
ಹೆತ್ತೂರು: 650 ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು.
ಗ್ರಾಮದಲ್ಲಿ ಎರಡು ದಿನಗಳ ಕಾಲ ನಡೆದ ಜಾತ್ರಾ ಮಾಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಹೋಮ, ಹವನ, ಕಳಶ ಪೂಜೆ, ರೈತರು ಹೊಸದಾಗಿ ಬೆಳೆದ ಭತ್ತ, ಹಣ್ಣು, ತರಕಾರಿ ಮಾದಲಾದ ಬೆಳೆಗಳನ್ನು ಒಂದೆಡೆ ಕಲೆ ಹಾಕಿ, ಪ್ರಸಾದ ತಯಾರಿಸಿ ದೇವರಿಗೆ ನೈವೇದ್ಯ ಮಾಡಿದ ನಂತರ ಸಂಜೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಶನಿವಾರ ಬೆಳಿಗ್ಗೆ ಗ್ರಾಮದ ಮಂದೇ ಪಟೇಲರ ಮನೆಯಿಂದ ದೇವರ ಕಟ್ಟೆಗೆ, ಕುಮಾರಲಿಂಗೇಶ್ವರ ಸ್ವಾಮಿ ಮುಖವಾಡಗಳನ್ನು ತರಲಾಯಿತು. ವಿವಿಧ ಪೂಜೆ ಸಲ್ಲಿಸಿ, ಮಲೆನಾಡಿನ ಕರಡಿ ವಾದ್ಯ, ಸುಗ್ಗಿ ಕುಣಿತಗಳೊಂದಿಗೆ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ ಗ್ರಾಮದ ಸಾಂಪ್ರದಾಯಿಕ ದೇವರ ಹಾದಿಯಲ್ಲಿ ಮಲೆನಾಡ ವಾದ್ಯ, ಕೊಂಬು, ಕಹಳೆ ನಾದಗಳೊಂದಿಗೆ ಜಾತ್ರೆ ಮೈದಾನದಲ್ಲಿರುವ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆ ಸಾಗುತ್ತಿದ್ದ ದಾರಿಯುದ್ದಕ್ಕೂ ಸಾವಿರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು, ವಾದ್ಯಗಳ ನಾದಕ್ಕೆ ಹೆಜ್ಜೆ ಇಡುತ್ತಾ ಕುಣಿದು ಸಂಭ್ರಮಿಸಿದರು. ಜಾತ್ರೆ ಮುಗಿದ ನಂತರ ಸಂಜೆ ದೇವರ ಮೂರ್ತಿಯನ್ನು ಮಲ್ಲೇಶ್ವರ ದೇವಸ್ಥಾನವರೆಗೆ ಹೊತ್ತು ತಂದು ಉತ್ಸವ ಮುಕ್ತಾಯಗೊಳಿಸಲಾಯಿತು. ದೇವಸ್ಥಾನ ಹಾಗೂ ಜಾತ್ರೆ ಮೈದಾನವನ್ನು ತಳಿರು ತೋರಣ, ಬಗೆ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು.
ಹೆತ್ತೂರು, ಕೊಣಬನಹಳ್ಳಿ, ಹಳ್ಳಿಯೂರು, ಹಾಡ್ಲಹಳ್ಳಿ, ಹಾಡ್ಯ, ಹಳ್ಳಿಗದ್ದೆ ಹಾಗೂ ಸುತ್ತಲಿನ ಹತ್ತಾರು ಗ್ರಾಮಗಳಿಂದ ಬಂದಿದ್ದ ಭಕ್ತರು ಜಾತ್ರೆಗೆ ಅಣಿ ಮಾಡುವ ಕಾಯಕದಲ್ಲಿ ಪಾಲ್ಗೊಂಡಿದ್ದರು.
ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್, ಕಾರ್ಮಿಕ ಆಯುಕ್ತ ನಾಗೇಶ್ ಡಿ.ಜಿ., ಕೆಇಎಸ್ ಅಧಿಕಾರಿ ಎಚ್.ಇ. ಕೃಷ್ಣಮೂರ್ತಿ, ಶಾಸಕ ಸಿಮೆಂಟ್ ಮಂಜು, ಪ್ರಗತಿಪರ ಕೃಷಿಕ ರಂಗಸ್ವಾಮಿ, ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮುರಳಿ ಮೋಹನ್ ಸೇರಿದಂತೆ ಗ್ರಾಮಸ್ಥರು ಇದ್ದರು.
ಇತಿಹಾಸ: ಮಲೆನಾಡಿನ ಈ ಭಾಗದ ಸುತ್ತ ಸುಮಾರು ಐದು ಕಡೆಗಳಲ್ಲಿ ಇದೇ ಕುಮಾರಲಿಂಗೇಶ್ವರ ಸ್ವಾಮಿ ದೇವಸ್ಥಾನಗಳಿದ್ದು, ಇವುಗಳು ಸಹೋದರರ ದೇವರು ಎಂದು ನಂಬಲಾಗಿದೆ. ಒಂದು ವಾರದೊಳಗೆ, ಕೊಂಗಳ್ಳಿ, ಹೆತ್ತೂರು, ದೊಡ್ಡಕುಂದೂರು, ಶಾಂತಹಳ್ಳಿ, ಹುಲ್ಕೋಡು (ಸೊಮಾವಾರಪೇಟೆ ತಾಲ್ಲೂಕು) ಗ್ರಾಮದಲ್ಲಿ ಜಾತ್ರಾ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿದೆ.
ವರ್ಷದ ಜಾತ್ರೆಯ ದಿನ ಮಾತ್ರ ಕುಮಾರಲಿಂಗೇಶ್ವರ ದರ್ಶನ ಆಗುವುದರಿಂದ ತಾಲ್ಲೂಕು ಒಳಗೊಂಡಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಶ್ರದ್ಧಾಶಕ್ತಿಯಿಂದ ಉತ್ಸವದಲ್ಲಿ ಭಾಗಿಯಾಗಿ ಪೂಜೆ, ಹರಕೆಗಳನ್ನು ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.