ಹೊಳೆನರಸೀಪುರ: ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡುತ್ತಿರುವ ಶಿಕ್ಷಕ, ಶಿಕ್ಷಕಿಯರು ಸಾಕಷ್ಟು ತೊಂದರೆ ಎದುರಿಸುತ್ತಿದ್ದು, ಸಮೀಕ್ಷೆ ಮಾಡುವವರ ಗೋಳು ಕೇಳುವವರು ಇಲ್ಲದಾಗಿದೆ ಎಂದು ಅಲವತ್ತಿಕೊಳ್ಳುತ್ತಿದ್ದಾರೆ.
ಪಟ್ಟಣದ 23 ವಾರ್ಡ್‌ಗಳ ಸಮೀಕ್ಷೆ ನಡೆಯುತ್ತಿದ್ದು, ಒಬ್ಬ ಶಿಕ್ಷಕರಿಗೆ 90 ರಿಂದ 120 ಮನೆಗಳನ್ನು ನೀಡಲಾಗಿದೆ. ಆದರೆ ಇಲಾಖೆ ಒದಗಿಸಿರುವ ಮಾಹಿತಿಯಂತೆ ಶೇ 30 ರಿಂದ ಶೇ 40 ರಷ್ಟು ಮನೆಗಳನ್ನು ಪತ್ತೆ ಮಾಡಲು ಸಾಧ್ಯವೇ ಆಗುತ್ತಿಲ್ಲ ಎಂದು ಸಮೀಕ್ಷೆದಾರರು ಅಳಲು ತೋಡಿಕೊಂಡಿದ್ದಾರೆ.
‘ನಾವು ಒಂದು ಮನೆಗೆ ಹೋದರೆ ಕುಟುಂಬದವರೆಲ್ಲರ ವಿವರ ದಾಖಲಿಸಲು ಒಮೊಮ್ಮೆ 1 ರಿಂದ 2 ಗಂಟೆ ಆಗುತ್ತದೆ. ಕೆಲವೊಮ್ಮೆ ಸರ್ವರ್ ಇಲ್ಲದೇ ಒಂದೇ ಮನೆಗೆ 2–3 ಬಾರಿ ಭೇಟಿ ನೀಡಿದರೂ ಸಾಧ್ಯ ಆಗಿಲ್ಲ’ ಎಂದು ದೂರಿದ್ದಾರೆ.
ಕುಂಟುಂಬದ ಯಜಮಾನನಿಗೆ ತಮ್ಮ ಮಕ್ಕಳು ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೋ ಇಲ್ಲವೋ ಗೊತ್ತಿರುವುದಿಲ್ಲ. ಇನ್ನು ಕೆಲವರ ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿದರೆ, ಬರುವ ಮಾಹಿತಿಗೂ, ಇವರು ಹೇಳುವ ಮಾಹಿತಿಗೂ ತಾಳೆ ಆಗುವುದಿಲ್ಲ. ಇಲ್ಲಿನ ಸೀತಾವಿಲಾಸ ರಸ್ತೆಯ ಸುರೇಶ್‌ಕುಮಾರ್ ಎಂಬುವವರ ಪಡಿತರ ಚೀಟಿ ಸಂಖ್ಯೆ ನಮೂದಿಸಿದರೆ ಮನೆಯ ಯಜಮಾನ, ಅವರ ಹೆಂಡತಿ, ಮಕ್ಕಳೆಲ್ಲರ ವಯಸ್ಸು 55 ವರ್ಷ ಎಂದು ತೋರಿಸುತ್ತಿದೆ. ಎಲ್ಲರ ವಯಸ್ಸನ್ನು ಆಧಾರ್ ಕಾರ್ಡ್ ಆಧಾರದಲ್ಲಿ ನಮೂದಿಸಿ ಎಂದರೆ, ಅದಕ್ಕೆ ಅವಕಾಶ ಇಲ್ಲ ಎಂದು ಸಮೀಕ್ಷೆದಾರರು ಹೇಳುತ್ತಿದ್ದಾರೆ. ಇದರಿಂದ ಬಹುತೇಕ ಮನೆಗಳ ಜನರು ಸಮೀಕ್ಷೆಗೆ ನಿರಾಕರಿಸುತ್ತಿದ್ದಾರೆ.
ಗುರಿ ತಲುಪದಿದ್ದರೆ ನೋಟಿಸ್: ನಿತ್ಯ ನಿಗದಿತ ಪ್ರಗತಿ ಸಾಧಿಸದ ಅನೇಕ ಶಿಕ್ಷಕರು ನೋಟಿಸ್ ಪಡೆದುಕೊಂಡಿದ್ದಾರೆ.
