ADVERTISEMENT

ಹೊಯ್ಸಳರ ಸ್ಮಾರಕಗಳಿಗೆ ಬೇಕಿದೆ ‘ರಕ್ಷೆ’

ಹಳೇಬೀಡಿನ ಸ್ಮಾರಕ ಸಂರಕ್ಷಣೆಗೆ ಆಗ್ರಹ: ನಗರೇಶ್ವರ ಸಂಕೀರ್ಣದ ಸಂರಕ್ಷಣೆ ಆಗತ್ಯ

ಎಚ್.ಎಸ್.ಅನಿಲ್ ಕುಮಾರ್
Published 17 ನವೆಂಬರ್ 2025, 2:47 IST
Last Updated 17 ನವೆಂಬರ್ 2025, 2:47 IST
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ   

ಹಳೇಬೀಡು: ನಿತ್ಯ ದೂರದಿಂದ ಪ್ರವಾಸಿಗರು ಬರುವ ಇಲ್ಲಿನ ಹೊಯ್ಸಳರ ಕಾಲದ ಸ್ಮಾರಕಗಳಿಗೆ ಸೂಕ್ತ ಭದ್ರತೆ ಇಲ್ಲದಂತಾಗಿದೆ. ದೆಹಲಿ ಬಾಂಬ್ ಸ್ಫೋಟದ ನಂತರ ಇಲ್ಲಿನ ಹೊಯ್ಸಳರ ಕಾಲದ ಸ್ಮಾರಕಗಳಿಗೆ ಬಂದೋಬಸ್ತ್ ಇದೆಯೇ ಎಂಬ ಪ್ರಶ್ನೆ ಇಲ್ಲಿಯ ಜನರನ್ನು ಕಾಡುತ್ತಿದೆ.

ವಿದೇಶಿ ಪ್ರವಾಸಿಗರು ಬರುವ ಹಳೇಬೀಡಿಗೆ ಇರುವ ಭದ್ರತಾ ವ್ಯವಸ್ಥೆ ಒಂದು ಮೂಲೆಗೂ ಸಾಕಾಗುವುದಿಲ್ಲ ಎಂಬ ಮಾತು ಜನರಿಂದ ಕೇಳಿ ಬರುತ್ತಿದೆ. ಹೊಯ್ಸಳೇಶ್ವರ, ಕೇದಾರೇಶ್ವರ, ಜೈನ ದೇವಾಲಯಗಳು ಹಾಗೂ ಹುಲಿಕೆರೆ ಪುಷ್ಕರಣಿಗಳಲ್ಲಿ ಮೇಟಲ್ ಡಿಟೆಕ್ಟರ್ ಇಲ್ಲ. ಹೊಯ್ಸಳೇಶ್ವರ ದೇವಾಲಯ ಆವರಣದಲ್ಲಿರುವ ಮ್ಯೂಸಿಯಂನಲ್ಲಿ ಇರುವಂತೆ ಸಮರ್ಪಕವಾದ ಸಿ.ಸಿ ಟಿವಿ ಕ್ಯಾಮೆರಾ ಇಲ್ಲಿಯ ಸ್ಮಾರಕಗಳಲ್ಲಿ ಇಲ್ಲ. ದೇವಾಲಯಗಳಿಗೆ ಇರುವ ಕ್ಯಾಮೆರಾ ಜೊತೆ ಹೆಚ್ಚುವರಿ ಅಳವಡಿಸುವ  ಅಗತ್ಯವಿದೆ.

‘ಹೊಯ್ಸಳೇಶ್ವರ ದೇವಾಲಯದ ಆವರಣ ವಿಸ್ತಾರವಾದ ಭೂಪ್ರದೇಶ ಹೊಂದಿದೆ. ಮೈದಾನ ದ್ವಾರಸಮುದ್ರ ಕೆರೆಯವರೆಗೂ ಚಾಚಿದೆ. ಯಾವ ಮೂಲೆಯಲ್ಲಾದರೂ ದುಷ್ಕರ್ಮಿಗಳು ದೇವಾಲಯ ಆವರಣ ಪ್ರವೇಶಿಸಬಹುದು. ದೇವಾಲಯ ಆವರಣದಲ್ಲಿ ಕನಿಷ್ಠ 10 ಮಂದಿಯಾದರೂ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಹಗಲು, ರಾತ್ರಿ ಪಾಳಿಯಲ್ಲಿ ಇರುವ ವ್ಯವಸ್ಥೆ ಆಗಬೇಕು. ಕೇದಾರೇಶ್ವರ, ಜೈನ ದೇವಾಲಯಗಳಲ್ಲಿ ಸಮರ್ಪಕ ಸಿ.ಸಿ ಟಿವಿ ಕ್ಯಾಮೆರಾಗಳ ಜೊತೆ ಮೆಟಲ್ ಡಿಟೆಕ್ಟರ್ ಅಳವಡಿಸಬೇಕು. ಇಲ್ಲಿಗೂ ಶಸ್ತ್ರಸಜ್ಜಿತ ಸಿಬ್ಬಂದಿ ನೇಮಕ ಆಗಬೇಕು’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಆರ್.ಮಧು. 

