ADVERTISEMENT

ಹೊಳೆನರಸೀಪುರ | ಮೀಟರ್ ರೀಡರ್‌ ಸಿಬ್ಬಂದಿ ಬೇಜವಾಬ್ದಾರಿ: ಗ್ರಾಹಕರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 11:17 IST
Last Updated 26 ಆಗಸ್ಟ್ 2023, 11:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಳೆನರಸೀಪುರ: ತಾಲ್ಲೂಕಿನ ಸೆಸ್ಕ್‌  ಮೀಟರ್ ರೀಡರ್‌ ಸಿಬ್ಬಂದಿ ಬೇಜವಾಬ್ದಾರಿ ಕೆಲಸದಿಂದ ವಿದ್ಯುತ್ ಗ್ರಾಹಕರಿಗೆ ತೀವ್ರ ತೊಂದರೆ ಆಗಿದ್ದು, ಸಾವಿರಾರು ರೂಪಾಯಿ ಬಿಲ್ ಹಾಗೂ ದಂಡ ಪಾವತಿಸುವಂತೆ ಬಿಲ್ ನೀಡಿದ್ದಾರೆ ಎಂದು ಗ್ರಾಹಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಸೀತವಿಲಾಸ ರಸ್ತೆಯ ರವಿಕುಮಾರ್ ಎಂಬ ಗ್ರಾಹಕರ ಮನೆಯ ವಿದ್ಯುತ್ ಮೀಟರ್ ಮನೆಯ ಹೊರಗಿನ ಕಾರ್ ಪಾರ್ಕಿಂಗ್‍ನಲ್ಲಿ ಎಲ್ಲರಿಗೂ ಕಾಣುವಂತೆ ಇದೆ. ಜುಲೈ 9 ರಂದು ಸೆಸ್ಕ್‌ ಮೀಟರ್ ರೀಡರ್ ಸಿಬ್ಬಂದಿ, ಮೀಟರ್ ರೀಡಿಂಗ್ ವೇಳೆ ಬಳಕೆಯ ಯೂನಿಟ್ 0 ತೋರಿಸಿ, ನಿಗದಿತ ಶುಲ್ಕ ₹330 ಮತ್ತು ದರ ಪರಿಷ್ಕರಣೆ ವ್ಯತ್ಯಾಸದ ಹಣ ₹284 ಸೇರಿಸಿ, ಒಟ್ಟು ₹621 ಮೊತ್ತದ ಬಿಲ್ ನೀಡಿದ್ದರು.

ಆಗಸ್ಟ್ 9 ರಂದು ಮೀಟರ್ ರೀಡಿಂಗ್ ಓದಿರುವ ಸಿಬ್ಬಂದಿ, ಬಿಲ್‍ನಲ್ಲಿ ಬಳಕೆಯ ಯೂನಿಟ್ 296 ಎಂದು ನಮೂದಿಸಿ, ಒಟ್ಟು ₹2,903  ಬಿಲ್ ನೀಡಿದ್ದಾರೆ. ಆದರೆ ಸರ್ಕಾರದ ಗೃಹ ಜ್ಯೋತಿ ಯೋಜನೆಯಲ್ಲಿ 184 ಯೂನಿಟ್ ಉಚಿತ ಬಳಕೆಗೆ ಅವಕಾಶ ಇದೆ. ಗ್ರಾಹಕರು ಗೃಹ ಜ್ಯೋತಿ ಯೋಜನೆಯಲ್ಲಿ ನೋಂದಣಿ ಆಗಿದ್ದಾರೆ. ಆದರೂ ಇದ್ಯಾವುದನ್ನೂ ಪರಿಗಣಿಸದ ಸಿಬ್ಬಂದಿ ಬೇಜವಾಬ್ದಾರಿಯಿಂದ ಮನ ಬಂದಂತೆ ಬಿಲ್ ನೀಡಿದ್ದು ಗ್ರಾಹಕರಿಗೆ ವಿನಾಕಾರಣ ದಂಡ ಪಾವತಿಸುವ ಸನ್ನಿವೇಶ ಎದುರಾಗಿತ್ತು. ಕೊನೆಗೆ ಗ್ರಾಹಕರು ಸೆಸ್ಕ್‌ ಕಚೇರಿಗೆ ತೆರಳಿ ಸರಿಪಡಿಸಿಕೊಂಡಿದ್ದಾರೆ.