ತಾಲ್ಲೂಕಿನಲ್ಲಿ 55 ಸಾವಿರ ಮನೆಗಳಿದ್ದು, 504 ಸಮೀಕ್ಷೆದಾರರು, ಸಮೀಕ್ಷೆಗೆ ನಿಯೋಜನೆ ಮಾಡಲಾಗಿದೆ. ಸಮೀಕ್ಷೆದಾರರಿಗೆ ₹ 5 ಸಾವಿರ ಹಾಗೂ ಪ್ರತಿ ಮನೆಗೆ ₹100 ಸೇವಾ ಶುಲ್ಕನೀಡಲಾಗುತ್ತಿದ್ದು, ಆ್ಯಪ್ ಹಾಗೂ ಇಂಟರ್‌ನೆಟ್ ಸಮಸ್ಯೆಯಿಂದ ಗುರಿ ತಲುಪಲು ಸಾಧ್ಯ ಆಗುತ್ತಿಲ್ಲ. ನಿಗದಿತ ಗುರಿ ತಲುಪದೇ ಇರುವುದಕ್ಕೆ ಹಲವರಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಸಮೀಕ್ಷೆದಾರರು ದೂರುತ್ತಿದ್ದಾರೆ.
ತಹಶೀಲ್ದಾರ್‌ಗೆ ಶಿಕ್ಷಕರ ಮನವಿ
ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಶಿಕ್ಷಕರಿಗೆ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವಂತೆ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಲಿಂಗ ನೇತೃತ್ವದಲ್ಲಿ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಅವರಿಗೆ ಈಚೆಗೆ ಮನವಿ ಸಲ್ಲಿಸಲಾಗಿದೆ.
ಸಮೀಕ್ಷೆದಾರರಿಗೆ ನೂತನ ತಂತ್ರಜ್ಞಾನ ಅಳವಡಿಸಿ, ಕಾಗದ ರಹಿತ ಸಮೀಕ್ಷೆ ನಡೆಸಲು ಸೂಚಿಸಿದ್ದು, ಹೊಸದಾಗಿ ಆ್ಯಪ್ ನೀಡಿದೆ. ಅದರಲ್ಲಿ ಸಮೀಕ್ಷೆ ಎಲ್ಲ ಅಂಶಗಳನ್ನು ದಾಖಲಿಸುವ ಅವಕಾಶ ಕಲ್ಪಿಸಿದೆ. ಆದರೆ ಆ್ಯಪ್‌ನಲ್ಲಿ ಮಾಹಿತಿ ದಾಖಲಿಸಲು ಹಲವಾರು ಸಮಸ್ಯೆ ಎದುರಾಗುತ್ತಿವೆ. ಯುಎಚ್‍ಐಡಿ, ಮನೆಗಳ ಜಿಪಿಎಸ್ ಲೊಕೇಶನ್ ಹುಡುಕುವ ವಿಧಾನ, ವಿದ್ಯುತ್ ಆರ್‌ಆರ್ ನಂಬರ್‌ಗಳನ್ನು ಪರಿಷ್ಕರಿಸಿ, ಮನೆ ಪಟ್ಟಿ, ದೂರವಾಣಿ ಸಂಖ್ಯೆ, ಕುಟುಂಬದ ಯಜಮಾನರ ಹೆಸರು ಕೊಡುವುದರಿಂದ ಗಣತಿ ಸುಸೂತ್ರವಾಗಿ ನಡೆಸಲು ಸಹಕಾರಿ ಆಗಲಿದೆ ಎಂದು ತಿಳಿಸಿದ್ದಾರೆ.
ಸಮೀಕ್ಷೆ ಸರಿಯಾಗಿ ನಡೆಯುತ್ತಿಲ್ಲ. ಬರೀ ತಪ್ಪುಗಳಿವೆ. ನಿಖರ ಮಾಹಿತಿ ದಾಖಲಿಸಲು ಸಾಧ್ಯವೇ ಇಲ್ಲ. ಇದರಿಂದ ನಿಖರ ಮಾಹಿತಿಯ ಬದಲು, ತಪ್ಪು ಮಾಹಿತಿ ರವಾನೆ ಆಗಲಿದೆವಸಂತ್ಕುಮಾರ್, ಜನಸ್ಪಂದನ ವೇದಿಕೆ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.