
ಸಕಲೇಶಪುರ: ‘ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಆನೆಮಹಲ್ ಗ್ರಾಮ ಪಂಚಾಯಿತಿಯ ಸಕಲೇಶಪುರ ಗ್ರಾಮದ ಸರ್ವೆ ನಂ.146ರಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿರಿಸಿದ್ದ ಸಿ.ಎ ನಿವೇಶನವನ್ನು ಕರ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ 30 ವರ್ಷಗಳ ಲೀಸ್ ನೀಡುವ ವಿಷಯದಲ್ಲಿ ಯಾರ ಒತ್ತಡ ಹಾಗೂ ಆಮಿಷವೂ ಇಲ್ಲ ಎಂದು ಆನೇಹಮಲ್ ಗ್ರಾ.ಪಂ. ಉಪಾಧ್ಯಕ್ಷ ವಿರೂಪಾಕ್ಷ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸಿ.ಎ. ನಿವೇಶನವನ್ನು ಖಾಸಗಿ ವ್ಯಕ್ತಿಯೊಬ್ಬರು ಕಾನೂನು ಬಾಹಿರವಾಗಿ ಸುಮಾರು 25 ವರ್ಷಗಳ ಕಾಲ ಸ್ವಂತಕ್ಕೆ ಉಪಯೋಗಿಸಿಕೊಂಡು ಆದಾಯ ಮಾಡಿಕೊಂಡಿದ್ದಾರೆ. ನಮ್ಮ ಅವಧಿಯಲ್ಲಿ ಅದನ್ನು ಪತ್ತೆ ಹಚ್ಚಿ ಅವರಿಂದ ಗ್ರಾ.ಪಂ. ವಶಕ್ಕೆ ಪಡೆದಿದ್ದೇವೆ. ಈ ನಿವೇಶನಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್, ಒಕ್ಕಲಿಗರ ಸಂಘ, ಬೌದ್ಧ ವಿಹಾರ, ಶಾದಿ ಮಹಲ್ ಹೀಗೆ ಹಲವು ಅರ್ಜಿಗಳು ಬಂದಿದ್ದವು. ಈ ಎಲ್ಲಾ ಸಂಘ ಸಂಸ್ಥೆಗಳಿಗೆ ಉಚಿತವಾಗಿ ನಿವೇಶನ ನೀಡಬೇಕಾಗಿತ್ತು. ಅದೇ ರೀತಿ ಕರ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೂ ಸಹ ಅರ್ಜಿ ಬಂದಿದ್ದು, ಆಸ್ಪತ್ರೆ ನಿರ್ಮಾಣಕ್ಕೆ 30 ವರ್ಷಕ್ಕೆ ₹50 ಲಕ್ಷಕ್ಕೆ ನೀಡಲು ಪಂಚಾಯಿತಿಯಿಂದ ನಿರ್ಣಯ ಕೈಗೊಳ್ಳಲಾಗಿದೆ’ ಎಂದರು.
ಗ್ರಾ.ಪಂ. ಸದಸ್ಯೆ ಸುಹಾರಾ ಸಲೀಂ ಮಾತನಾಡಿ, ‘ಸಿಎ ನಿವೇಶನ ನೀಡಲು ನಿರ್ಣಯ ಕೈಗೊಂಡಿರುವ ವಿಚಾರದಲ್ಲಿ ಕೆಲವರು ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಆರೋಪಗಳು ಸತ್ಯಕ್ಕೆ ದೂರವಾಗಿದೆ’ ಎಂದರು.
ಗ್ರಾ.ಪಂ.ಅಧ್ಯಕ್ಷೆ ಸುಮಾ ದೇವರಾಜ್, ಸದಸ್ಯರಾದ ಅಶ್ರಫ್, ತಮ್ಮಯ್ಯ, ವೀರಭದ್ರ, ಚಂದ್ರಮತಿ, ಮಂಜುಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.