ADVERTISEMENT

ಸಮುದಾಯದ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಸಿ.ಎನ್‌.ಬಾಲಕೃಷ್ಣ

ಒಕ್ಕಲಿಗರ ಸಂಘ: ಅಭ್ಯರ್ಥಿಗಳು ಭರವಸೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 16:13 IST
Last Updated 10 ಡಿಸೆಂಬರ್ 2021, 16:13 IST
ಸಿ.ಎನ್‌.ಬಾಲಕೃಷ್ಣ
ಸಿ.ಎನ್‌.ಬಾಲಕೃಷ್ಣ   

ಹಾಸನ: ‘ಸಮುದಾಯದ ಪರವಾದ ಕೆಲಸಗಳನ್ನು ಚುರುಕುಗೊಳಿಸಿ ಇನ್ನಷ್ಟು ಸೇವೆ ಮಾಡಲು ಈ ಬಾರಿಯೂ ನನ್ನ ಜತೆಗೆ ಎಸ್‌.ಎಸ್. ರಘುಗೌಡ ಅವರನ್ನು ಬೆಂಬಲಿಸಬೇಕು’ ಎಂದು ಶಾಸಕ ಹಾಗೂ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನದ ಅಭ್ಯರ್ಥಿ ಸಿ.ಎನ್‌.ಬಾಲಕೃಷ್ಣ ಮನವಿ ಮಾಡಿದರು.

ಆರಂಭದಿಂದಲೂ ಒಕ್ಕಲಿಗರ ಸಂಘದ ಎಲ್ಲಾ ಚಟುವಟಿಕೆಗಳು ಬೆಂಗಳೂರಿಗೆ ಸೀಮಿತವಾಗಿದ್ದವು. ಎರಡು ಬಾರಿ ನಿರ್ದೇಶಕನಾಗಿರುವ ನಾನು ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆಯಲ್ಲಿ 26 ಸಾವಿರ ಇದ್ದ ಸದಸ್ಯರ ಸಂಖ್ಯೆಯನ್ನು 53 ಸಾವಿರಕ್ಕೆ ಏರಿಕೆ ಮಾಡಿದ್ದೇನೆ.ಹಾಸನ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಮುದಾಯದ ಮಹಿಳಾ ಹಾಸ್ಟೆಲ್‌ಗಳುಕಾರ್ಯಾರಂಭ ಮಾಡಿವೆ. ಸೇವೆಯನ್ನೇ ಉದ್ದೇಶವಾಗಿಟ್ಟುಕೊಂಡು ಕೆಲಸ ಮಾಡಬೇಕು ಎಂಬುದು ನನ್ನ ಹಂಬಲ. ಈ ಅವಧಿಯಲ್ಲಿ ಎಲ್ಲಾ ಸಮುದಾಯಕ್ಕೂ ಅನುಕೂಲವಾಗುವಂತೆ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸಲು ಸಂಕಲ್ಪ ಮಾಡಿದ್ದೇವೆ. ಅದನ್ನೂ ಹಾಸನದಲ್ಲೇ ಮಾಡಲು ಒತ್ತಡ ಹಾಕುತ್ತೇವೆ’ ಎಂದರು.

ADVERTISEMENT

ಅಭ್ಯರ್ಥಿ ರಘುಗೌಡ ಮಾತನಾಡಿ, ‘ಸಮುದಾಯದ ಅಭಿವೃದ್ಧಿಗೆ ನಾನು ನನ್ನದೇ ಕನಸು ಇಟ್ಟುಕೊಂಡಿದ್ದೇನೆ. ಹಾಸನದಲ್ಲಿ ಒಕ್ಕಲಿಗ ಮಹಿಳಾ ಹಾಸ್ಟೆಲ್ ತೆರೆಯುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು’ ಎಂದರು.

ಆರೋಪ ನಿರಾಧಾರ– ಬಾಲಕೃಷ್ಣ: ‘ವಿಧಾನ ಪರಿಷತ್ ಚುನಾವಣೆಯಲ್ಲಿ ಗೌಪ್ಯ ಮತದಾನ ನಿಯಮ ಉಲ್ಲಂಘನೆ ಆಗಿಲ್ಲ. ಯಾರೋ ಗೊತ್ತಿಲ್ಲದೆ ಹೀಗೆ ಮಾಡಿರಬಹುದು. ಈ ಬಗ್ಗೆ ಪರಿಶೀಲಿಸಿ ನಂತರ ಪ್ರತಿಕ್ರಿಯೆ ನೀಡುವೆ. ನಾನೂ ಸಹ ಮೊಬೈಲ್ ಹೊರಗಿಟ್ಟು ಮತದಾನ ಮಾಡಿದ್ದೇನೆ. ಗೊಂದಲ ಸೃಷ್ಟಿಸುವ ಉದ್ದೇಶದಿಂದ ಕಾಂಗ್ರೆಸ್ ನವರೇ ಮತಪತ್ರ ಮುದ್ರಿಸಿ ಹೀಗೆ ಮಾಡಿರಬಹುದು. ಹಾಗಾಗಿ ಈ ಆರೋಪ ನಿರಾಧಾರ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ತಂಡ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ‘ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾಡಿದ್ದ ಆರೋಪಕ್ಕೆ ಶಾಸಕ ಸಿ.ಎನ್‌ ಬಾಲಕೃಷ್ಣ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.