ADVERTISEMENT

‘ಹೊಯ್ಸಳೇಶ್ವರ ದೇವಾಲಯ ಆವರಣದಲ್ಲಿ ಪ್ರವೇಶ ದ್ವಾರದ ಸಮೀಪದಲ್ಲಿಯೇ ಸಾಕಷ್ಟು ಬಿಡಿ ವಿಗ್ರಹಗಳಿವೆ. ಆವರಣದಲ್ಲಿ ಉತ್ಖನನ ಮಾಡಿರುವ ಬ್ರಹ್ಮೇಶ್ವರ ದೇವಾಲಯ ಇದೆ. ಉತ್ಖನನ ಸ್ಮಾರಕ ಹಾಗೂ ಬಿಡಿ ವಿಗ್ರಹಗಳಿಗೆ ಬಂದೋಬಸ್ತ್ ಆಗಬೇಕಾಗಿದೆ. ಪ್ರವಾಸಿಗರು ಹಳೇಬೀಡು ಪ್ರವೇಶಿಸಿದ ಕ್ಷಣ ಪರಿಶೀಲನೆ ನಡೆಸುವಂತಾಗಿದೆ’ ಎಂದು ಮುಖಂಡ ಬಿ.ಬಿ.ಭೈರೇಗೌಡ ಹೇಳುತ್ತಾರೆ. 

‘ಕೇಂದ್ರ ಪುರಾತತ್ವ ಇಲಾಖೆ ಇತಿಹಾಸದ ಅಮೂಲ್ಯ ಸಾಕ್ಷಿಯನ್ನು ಉಳಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಪ್ರವಾಸಿ ತಾಣಗಳ ಭದ್ರತೆಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಆರ್.ಮಧು ಹೇಳಿದರು.

ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ ಹಳೇಬೀಡಿನ ನಗರೇಶ್ವರ(ಪಂಚಲಿಂಗೇಶ್ವರ) ದೇವಾಲಯಗಳ ಉತ್ಖನನ ಸ್ಮಾರಕಗಳು ಗಿಡಗಂಟಿಗಳಿಂದ ಮುಚ್ಚಿಹೋಗಿವೆ
ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ ಹಳೇಬೀಡಿನ ನಗರೇಶ್ವರ(ಪಂಚಲಿಂಗೇಶ್ವರ) ದೇವಾಲಯಗಳ ಉತ್ಖನನ ಸ್ಮಾರಕಗಳ ಕಾಂಪೌಂಡ್‌ನ ಕಬ್ಬಿಣ ಪಟ್ಟಿ ಹಾಗೂ ತಂತಿಗಳು ಕಳ್ಳರ ಪಾಲಾಗುತ್ತಿವೆ
ಟಿ.ಬಿ.ಹಾಲಪ್ಪ
ಎಚ್.ಕೆ.ಸುರೇಶ್

ಸ್ಮಾರಕಗಳಲ್ಲಿ ಮೆಟಲ್ ಡಿಟೆಕ್ಟರ್, ಹೆಚ್ಚುವರಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿ ಸ್ಮಾರಕ ಬಳಿ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯ ನಿಯೋಜನೆ ಅಗತ್ಯ ಇತಿಹಾಸದ ಅಮೂಲ್ಯ ಸಾಕ್ಷಿ ಉಳಿಸಲು ಕ್ರಮ ಕೈಗೊಳ್ಳಲು ಒತ್ತಾಯ

ಅಮಾಯಕರ ಪ್ರಾಣ ತೆಗೆಯುವ ಉಗ್ರರು ಪ್ರವಾಸಿ ತಾಣಗಳಿಗೆ ನುಸುಳುವ ಸಾಧ್ಯತೆ ಇರುತ್ತದೆ. ಸರ್ಕಾರ ಹಳೇಬೀಡಿನ ಭದ್ರತೆಯತ್ತ ಗಮನಹರಿಸಬೇಕು
ಟಿ.ಬಿ.ಹಾಲಪ್ಪ ರೈತ ಸಂಘದ ಮುಖಂಡ
ಬೇಲೂರು– ಹಳೇಬೀಡನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ. ಅಧಿವೇಶನದಲ್ಲಿ ಬೇ‌ಲೂರು ಹಳೇಬೀಡು ಅಭಿವೃದ್ದಿ ಕುರಿತು ಪ್ರಸ್ತಾಪ ಮಾಡಿದ್ದರೂ ಹಣ ಕೊಡುತ್ತಿಲ್ಲ. ಭದ್ರತೆಗೂ ಗಮನ ಹರಿಸುತ್ತಿಲ್ಲ
ಎಚ್.ಕೆ.ಸುರೇಶ್ ಬೇಲೂರು ಶಾಸಕ

