ADVERTISEMENT

ಹೆತ್ತೂರು | ನಿರಂತರ ಮಳೆ: ನದಿ, ತೊರೆಗಳಲ್ಲಿ ನೀರು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 14:51 IST
Last Updated 22 ಜುಲೈ 2024, 14:51 IST
ಹೆತ್ತೂರು-ಹಾಡ್ಲಹಳ್ಳಿ ಗ್ರಾಮ ಸಂರ್ಪಕಿಸುವ ರಸ್ತೆ ಮಧ್ಯೆ ಬಿದ್ದ ಮರ
ಹೆತ್ತೂರು-ಹಾಡ್ಲಹಳ್ಳಿ ಗ್ರಾಮ ಸಂರ್ಪಕಿಸುವ ರಸ್ತೆ ಮಧ್ಯೆ ಬಿದ್ದ ಮರ   

ಹೆತ್ತೂರು: ಹತ್ತು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತೊರೆ, ತೋಡುಗಳು ತುಂಬಿ ಹರಿದಿವೆ. ಸೋಮವಾರ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದು, ಮನೆಗಳಿಗೆ ಹಾನಿಯಾಗಿದೆ.

ಅತಿಯಾದ ಮಳೆ, ಗಾಳಿಗೆ ಹೋಬಳಿಯ ಚಂಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌವಳ್ಳಿ ಗ್ರಾಮದ ಕಾರ್ಯಪ್ಪ, ನಾಗನಹಳ್ಳಿ ಗ್ರಾಮದ ಬಸವಯ್ಯ, ಚಂಗಡಿಹಳ್ಳಿ ಜಯಮ್ಮ, ಈರಯ್ಯ, ಹಾರಳ್ಳಿ ಗ್ರಾಮದ ಪುಟ್ಟರಾಜ ಅವರ ಮನೆ ಗೋಡೆ ಕುಸಿದಿದೆ. ಉಳಿದಿರುವ ಗೋಡೆ ಸಹ ಬೀಳುವ ಸ್ಥಿತಿಯಲ್ಲಿವೆ, ಸ್ಥಳಕ್ಕೆ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ ರಸಿಕ್, ಪಿಡಿಒ ಸುರೇಶ್, ಕಾರ್ಯದರ್ಶಿ ಬಸವರಾಜು ಭೇಟಿ ನೀಟಿ ಪರಿಶೀಲಿಸಿದರು.

ನಾಲ್ಕು ದಿನದಿಂದ ಭಾರಿ ಗಾಳಿ ಬೀಸುತ್ತಿದ್ದು, ಕಾಫಿ, ಅಡಿಕೆ, ಕಾಳುಮೆಣಸು, ಏಲಕ್ಕಿ ಗಿಡಗಳು ಮುರಿದು ಬಿದ್ದಿವೆ. ಹೆತ್ತೂರು- ಹಾಡ್ಲಹಳ್ಳಿ ರಸ್ತೆ ಮಧ್ಯೆ ಮರ ಬಿದ್ದು ಕೆಲ ಕಾಲ ಸಂಚಾರ ಸ್ಥಗಿತವಾಗಿತ್ತು. ಮರ ಕತ್ತರಿಸಿ ವಾಹನ ಸಂಚಾರ ಆರಂಭಿಸಲಾಗಿತ್ತು.

ADVERTISEMENT

ಯಸಳೂರು, ಹೆತ್ತೂರು ಸೇರಿದಂತೆ ಪಶ್ಚಿಮಘಟ್ಟದ ಅಂಚಿನ ಗ್ರಾಮಗಳಾದ ಕಾಗಿನಹರೆ, ಹೊಂಗಡಹಳ್ಳ, ಯಡೇಕುಮರಿ, ಬಿಲ್ಲೆ, ವನಗೂರು, ಹಿಜನಹಳ್ಳಿ, ಮೊಗನಹಳ್ಳಿ, ಹೊಸಹಳ್ಳಿ, ಮಂಚಳ್ಳಿ, ಉಚ್ಚಂಗಿ, ಹುಲ್ಲಗತ್ತೂರು ಸೇರಿದಂತೆ ಹಲವು ಭಾಗದಲ್ಲಿ ಸೂರ್ಯನ ಮುಖವನ್ನೇ ಕಾಣಲಾಗುತ್ತಿಲ್ಲ. ಬಿಡುವಿಲ್ಲದಂತೆ ಬೀಳುವ ಮಳೆಯಿಂದಾಗಿ ವಾತಾವರಣದಲ್ಲಿ ತಣ್ಣನೆಯ ಚಳಿಯೂ ಆವರಿಸಿಕೊಂಡಿದೆ.

ಇಡೀ ರಾತ್ರಿ ಮಳೆ ರಭಸವಾಗಿ ಸುರಿದು, ತೊರೆ ತೋಡುಗಳಲ್ಲಿ ನೀರು ಏರತೊಡಗಿತ್ತು. ಹೇಮಾವತಿ ಉಪ ನದಿಗಳಾದ ಐಗೂರು, ಯಡಕೇರಿ, ಪಾಲಹಳ್ಳಿ ಹೊಳೆಗಳಲ್ಲಿ ನೀರು ರಭಸವಾಗಿ ಹರಿಯತೊಡಗಿದೆ. ಮಳೆ ಇದೇ ರೀತಿ ಮುಂದುವರಿದರೆ ಅಪಾಯ ತಪ್ಪಿದಲ್ಲ ಎಂಬ ಭೀತಿ ಮಲೆನಾಡು ಜನರನ್ನು ಕಾಡುತ್ತಿದೆ.

ಚಂಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಚೌವಳ್ಳಿ ಗ್ರಾಮದ ಕಾರ್ಯಪ್ಪ ಅವರ ಮನೆ ಸೋಮವಾರ ಕುಸಿದಿದೆ
ಹಾಡ್ಲಹಳ್ಳಿ ಸಮೀಪ ವಾಲಿರುವ ವಿದ್ಯುತ್ ಕಂಬ
ಹೆತ್ತೂರು ಸಮೀಪದ ಯಡಕೇರಿ ಗ್ರಾಮದ ಶ್ರೀಕಾಂತ್ ಅವರ ತೋಟದಲ್ಲಿ ಕಾಫಿ ಗಿಡಗಳು ಮುರಿದು ಬಿದ್ದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.