ADVERTISEMENT

ಎಚ್‌ಆರ್‌ಪಿ ಹಗರಣದಲ್ಲಿ ರಾಜಕಾರಣಿಗಳೂ ಭಾಗಿ: ಆರೋಪ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 15:40 IST
Last Updated 18 ಅಕ್ಟೋಬರ್ 2021, 15:40 IST
ಎ.ಮಂಜು
ಎ.ಮಂಜು   

ಹಾಸನ: ಹೇಮಾವತಿ ಜಲಾಶಯ ಯೋಜನೆ (ಎಚ್‌ಆರ್‌ಪಿ) ಮುಳುಗಡೆ ಸಂತ್ರಸ್ತರ ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ಅಧಿಕಾರಿಗಳ ಜತೆ ಭಾಗಿಯಾಗಿರುವ ರಾಜಕಾರಣಿಗಳ ವಿರುದ್ಧವೂ ಮೂರು ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಎ.ಮಂಜು ಒತ್ತಾಯಿಸಿದರು.

ಹೇಮಾವತಿ ಜಲಾಶಯ ನಿರ್ಮಾಣ ವೇಳೆ 13,500 ಸಂತ್ರಸ್ತರು ಸುಮಾರು 21 ಸಾವಿರ ಎಕರೆ ಭೂಮಿ
ಕಳೆದುಕೊಂಡಿದ್ದರು. ನಂತರದಲ್ಲಿ ಸಂತ್ರಸ್ತರಿಗೆ ಹಂಚಿಕೆ ಮಾಡಲು 25,554 ಎಕರೆ ಜಮೀನನ್ನು ವಿವಿಧ
ತಾಲ್ಲೂಕುಗಳಲ್ಲಿ ಮೀಸಲಿಡಲಾಗಿತ್ತು. ಇದರಲ್ಲಿ ಈವರೆಗೂ ಹಂಚಿಕೆಯಾಗದೆ ಸುಮಾರು 9,982 ಎಕರೆ
ಹಾಗೆಯೇ ಉಳಿದಿದೆ. ಇದನ್ನು ಬಿಟ್ಟು ಸುಳ್ಳು ದಾಖಲೆ ಸೃಷ್ಟಿಸಿ, ಕಂದಾಯ ಇಲಾಖೆ ಜಮೀನನ್ನು ಅಕ್ರಮವಾಗಿ
ಹಂಚಿಕೆ ಮಾಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದರು.

ಒಂದೊಂದು ಮುಳುಗಡೆ ಪ್ರಮಾಣ ಪತ್ರಕ್ಕೆ ಮೂರು ನಾಲ್ಕು ಬಾರಿ ಒಬ್ಬರೇ ಜಮೀನು ಮಂಜೂರು
ಮಾಡಿಸಿಕೊಂಡಿದ್ದಾರೆ. ಈ ಹಿಂದೆ ಹಾಸನದಲ್ಲಿ ಉಪವಿಭಾಗಾಧಿಕಾರಿ ಯಾಗಿದ್ದ ವಿಜಯಾ ಅವಧಿಯಲ್ಲಿ
94, ಬಿ.ಎ.ಜಗದೀಶ್ ಅವಧಿಯಲ್ಲಿ 367, ರವಿಚಂದ್ರ ನಾಯಕ್ ಅವಧಿಯಲ್ಲಿ 108, ಶ್ರೀನಿವಾಸ್‍ಗೌಡ
ಆಡಳಿತಾವಧಿಯಲ್ಲಿ 590 ಕಡತಗಳು ವಿಲೇವಾರಿಯಾಗಿವೆ ಎಂದು ತಿಳಿಸಿದರು.

ADVERTISEMENT

17 ತಹಶೀಲ್ದಾರ್‌ಗಳು, 38 ಜನ ಡಿ ಗ್ರೂಪ್ ನೌಕರರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಇವರಲ್ಲಿ
ಕೆಲವರು ಈಗಾಗಲೇ ಜೈಲು ಸೇರಿದ್ದಾರೆ. ಅಧಿಕಾರಿಗಳ ಜೊತೆ ಕೆಲ ಮಾಜಿ ಸಚಿವರು, ಹಾಲಿ ಶಾಸಕರ ಕೈವಾಡ
ಇದೆ. ತಮ್ಮ ಸಂಬಂಧಿಗಳಿಗೆ ಜಮೀನು ಮಂಜೂರು ಮಾಡಿಸಿದ್ದಾರೆ. ಆ ಫಲಾನುಭವಿಗಳು ಯಾರು ಎಂಬುದು
ಕೂಡ ತನಿಖೆಯಲ್ಲಿ ಹೊರ ಬರಬೇಕು ಎಂದು ಒತ್ತಾಯಿಸಿದರು.

ಎಚ್‌ಆರ್‌ಪಿ ಹಗರಣದ ಅಂದಾಜು ₹ 500 ಕೋಟಿ. ಹೀಗಾಗಿ ಮುಖ್ಯಮಂತ್ರಿ, ಕಂದಾಯ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ. ನಿಗದಿಯಾಗಿದ್ದ
ಭೂಮಿ ಅರ್ಹರಿಗೆ ಸಿಗಬೇಕು. ಅಕ್ರಮ ಎಸಗಿ ಜಮೀನು ಪಡೆದಿರುವವರಿಗೆ ಶಿಕ್ಷೆಯಾಗಬೇಕು. ಮೀಸಲು ಜಾಗ
ಅಲ್ಲದೆ ಒಟ್ಟಾರೆ ಸುಮಾರು 42 ಸಾವಿರ ಎಕರೆಯನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಇದರಲ್ಲಿ
ಭಾಗಿಯಾಗಿರುವ ಎಲ್ಲರಿಗೂ ಶಿಕ್ಷೆಯಾಗಬೇಕು. ಈ ಸಂಬಂಧ ಶೀಘ್ರವೇ ಸಿ.ಎಂ ಹಾಗೂ ಸಂಬಂಧಪಟ್ಟ
ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.

ಗಂಗೂರು ಜೀತ ವಿಮುಕ್ತರಿಗೆ ಭೂಮಿ ಮಂಜೂರು ವಿಚಾ ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ನನ್ನ ಅವಧಿಯಲ್ಲೇ ಸಕಲೇಶಪುರದಲ್ಲಿ ಅವರಿಗೆ ಭೂಮಿ ನೀಡಲಾಗಿತ್ತು. ಆದರೆ, ಮೀಸಲು ಅರಣ್ಯದಲ್ಲಿ ಜಮೀನು ಕೊಡಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.