ADVERTISEMENT

ಅಯೋಗ್ಯ, ಬದನೆಕಾಯಿ ಬಿಇಒ: ಶಿಕ್ಷಣಾಧಿಕಾರಿ ನಿಂದಿಸಿದ ಶಾಸಕ ಎಚ್.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 1:33 IST
Last Updated 9 ಸೆಪ್ಟೆಂಬರ್ 2025, 1:33 IST
   

ಬೇಲೂರು (ಹಾಸನ): ವಿದ್ಯಾರ್ಥಿಗಳ ಕ್ರೀಡಾಕೂಟದ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಎಚ್.ಕೆ.ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡರ ವಿರುದ್ಧ ಇಲ್ಲಿ ಹರಿಹಾಯ್ದರು. ಒಂದು ಹಂತದಲ್ಲಿ ಅಧಿಕಾರಿಗೆ ‘ಬದನೆಕಾಯಿ ಬಿಇಒ’ ಎಂದೂ ದೂಷಿಸಿದರು.

ಇಲ್ಲಿನ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಉದ್ಘಾಟನೆ ವೇಳೆ ಈ ಘಟನೆ ನಡೆಯಿತು. ‘ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲ. ಬಿಇಒ ಪಕ್ಕದಲ್ಲಿ ಕುಳಿತುಕೊಳ್ಳುವುದಿಲ್ಲ. ಅವರನ್ನು ಬೇರೆಡೆ ಕಳುಹಿಸಿ’ ಎಂದರು.

ಅದಕ್ಕೆ ಆಕ್ಷೇಪಿಸಿದ ಬಿಇಒ, ‘ನಾನು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ. ಬೇರೆಡೆ ಕಳುಹಿಸುವುದು ಸರಿಯಲ್ಲ’ ಎಂದರು.

ADVERTISEMENT

ಸಿಟ್ಟಿಗೆದ್ದ ಶಾಸಕರು, ‘ಜಾಸ್ತಿ ಮಾತನಾಡಬೇಡ. ರಾತ್ರಿಯೆಲ್ಲ ಕುಡಿದು ಫೋನ್ ಮಾಡುತ್ತಿಯಾ. ನೀನು ಬದನೆಕಾಯಿ ಬಿಇಒ. ಶಿಕ್ಷಕರು ನಿನ್ನಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಯಾರು ಹೇಳಿದೋರು ನಿಮಗೆ, ಕರೆಯಿರಿ ಅವರನ್ನು’ ಎಂದು ರಾಜೇಗೌಡ ಪ್ರತ್ಯುತ್ತರ ನೀಡಿದರು.

‘ನಾನು ಈ ಬಿಇಒ ಪಕ್ಕ ಕೂರುವುದಿಲ್ಲ’ ಎಂದು ಹಠ ಹಿಡಿದ ಶಾಸಕರು, ‘ಎದ್ದೇಳು. ಏಯ್ ಜಾಗ ಬಿಡು’ ಎಂದು ವೇದಿಕೆಯಿಂದಲೇ ಹೊರಟು ನಿಂತರು. ನಂತರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ‘ಕರೆಯದೇ ಬಂದವರಿಗೆ ಕೆರದಲ್ಲಿ ಹೊಡೆ ಸರ್ವಜ್ಞ ಎನ್ನುವಂತಾಗಿದೆ ನನ್ನ ಪರಿಸ್ಥಿತಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.