಇಳಿಸಿ ಸುಡಲು ಕಾಯುತ್ತಿದ್ದು, ಭಟ್ಟಿ ಇಳಿಸಿರುವ ಇಟ್ಟಿಗೆಗಳು ಬಿಸಿಲಿನಿಂದ ಒಣಗಿ ಒಡೆದು ನಾಶವಾಗುತ್ತಿವೆ.
ಕಾರ್ಮಿಕರು ವಾಪಸ್: ಸದ್ಯ ಮಲೆನಾಡು ವ್ಯಾಪ್ತಿಯಲ್ಲಿ ಸುಮಾರು 30 ಇಟ್ಟಿಗೆ ಭಟ್ಟಿ ಇಳಿಸುವ ಯಂತ್ರಗಳಿದ್ದು, ಪ್ರತಿ ಯಂತ್ರಕ್ಕೆ 50 ಕಾರ್ಮಿಕರ ಅವಶ್ಯಕತೆ ಇದೆ. ಸುಮಾರು 1,500 ಜನರಿಗೆ ಈ ಉದ್ಯಮ ಉದ್ಯೋಗವಕಾಶ ನೀಡುತ್ತಿದೆ.
ಇದರಲ್ಲಿ ಇಟ್ಟಿಗೆ ಗೂಡು ನಿರ್ಮಾಣಕ್ಕಾಗಿ ತಮಿಳುನಾಡಿನಿಂದ ಕಾರ್ಮಿಕರು ಪ್ರತಿ ವರ್ಷ ಬರುತ್ತಿದ್ದಾರೆ. ಆದರೆ ಈ ಬಾರಿ ಬಂದಿರುವ ಕಾರ್ಮಿಕರಿಗೆ ಕೆಲಸವಿಲ್ಲದ್ದರಿಂದ ತವರಿಗೆ ವಾಪಸಾಗುತ್ತಿದ್ದಾರೆ. ಈ ಕಾರ್ಮಿಕರು ವಾಪಸಾದರೆ ಅಪಾರ ಪ್ರಮಾಣದಲ್ಲಿ ನೀಡಿರುವ ಸಾಲ ಮನ್ನಾ ಆಗಲಿದೆ ಎಂಬ ಆತಂಕ ಇಟ್ಟಿಗೆ ಉದ್ಯಮಿಗಳದ್ದಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಪಾಲನೆ ನೆಪದಲ್ಲಿ ಇಲ್ಲದ ಕಿರುಕುಳ ನೀಡುತ್ತಿದ್ದಾರೆ. ಮಲೆನಾಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹಾಸನದಲ್ಲಿ ಹಿರಿಯ ಅರಣ್ಯಾಧಿಕಾರಿಗಳ ಸಭೆ ನಡೆಸಲಾಗುತ್ತಿದೆ.ಸಿಮೆಂಟ್ ಮಂಜು ಶಾಸಕ
ಸೌದೆ ಪೂರೈಕೆಗೆ ವಿಧಿಸಿರುವ ಷರತ್ತುಗಳನ್ನು ಪೂರೈಸಲು ಸಾಧ್ಯವಿಲ್ಲ. ಅರಣ್ಯ ಬೆಳೆಸಿರುವುದು ಅರಣ್ಯ ಇಲಾಖೆ ಎಂಬ ಮನಸ್ಥಿತಿ ಅಧಿಕಾರಿಗಳಲ್ಲಿದೆ. ಈ ಅರಣ್ಯದ ಅಳಿವು– ಉಳಿವು ಸ್ಥಳೀಯರನ್ನೇ ಅವಲಂಬಿಸಿದೆ.ಪವನ್ ಕುಮಾರ್ ಕುಪ್ಪಳಿ ಇಟ್ಟಿಗೆ ಉದ್ಯಮಿ
ಸದ್ಯ ಅರಣ್ಯ ಇಲಾಖೆಯ ಯಥಾವತ್ ಕಾನೂನು ಜಾರಿಯಿಂದ ಸಾಕಷ್ಟು ಜನರಿಗೆ ತೊಂದರೆಯಾಗಿದ್ದು ಬೆಳೆಗಾರರು ಇಟ್ಟಿಗೆ ಉದ್ಯಮಿಗಳು ಜೊತೆಯಾಗಿ ಅರಣ್ಯ ಇಲಾಖೆಯ ವಿರುದ್ದ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಶೀಘ್ರವೇ ದಿನಾಂಕ ನಿಗದಿ ಮಾಡಲಾಗುತ್ತಿದೆ.
ಇಟ್ಟಿಗೆ ಉದ್ಯಮ ಸಾಕಷ್ಟು ಸವಾಲುಗಳ ನಡುವೆ ನಡೆಯುತ್ತಿದ್ದು ಸೌದೆ ಪೂರೈಕೆಗೆ ತಡೆ ಒಡ್ಡಿರುವುದರಿಂದ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ ಎಂಬ ಆಳಲಿನೊಂದಿಗೆ ಉದ್ಯಮಿಗಳ ದಂಡು ಜನಪ್ರತಿನಿಧಿಗಳನ್ನು ಭೇಟಿಯಾಗಿ ಸಮಸ್ಯೆ ತೊಡಿಕೊಂಡಿತ್ತು. ಈ ವೇಳೆ ವಲಯ ಅರಣ್ಯಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತಾಕೀತು ಮಾಡಿದ್ದ ಶಾಸಕ ಸಿಮೆಂಟ್ ಮಂಜು ಸೌದೆ ಪೂರೈಕೆಗೆ ತೊಂದರೆ ನೀಡದಂತೆ ಸೂಚನೆ ನೀಡಿದ್ದರು.
ಜನಪ್ರತಿನಿಧಿಗಳ ಮಾತಿಗೆ ಅಧಿಕಾರಿಗಳು ಯಾವುದೇ ಗೌರವ ಕೊಡುತ್ತಿಲ್ಲ ಎಂದು ಉದ್ಯಮಿಗಳು ಹೇಳುತ್ತಿದ್ದಾರೆ. ಸದ್ಯ ಮಲೆನಾಡಿಗೆ ಅನ್ವಯವಾಗುತ್ತಿರುವ ಅರಣ್ಯ ನಿಯಮಗಳು ಜನಸಾಮಾನ್ಯರ ಪಾಲಿಗೆ ಸಮಸ್ಯೆಯಾಗಿದ್ದು ಈ ನಿಯಮಗಳ ಮಾರ್ಪಾಡು ಮಾಡುವಂತೆ ಶಾಸಕರ ಸಮ್ಮುಖದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.