
ಹೊಳೆನರಸೀಪುರ: ತಾಲ್ಲೂಕಿನ ಕಲ್ಲೊಡೆಬಾರೆ ಕಾವಲಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತಡೆಯಲು ಸರ್ಕಾರ ಎಸ್.ಐ.ಟಿ. ರಚಿಸಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಆಗ್ರಹಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು, ಕಲ್ಲೊಡೆಬಾರೆಕಾವಲಿನಲ್ಲಿ ಎಂ.ಎ. ರವಿಕುಮಾರ್ ಅವರು ಕ್ರಷರ್ ತೆರೆದಿದ್ದು, 70 ಸಾವಿರ ಟನ್, ನಿಖಿಲ್ ಮೆಟಲ್‌ನವರು 20,188, ಸ್ಟೋನ್ ಎಂ ಸ್ಯಾಂಡ್‌ನವರು 30,926 ಟನ್ ಎಂ. ಸ್ಯಾಂಡ್ ಮತ್ತು ಜೆಲ್ಲಿ ಸಾಗಿಸಿದ್ದಾರೆ ಎಂದು ಹೇಳಿದರು.
ಇದರಿಂದಾಗಿ ಸುತ್ತಲಿನ ಹಳ್ಳಿಗಳಿಗೆ ಹೋಗುವ ರಸ್ತೆಗಳು, ಪರಿಶಿಷ್ಟ ಜಾತಿಯವರ ಜಮೀನು ಹಾಳಾಗಿವೆ. ಒಂದು ವರ್ಷದಲ್ಲಿ ನಿಖಿಲ್ ಮೆಟಲ್‌ನವರು 20 ಸಾವಿರ ಮೆಟ್ರಿಕ್ ಟನ್‌ಗೆ ಪರವಾನಗಿ ಪಡೆದಿದ್ದು, ಎಂ.ಎ. ರವಿಕುಮಾರ್ 7 ಸಾವಿರ ಟನ್‌ಗೆ, ಇವರ ಸಂಬಂಧಿ ಜಗದೀಶ್ 5 ಸಾವಿರ ಟನ್‌ಗೆ ಪರವಾನಗಿ ಪಡೆದು 70 ಸಾವಿರ ಟನ್ ಸಾಗಿಸಿದ್ದಾರೆ. ಇದು ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ. ಇಂದಿಗೂ ಕಲ್ಲೊಡೆಬಾರೆ ಕಾವಲಿನಲ್ಲಿ ಇವರು ಅಕ್ರಮ ಗಣಿಗಾರಿಕೆ ಮುಂದುವರಿಸಿದ್ದಾರೆ ಎಂದರು.
ರೇವಣ್ಣ ಅವರಿಗಿಂತ ಮೊದಲು ಮಾತನಾಡಿದ ಅರಕಲಗೂಡು ಶಾಸಕ ಎ. ಮಂಜು, ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಕಾವಲುಗಳು ಎಂದು ಜಾಗ ಮೀಸಲಿಟ್ಟು, ಅಲ್ಲಿ ದನಕರುಗಳನ್ನು ಮೇಯಲು ಬಿಡುತ್ತಿದ್ದರು. ಇದೂ ಅಂಥದ್ದೇ ಕಲ್ಲೊಡೆಬಾರೆ ಕಾವಲು. ಅಂತಹ ಜಾಗದಲ್ಲಿ ಕ್ರಷರ್ ಮತ್ತು ಕ್ವಾರಿಗೆ ಅನುಮತಿ ನೀಡಿದ್ದಾರೆ. ಇದು ತಪ್ಪು ಎಂದರು.
ಈ ಕ್ರಷರ್‌ಗಳಿಗೆ 2019 ರಲ್ಲಿ ₹ 1,07,45,000 ದಂಡ ವಿಧಿಸಿದ್ದು, ಇದರಲ್ಲಿ ₹ 55 ಲಕ್ಷ ಪಾವತಿಸಿದ್ದಾರೆ. ಮತ್ತೊಂದು ಕ್ರಷರ್‌ಗೆ ₹ 1,73,12,000 ದಂಡ ವಿಧಿಸಿದ್ದು, ಅದರಲ್ಲಿ ₹ 84 ಲಕ್ಷ ಮಾತ್ರ ಪಾವತಿಸಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳೇ ಉತ್ತರಿಸಿದ್ದಾರೆ. ದಂಡ ಬಾಕಿ ಉಳಿಸಿಕೊಂಡಿದ್ದರೂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇನ್ನೂ ಅಲ್ಲಿ ಕ್ರಷರ್ ನಡೆಸಲು ಬಿಟ್ಟಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು.
ಮಂಜು ಮತ್ತು ರೇವಣ್ಣ ಅವರ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪರವಾಗಿ ಉತ್ತರಿಸಿದ ಸಚಿವ ಚಲುವರಾಯಸ್ವಾಮಿ, ದಂಡ ವಸೂಲಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಬರೀ ದಂಡ ವಸೂಲಿ ಮಾಡಿದರೆ ಆಗಲ್ಲಿ. ಅಕ್ರಮವಾಗಿ ನಡೆಯುತ್ತಿರುವುದನ್ನು ತಡೆಯಬೇಕು ಎಂದರು. ಅಕ್ರಮವಾಗಿದ್ದರೆ ಖಂಡಿತ ನಿಲ್ಲಿಸುತ್ತೇವೆ ಎಂದು ಸಚಿವರು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.