
ಸಕಲೇಶಪುರ: ಜನರ ಸೇವೆಯೇ ನಮ್ಮ ನಿಜವಾದ ಗೌರವ. ಆದ್ದರಿಂದ ‘ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ’ ಎಂಬ ಕುವೆಂಪು ಅವರ ಮಾತು ಅರ್ಥಪೂರ್ಣವಾಗಿವೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಕಟ್ಟಡದ ಮುಂದುವರೆದ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ಸರ್ಕಾರಿ ನೌಕರರು ಜನಸೇವೆ ಮಾಡುವಾಗ ಯಾವುದೇ ಒತ್ತಡಗಳಿಗೆ ಒಳಗಾಗದೆ ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಕೆಲವರು ಟೀಕೆ ಮಾಡಬಹುದು, ಅಪಪ್ರಚಾರ ನಡೆಸಬಹುದು. ಆದರೆ ಜನರಿಗೆ ಮಾಡಿದ ನಿಸ್ವಾರ್ಥ ಸೇವೆಯೇ ಶಾಶ್ವತ. ಅಧಿಕಾರ ತಾತ್ಕಾಲಿಕ, ಸೇವೆ ಶಾಶ್ವತ’ ಎಂದು ಕಿವಿಮಾತು ಹೇಳಿದರು.
‘ಸರ್ಕಾರದ ಯೋಜನೆಗಳು ಕೊನೆಯ ವ್ಯಕ್ತಿವರೆಗೂ ತಲುಪಬೇಕು. ಕಡತಗಳಲ್ಲೇ ಯೋಜನೆಗಳು ಸೀಮಿತವಾಗದೆ ನೆಲಮಟ್ಟದಲ್ಲಿ ಕಾರ್ಯರೂಪಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರರೂ ಸೇವಾಭಾವದಿಂದ ಕೆಲಸ ಮಾಡಿದರೆ ಕ್ಷೇತ್ರದ ಅಭಿವೃದ್ಧಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಾಗೂರು ಕೃಷ್ಣೆಗೌಡ ಮಾತನಾಡಿ, ‘ಸಕಲೇಶಪುರ–ಆಲೂರು ವಿಧಾನಸಭಾ ಕ್ಷೇತ್ರವು ಭೌಗೋಳಿಕವಾಗಿ ವಿಸ್ತೀರ್ಣದಲ್ಲಿ ದೊಡ್ಡದಾದರೂ ಶಾಸಕರು ನಿರಂತರ ಶ್ರಮವಹಿಸಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ’ ಎಂದು ಹೇಳಿದರು.
ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ತಮ್ಮಣ್ಣಶೆಟ್ಟಿ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಿಕಾಂತ್, ಖಜಾಂಚಿ ಹೇಮಂತ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ ಮಂಜೇಗೌಡ, ಸಂಘದ ತಾಲ್ಲೂಕು ಕಾರ್ಯದರ್ಶಿ ಜಗದೀಶ್, ಗೌರವ ಕಾರ್ಯದರ್ಶಿ ಶಾಂತಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.