ನಗರೇಶ್ವರ ಸ್ಮಾರಕ ಅಧೋಗತಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮಯೂರ ಹೊಟೇಲ್ ಹಿಂಭಾಗ ಕರ್ನಾಟಕ ಪಬ್ಲಿಕ್ ಶಾಲೆಯ ಪಕ್ಕದಲ್ಲಿರುವ ಉತ್ಖನನ ಸ್ಮಾರಕ ನಗರೇಶ್ವರ (ಪಂಚಲಿಂಗೇಶ್ವರ) ಸಂಕೀರ್ಣದಲ್ಲಿ ದೊರಕಿರುವ 5 ಬೃಹತ್ ದೇವಾಲಯಗಳ ಸ್ಮಾರಕಗಳು ಗಿಡಗಂಟಿಗಳಿಂದ ಮುಚ್ಚಿಹೋಗಿವೆ. ದೇವಾಲಯದ ತಳಪಾಯ ಹಾಗೂ ಆಳೆತ್ತರದ ಗೋಡೆಗಳಿರುವ ಸ್ಮಾರಕಗಳಲ್ಲಿ ಆನೆ ಕುದುರೆ ಹಂಸಪಕ್ಷಿ ಸೈನಿಕರ ವಿಗ್ರಹ ಕೆತ್ತನೆಯ ಸಾಲುಗಳಿವೆ. ವಿಶಿಷ್ಟ ಕಲಾಕೃತಿಗಳು ಇಲ್ಲಿವೆ. ಹಿಂದೆ ಇತಿಹಾಸಕ್ತರು ನಗರೇಶ್ವರ ಸಂಕೀರ್ಣ ವೀಕ್ಷಣೆ ಮಾಡುತ್ತಿದ್ದರು. ಗಿಡಗಂಟಿಯೊಳಗೆ ಕ್ರೂರಪ್ರಾಣಿಗಳು ವಾಸವಾಗಿರಬಹುದು ಎಂಬ ಶಂಕೆಯಿಂದ ಪ್ರವಾಸಿಗರು ನಗರೇಶ್ವರದತ್ತ ಸುಳಿಯುತ್ತಿಲ್ಲ.  ಪಕ್ಕದ ಕೆಪಿಎಸ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆಯಿಂದ ದ್ವಿತೀಯ ಪಿಯುಸಿಯವರೆಗೂ 1ಸಾವಿರ ಮಕ್ಕಳು ಕಲಿಯುತ್ತಿದ್ದಾರೆ. ಮಕ್ಕಳ ಸುರಕ್ಷತೆಗಾಗಿ ಸ್ಮಾರಕ ಹಾಗೂ ಆವರಣ ಸ್ವಚ್ಜ ಆಗಬೇಕಾಗಿದೆ. ‘ನಗರೇಶ್ವರ ಸ್ಮಾರಕದ ಹಿಂಭಾಗದ ಕಾಂಪೌಂಡ್‌ನ ಕಬ್ಬಿಣದ ಪಟ್ಟಿಗಳು ಹಾಗೂ ತಂತಿಗಳು ನಾಪತ್ತೆ ಆಗುತ್ತಿವೆ. ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯವರು ಎಚ್ಚೆತ್ತುಕೊಳ್ಳದಿದ್ದರೆ ಸಂಪೂರ್ಣ ಕಾಂಪೌಂಡ್ ಹೇಳಿ ಹೆಸರಿಲ್ಲದಂತಾಗುವ ಸಾಧ್ಯತೆ ಇದೆ. ಸರ್ಕಾರದ ಹಣ ವೆಚ್ಚ ಮಾಡಿ ಉತ್ಖನನ ಮಾಡಿರುವ ಸ್ಮಾರಕಗಳನ್ನು ಉಳಿಸುವತ್ತ ಇಲಾಖೆ ಹೆಜ್ಜೆ ಇಡಬೇಕು’ ಎನ್ನುತ್ತಾರೆ ಬೂದಿಗುಂಡಿ ನಿವಾಸಿ ಮಂಜುನಾಥ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.