ADVERTISEMENT

ಪಟ್ಟಣದ ದಾಸಗೌಡರ ಬೀದಿಯ ಕೆ.ಎ. ರವಿಕುಮಾರ್  ಎಂಬುವವರ ಮನೆಯ ಮೀಟರ್ ಹೊರಗಡೆಯ ಗೋಡೆಯಲ್ಲಿದೆ. ಆದರೂ ಡಿ.ಎಲ್.(ಡೋರ್ ಲಾಕ್) ಎಂದು ಬರೆದು, ಕಳೆದ ತಿಂಗಳ ಮೀಟರ್‌ ರೀಡಿಂಗ್‍ಗಿಂತ ಹೆಚ್ಚು ರೀಡಿಂಗ್ ಹಾಗೂ ಹೆಚ್ಚು ಬಿಲ್ ಬರೆದು ಕೊಟಿದ್ದರು. ನಾನು ನನ್ನ ಕೆಲಸವನ್ನೆಲ್ಲ ಬಿಟ್ಟು ಕಚೇರಿಗೆ ತೆರಳಿ ಬಿಲ್ ಸರಿಪಡಿಸಿಕೊಂಡು ಬಿಲ್ ಪಾವತಿಸಿ ಬಂದೆ’ ಎಂದು ರವಿಕುಮಾರ್‌ ಅಹವಾಲು ತೋಡಿಕೊಂಡರು.

ಪಟ್ಟಣದ ನರಸಿಂಹನಾಯಕ ನಗರದ ನಿವಾಸಿ ಡಿ.ಕೆ. ವಸಂತಯ್ಯ ಎಂಬುವವರು ಗೃಹಜ್ಯೋತಿ ಯೋಜನೆಯ ಕೆವೈಸಿ ದಾಖಲಿಸಿ ದೃಢಪಡಿಸಿಕೊಂಡು ಬಾಕಿ ಬಿಲ್ ಪಾವತಿಸಿದ್ದರು. ಆದರೆ ಈ ಬಡಾವಣೆಯ ಮೀಟರ್ ರೀಡರ್ ಸಿಬ್ಬಂದಿ 0 ನಮೂದಿಸದೆ ಹಣ ಪಾವತಿಸುವಂತೆ ಬಿಲ್ ನೀಡಿದ್ದರು. ‘ನಾನೂ ಕಚೇರಿಗೆ ತೆರಳಿ ಸರಿಪಡಿಸಿಕೊಂಡೆ.  ಸಿಬ್ಬಂದಿ ಬೇಜವಾಬ್ದಾರಿ ವರ್ತನೆಯಿಂದ ಗ್ರಾಹಕರಿಗೆ ತೀವ್ರ ತೊಂದರೆ ಆಗಿದೆ. ಇಂತಹವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ತಪ್ಪಾಗಿ ಬಿಲ್ ಬರೆದ ಮೀಟರ್ ರೀಡರ್‍ಗಳ ವಿರುದ್ಧ ಕ್ರಮ ಜರುಗಿಸಿ ಗ್ರಾಹಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಿಬೇಕು’ ಎಂದು ತಾಲ್ಲೂಕು ಪತ್ರಕರ್ತರ ಸಂಘ ಇಲಾಖೆ ಅಧಿಕಾರಿಗಳಲ್ಲಿ ವಿನಂತಿಸಿದೆ. ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕರಿಗೆ ತಪ್ಪುಬಿಲ್‍ಗಳ ದಾಖಲೆಗಳೊಂದಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಒಂದು ವಾರದಲ್ಲಿ ಕೆಲವೆಡೆ ಮೀಟರ್ ರೀಡರ್ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಗಲಾಟೆ ನೆಡೆದು ಪೊಲೀಸ್‌ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.